ಗ್ಲೋಬಲ್ ಚೆಸ್ ಲೀಗ್ GCL: ಐದು ಬಾರಿ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್‌ಗೆ ಸೋಲಿನ ಆಘಾತ
ಬೆಂಗಳೂರು: ವಿಶ್ವದ ಅತ್ಯುತ್ತಮ ಚದುರಂಗ ತಾರೆಯರ ನಡುವಿನ ರೋಚಕ ಪಂದ್ಯಗಳಿಗೆ ಉದ್ಯಾನ ನಗರಿ ಶನಿವಾರ ಸಾಕ್ಷಿಯಾಯಿತು. ಹಾಲಿ ಚಾಂಪಿಯನ್ ಅಲ್‌ಪೈನ್ ಪೈಪರ್ಸ್, ಗ್ಯಾಂಜೆಸ್ ಗ್ರಾಂಡ್ ಮಾಸ್ಟರ್ಸ್ ಹಾಗೂ ಪೈಯರ್ಸ್ ಅಮೆರಿಕನ್ ಗ್ಯಾಂಬಿಟ್ಸ್ ತಂಡಗಳು ನಾಲ್ಕನೇ ಆವೃತ್ತಿಯ ಗ್ಲೋಬಲ್ ಚೆಸ್ ಲೀಗ್‌ನಲ್ಲಿ (GCL) ಗೆಲುವಿನ ಆರಂಭ ಕಂಡಿವೆ. ಎರಡು ಬಾರಿಯ ಚಾಂಪಿಯನ್ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ಮೊದಲ ದಿನವೇ ಸೋಲಿನ ರುಚಿ ಕಂಡಿತು.
ಟೆಕ್ ಮಹೀಂದ್ರಾ ಮತ್ತು ಫಿಡೆ ಸಹಯೋಗದಲ್ಲಿ ನಗರದ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಅದ್ದೂರಿ ಆರಂಭ ಕಂಡ ಚೆಸ್ ಟೂರ್ನಿಯಲ್ಲಿ ನೂರಾರು ಕ್ರೀಡಾಭಿಮಾನಿಗಳು ಕಣ್ತುಂಬಿಕೊಂಡರು. ಟೂರ್ನಿಯ ಉದ್ಘಾಟನಾ ದಿನದ ಪಂದ್ಯದಲ್ಲಿ ವಿಶ್ವ ನಂ.1 ಹಾಗೂ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಸಾರಥ್ಯದ ಅಪ್‌ಪೈನ್ಸ್ ಪೈಪರ್ಸ್ ತಂಡವು ಮುಂಬೈ ಮಾಸ್ಟರ್ಸ್ ವಿರುದ್ಧ 10-8 ಅಂತರದ ಜಯ ದಾಖಲಿಸಿತು.
ಮೊದಲೆರಡು ಆವೃತ್ತಿಯ ಚಾಂಪಿಯನ್ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ತಂಡ 9-10 ಅಂತರದಿಂದ ಗ್ಯಾಂಜೆಸ್ ಗ್ರಾಂಡ್‌ಮಾಸ್ಟರ್ಸ್ ಎದುರು ವೀರೋಚಿತ ಸೋಲು ಅನುಭವಿಸಿತು. ದಿನದ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಆರ್.ಅಶ್ವಿನ್ ಸಹ ಮಾಲೀಕತ್ವದ ಅಮೆರಿಕನ್ ಗ್ಯಾಂಬಿಟ್ಸ್ ತಂಡ 10-4ರಿಂದ ಪಿಬಿಜಿ ಅಲಸ್ಕನ್ ನೈಟ್ಸ್ ವಿರುದ್ಧ ಸುಲಭ ಗೆಲುವು ಒಲಿಸಿಕೊಂಡಿತು. ದಿನದ ಕೊನೇ ಪಂದ್ಯದಲ್ಲಿ ಅಮೆರಿಕನ್ ಗ್ಯಾಂಬಿಟ್ಸ್ ತಂಡವು ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ಎದುರು 5-14ರಿಂದ ಪರಾಭವಗೊಂಡಿತು.
