14 ವರ್ಷಗಳ ಪಯಣಕ್ಕೆ ಫುಲ್​ಸ್ಟಾಪ್​! ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಸ್ಫೋಟಕ ಬ್ಯಾಟರ್​​ ಗ್ಲೆನ್​ ಮ್ಯಾಕ್ಸ್​ವೆಲ್ 
ಕ್ರಿಕೆಟ್

14 ವರ್ಷಗಳ ಪಯಣಕ್ಕೆ ಫುಲ್​ಸ್ಟಾಪ್​! ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಸ್ಫೋಟಕ ಬ್ಯಾಟರ್​​ ಗ್ಲೆನ್​ ಮ್ಯಾಕ್ಸ್​ವೆಲ್ | Glenn Maxwell

ವೇಲ್ಸ್​: ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್, ಸ್ಫೋಟಕ ಬ್ಯಾಟ್ಸ್​ಮನ್​ ಗ್ಲೆನ್ ಮ್ಯಾಕ್ಸ್‌ವೆಲ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಸದ್ಯ ಅವರ ಅಭಿಮಾನಿ ಬಳಗಕ್ಕೆ ಬಿಗ್ ಶಾಕ್ ನೀಡಿದೆ.

ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ ಆಸೀಸ್​ ಪರವಾಗಿ ಕೊನೆಯ ಪಂದ್ಯವನ್ನು ಆಡಿದ 38 ವರ್ಷದ ಬಲಗೈ ಆಟಗಾರ, ತಮ್ಮ 14 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದ ಗುಡ್​ಬೈ ಹೇಳುವುದರ ಜೊತೆಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ವಿದಾಯ ಹೇಳಿದರೂ ತಾನೂ ಫ್ರಾಂಚೈಸಿ ಕ್ರಿಕೆಟ್ ಆಡುವುದನ್ನು ಮುಂದುವರಿಸುವುದಾಗಿಯೂ ಗ್ಲೆನ್​ ಹೇಳಿದ್ದಾರೆ.

ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಅನ್ನು ಪ್ರತಿನಿಧಿಸುವ ಮ್ಯಾಕ್ಸ್​ವೆಲ್​, ಎಂದಿನಂತೆ ಟಿ20 ಲೀಗ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುವುದಾಗಿ ಭರವಸೆ ನೀಡಿದ್ದಾರೆ. 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮ್ಯಾಕ್ಸ್‌ವೆಲ್, ಆಸ್ಟ್ರೇಲಿಯಾ ಪರ 7 ಟೆಸ್ಟ್, 149 ಏಕದಿನ ಮತ್ತು 130 ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಸೇರಿದಂತೆ ಟೆಸ್ಟ್‌ನಲ್ಲಿ 26.1 ಸರಾಸರಿಯಲ್ಲಿ 339 ರನ್ ಗಳಿಸಿದ್ದಾರೆ.

ಇನ್ನು ಏಕದಿನ ಕ್ರಿಕೆಟ್​ನಲ್ಲಿ ನಾಲ್ಕು ಶತಕಗಳು ಮತ್ತು 23 ಅರ್ಧ ಶತಕಗಳನ್ನು ಒಳಗೊಂಡಂತೆ 33.8ರ ಸರಾಸರಿಯಲ್ಲಿ 3990 ರನ್ ಕಲೆಹಾಕಿದ್ದಾರೆ. ಅವರು ಐದು ಶತಕಗಳು ಮತ್ತು 12 ಅರ್ಧ ಶತಕಗಳನ್ನು ಒಳಗೊಂಡಂತೆ ಟಿ20 ಪಂದ್ಯಗಳಲ್ಲಿ 29ರ ಸರಾಸರಿಯಲ್ಲಿ 2897 ರನ್ ಗಳಿಸಿದ್ದಾರೆ. ಅವರ ಬೌಲಿಂಗ್‌ ವಿಷಯಕ್ಕೆ ಬಂದರೆ, ಟೆಸ್ಟ್‌ನಲ್ಲಿ 8, ಏಕದಿನಗಳಲ್ಲಿ 77 ಮತ್ತು ಟಿ20 ಪಂದ್ಯಗಳಲ್ಲಿ ಒಟ್ಟು 51 ವಿಕೆಟ್‌ಗಳನ್ನು ಪಡೆದಿದ್ದಾರೆ.

2015 ಮತ್ತು 2023ರ ಏಕದಿನ ವಿಶ್ವಕಪ್ ಮತ್ತು 2021ರ ಟಿ20 ವಿಶ್ವಕಪ್ ಗೆದ್ದ ಆಸೀಸ್ ತಂಡದ ಸದಸ್ಯರಾಗಿ ಗ್ಲೆನ್​ ತಂಡದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಮ್ಯಾಕ್ಸ್‌ವೆಲ್ ಒಬ್ಬ ವಿಧ್ವಂಸಕ ಬ್ಯಾಟ್ಸ್‌ಮನ್ ಎಂಬುದು ಇಡೀ ಕ್ರಿಕೆಟ್​ ಜಗತ್ತಿಗೆ ಗೊತ್ತಿದೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿರುವ ಅವರು, 2023ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಸಿಡಿಸಿದ ದ್ವಿಶತಕದ ಅಮೋಘ ಇನ್ನಿಂಗ್ಸ್ ಅವರ ಪ್ರತಿಭೆ ಮತ್ತು ವ್ಯಕ್ತಿತ್ವಕ್ಕೆ ಸಾಕ್ಷಿ ಎಂದೇ ಹೇಳಬಹುದು,(ಏಜೆನ್ಸೀಸ್).