T20 League  
ಕ್ರಿಕೆಟ್

ಯುರೋಪಿಯನ್ T20 League​ಗೆ ಗ್ಲೋಬಲ್ ಗ್ಲಾಮರ್: ರೋಟರ್‌ಡ್ಯಾಮ್ ತಂಡಕ್ಕೆ ರೋಡ್ಸ್–ಫಾಫ್–ಕ್ಲಾಸೆನ್ ಎಂಟ್ರಿ!

ರೊಟರ್‌ ಡ್ಯಾಮ್: ವಿಶ್ವ ಕ್ರಿಕೆಟ್ ಮೈದಾನದಲ್ಲಿ ಮಿಂಚಿದ್ದ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರರು ಈಗ ಯುರೋಪಿಯನ್ ಕ್ರಿಕೆಟ್‌ ನಲ್ಲೂ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ನೆದರ್ಲ್ಯಾಂಡ್ಸ್‌ ನ ರೊಟರ್‌ ಡ್ಯಾಮ್ ಮೂಲದ, ಐಸಿಸಿ ಅನುಮೋದಿತ ಯುರೋಪಿಯನ್ ಟಿ20(T20 League) ಪ್ರೀಮಿಯರ್ ಲೀಗ್ (ಇಟಿಪಿಎಲ್)ನ ಐದನೇ ಫ್ರಾಂಚೈಸಿಯನ್ನು ಜಾಂಟಿ ರೋಡ್ಸ್, ಫಾಫ್ ಡು ಪ್ಲೆಸಿಸ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರು ಜಂಟಿಯಾಗಿ ಖರೀದಿಸುವ ಮೂಲಕ ಮೈದಾನದ ಆಚೆಗೂ ತಮ್ಮ ಕ್ರಿಕೆಟ್ ಕ್ರೀಡೆ ಮೇಲಿನ ಒಲವನ್ನು ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಈ ಮೂವರು ತಾರೆಯರು ಒಂದು ಒಕ್ಕೂಟವನ್ನು ರಚಿಸಿಕೊಂಡು ತಂಡದ ಮಾಲೀಕತ್ವ ವಹಿಸಿಕೊಂಡಿದ್ದು, ಮಧುಕರ್ ಶ್ರೀ ಅವರು ಮ್ಯಾನೇಜಿಂಗ್ ಪಾರ್ಟ್ ನರ್ ಆಗಿ ಈ ತಂಡವನ್ನು ಸೇರಿಕೊಂಡಿದ್ದಾರೆ. ಐಸಿಸಿ ಮಾನ್ಯತೆ ಪಡೆದ ಯುರೋಪಿನ ಮೊದಲ ಅಧಿಕೃತ ಟಿ20 ಲೀಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಟಿಪಿಎಲ್, ಈ ಹಿರಿಯ ಆಟಗಾರರ ಪ್ರವೇಶದೊಂದಿಗೆ ಭಾರಿ ಕುತೂಹಲ ಮೂಡಿಸಿದೆ. ಯುರೋಪಿಯನ್ ಟಿ20 ಲೀಗ್‌ ನ ಚೊಚ್ಛಲ ಸೀಸನ್ ಆಗಸ್ಟ್ 26 ರಿಂದ ಸೆಪ್ಟೆಂಬರ್ 20, 2026 ರವರೆಗೆ ನಡೆಯಲಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ರೊಟರ್‌ ಡ್ಯಾಮ್ ತಂಡವೂ ಸೇರಿದಂತೆ ಗ್ಲ್ಯಾಸ್ಗೋ, ಆಮ್‌ ಸ್ಟರ್‌ ಡ್ಯಾಮ್, ಎಡಿನ್‌ ಬರ್ಗ್, ಡಬ್ಲಿನ್ ಮತ್ತು ಬೆಲ್‌ ಫಾಸ್ಟ್ ಎಂಬ ಆರು ನಗರಗಳ ತಂಡಗಳು ಕಣಕ್ಕಿಳಿಯಲಿವೆ. ಇದು ಯುರೋಪಿನ ಕ್ರೀಡಾ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ.
ಈ ಕುರಿತು ಮಾತನಾಡಿದ ದಿಗ್ಗಜ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರು, "ಇಟಿಪಿಎಲ್ ಒಂದು ಅತ್ಯುತ್ತಮ ಅವಕಾಶವನ್ನು ಸೃಷ್ಟಿಸಿದೆ. ಇತ್ತೀಚಿನ ಐಸಿಸಿ ಪಂದ್ಯಾವಳಿಗಳಲ್ಲಿ ಯುರೋಪಿನ ಕ್ರಿಕೆಟ್ ಸಾಮರ್ಥ್ಯದ ಝಲಕ್ ಅನ್ನು ನಾವು ಈಗಾಗಲೇ ಜಾಗತಿಕ ಮಟ್ಟದಲ್ಲಿ ಕಂಡಿದ್ದೇವೆ. ಈಗ ಈ ಪ್ರದೇಶಕ್ಕೆ ಬೇಕಿರುವುದು ಈ ಕ್ರಿಕೆಟ್ ವ್ಯವಸ್ಥೆಯನ್ನು ಒಂದುಗೂಡಿಸುವ ಮತ್ತು ಎತ್ತರಕ್ಕೆ ಕೊಂಡೊಯ್ಯುವ ಬಲಿಷ್ಠ ವಾಣಿಜ್ಯ ಚೌಕಟ್ಟು. ಇಟಿಪಿಎಲ್ ಅದನ್ನು ನಿಖರವಾಗಿ ಒದಗಿಸುತ್ತಿದ್ದು, ಪ್ರತಿಭೆಗಳನ್ನು ಗುರುತಿಸಲು, ಪೋಷಿಸಲು ಮತ್ತು ಬೆಳೆಸಲು ವೇದಿಕೆ ಕಲ್ಪಿಸುತ್ತಿದೆ. ಇದು ಅಂತಿಮವಾಗಿ ಯುರೋಪಿನಾದ್ಯಂತ ಕ್ರಿಕೆಟ್ ಕ್ರೀಡೆಯನ್ನು ಬಲಪಡಿಸಲಿದೆ. ಈ ಪಯಣದ ಭಾಗವಾಗಲು ನಾನು ಉತ್ಸುಕನಾಗಿದ್ದೇನೆ," ಎಂದು ಹೇಳಿದರು.