ಟಾಸ್ ಪ್ರಕ್ರಿಯೆ ಮೂಲಕ ಯಾವ ತಂಡ ಯಾವ ಕಾಯಿಯೊಂದಿಗೆ ಆಡಲಿದೆ ಎಂಬುದು ನಿರ್ಧರಿಸಲಾಗುತ್ತದೆ. ನಂತರ ಕಪ್ಪು ಕಾಯಿಯೊಂದಿಗೆ ಆಡುವ ತಂಡ ಪ್ರತಿ ಗೆಲುವಿಗೆ 4 ಪಡೆದರೆ, ಬಿಳಿ ಕಾಯಿಯೊಂದಿಗೆ ಆಡುವ ತಂಡ ಪ್ರತಿ ಜಯಕ್ಕೆ 3 ಅಂಕ ಪಡೆಯಲಿದೆ. ಪಂದ್ಯ ಡ್ರಾಗೊಂಡರೆ ತಲಾ 1 ಅಂಕ ನೀಡಲಾಗುತ್ತದೆ.
ದಿನದ ಮೊದಲ ಪಂದ್ಯದಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿ ಚಾಂಪಿಯನ್ ಹಾಗೂ ಗ್ರಾಂಡ್ ಮಾಸ್ಟರ್ ಜವೋಖಿರ್ ಸಿಂದಾರೋವ್ 57 ನಡೆಗಳಲ್ಲಿ ಅಲಸ್ಕನ್ ನೈಟ್ಸ್ ತಂಡದ ಐದು ಬಾರಿ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್‌ಗೆ ಸೋಲಿನ ಆಘಾತ ನೀಡಿ, ಅಮೆರಿಕನ್ ಗ್ಯಾಂಬಿಟ್ಸ್‌ಗೆ ಮುನ್ನಡೆ ಒದಗಿಸಿದ್ದರು.
ವರ್ಷದ ನಂತರ ಅಲ್‌ಪೈನ್ ಪೈಪರ್ಸ್ ತಂಡಕ್ಕೆ ಮರಳಿದ ಮಾಜಿ ವಿಶ್ವ ಚಾಂಪಿಯನ್ ಕಾರ್ಲ್‌ಸೆನ್ ಐಕಾನ್ ಪಂದ್ಯದಲ್ಲಿ ಮುಂಬೈ ಮಾಸ್ಟರ್ಸ್ ಮ್ಯಾಕ್ಸಿಮ್ ವಾಚಿಯರ್ ಲಾಗ್ರೇವ್ ಎದುರು ಡ್ರಾಗೆ ತೃಪ್ತಿಪಟ್ಟರು. ಸೂಪರ್‌ಸ್ಟಾರ್ ಪುರುಷರ ಪಂದ್ಯದಲ್ಲಿ ಮುಂಬೈನ ಎಂ. ಪ್ರಣೇಶ್, ನೆದರ್ಲ್ಯಾಂಡ್ಸ್‌ನ ಅನೀಶ್ ಗಿರಿ ಅವರನ್ನು ಸೋಲಿಸುವ ಮೂಲಕ ಪೈಪರ್ಸ್ ಮೇಲೆ ಒತ್ತಡ ಹೇರಿದರು.
ಆದರೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ವಿದಿತ್ ಗುಜರಾತಿ, ಶಖ್ರಿಯಾರ್ ಮಮೆದ್ಯಾರೋವ್ ವಿರುದ್ಧ ಗೇಮ್ಪ್ಲೇ ಮೂಲಕ ಗೆದ್ದು ತಂಡದ ಹೋರಾಟಕ್ಕೆ ಬಲ ನೀಡಿದರು. ಬಳಿಕ ಅನುಭವಿ ಕೊನೆರು ಹಂಪಿ, ಕ್ಯಾರಿಸ್ಸಾ ಯಿಪ್‌ರನ್ನು ಸೋಲಿಸಿ ಪೈಪರ್ಸ್‌ಗೆ ಮುನ್ನಡೆ ನೀಡಿದರೆ, ಮಹಿಳಾ ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್, ಮುಂಬೈನ ಡಿ. ಹರಿಕಾ ವಿರುದ್ಧ ಸೋತರು.