ತಂಡದ ನಾಯಕರೂ ಆಗಿರುವ ಫಾಫ್ ಡು ಪ್ಲೆಸಿಸ್ ಅವರು ಮಾತನಾಡಿ, "ಇಟಿಪಿಎಲ್‌ ನಲ್ಲಿ ಫ್ರಾಂಚೈಸಿಯನ್ನು ಖರೀದಿಸಲು ಜಾಂಟಿ ಮತ್ತು ಕ್ಲಾಸಿ (ಕ್ಲಾಸೆನ್) ಅವರೊಂದಿಗೆ ಕೈಜೋಡಿಸಿರುವುದು ವಿಶೇಷವೆನಿಸಿದೆ. ತಂಡದ ಮಾಲೀಕತ್ವ ಹೊಂದುವ ನಿಟ್ಟಿನಲ್ಲಿ ಇದು ನನ್ನ ಮೊದಲ ಹೆಜ್ಜೆಯಾಗಿದೆ. ಯುರೋಪಿಯನ್ ಕ್ರಿಕೆಟ್ ವೇಗವಾಗಿ ಬೆಳೆಯುತ್ತಿರುವ ಈ ಸಮಯದಲ್ಲಿ ಇದು ಸರಿಯಾದ ನಿರ್ಧಾರವಾಗಿದೆ ಎಂದಿದ್ದಾರೆ.
ಇಟಿಪಿಎಲ್‌ನ ಸಹ- ಮಾಲೀಕ ಅಭಿಷೇಕ್ ಬಚ್ಚನ್ ಮಾತನಾಡಿ, "ಕ್ರಿಕೆಟ್ ಲೋಕದ ಮೂವರು ದಿಗ್ಗಜರನ್ನು ಇಟಿಪಿಎಲ್ ಫ್ರಾಂಚೈಸಿ ಮಾಲೀಕತ್ವಕ್ಕೆ ಸ್ವಾಗತಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಜಾಗತಿಕವಾಗಿ ಗೌರವಿಸಲ್ಪಡುವ ಇಂತಹ ವ್ಯಕ್ತಿಗಳು ಲೀಗ್‌ ನ ಉತ್ತಮ ಉದ್ದೇಶದ ಮೇಲೆ ಹೂಡಿಕೆ ಮಾಡುತ್ತಿರುವುದು ಲೀಗ್‌ ನ ವೇಗ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ರಾಯಲ್ ಡಚ್ ಕ್ರಿಕೆಟ್ ಅಸೋಸಿಯೇಷನ್ (ಕೆ ಎನ್ ಸಿ ಬಿ) ಸಿಇಒ ಹುಯಿಬ್ ವ್ಯಾನ್ ವಾಲ್ಸೆಮ್ ಮಾತನಾಡಿ, "ಜಾಂಟಿ ರೋಡ್ಸ್, ಫಾಫ್ ಡು ಪ್ಲೆಸಿಸ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರು ರೊಟರ್‌ ಡ್ಯಾಮ್ ತಂಡದ ಮಾಲೀಕರಾಗಿ ಆಗಮಿಸಿರುವುದು ನೆದರ್ಲ್ಯಾಂಡ್ಸ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಡಚ್ ಕ್ರಿಕೆಟ್ ವ್ಯವಸ್ಥೆಯು ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಕೆಎನ್‌ಸಿಬಿ ಮೊದಲಿನಿಂದಲೂ ನಂಬಿಕೊಂಡು ಬಂದಿದೆ. ಇಂತಹ ಅನುಭವಿ ಕ್ರಿಕೆಟ್ ಗಣ್ಯರ ಪಾಲ್ಗೊಳ್ಳುವಿಕೆಯು ಇಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಅನ್ನು ಉತ್ತೇಜಿಸುವುದಲ್ಲದೆ, ಈ ಪ್ರದೇಶಕ್ಕೆ ಉತ್ತಮ ಪ್ರತಿಭೆಗಳನ್ನು ಆಕರ್ಷಿಸಲು ನೆರವಾಗಲಿದೆ ಎಂದರು. ಬಳಿಕ ಇಟಿಪಿಎಲ್​​ನ ಸಹ- ಸಂಸ್ಥಾಪಕ ಧೀರಜ್ ಮಲ್ಹೋತ್ರಾ ಮಾತನಾಡಿದರು,(ಏಜೆನ್ಸೀಸ್​).