ಮಹಿಳಾ ಕ್ರಿಕೆಟಿಗರಿಗೆ ಗುಡ್​ ನ್ಯೂಸ್​ ಕೊಟ್ಟ ಬಿಸಿಸಿಐ 
ಕ್ರಿಕೆಟ್

ಮಹಿಳಾ ಕ್ರಿಕೆಟಿಗರಿಗೆ ಗುಡ್​ ನ್ಯೂಸ್​ ಕೊಟ್ಟ ಬಿಸಿಸಿಐ: ಪಂದ್ಯದ ಶುಲ್ಕದಲ್ಲಿ ಭಾರಿ ಏರಿಕೆ! BCCI

ಪ್ರಮುಖ ಮುಖ್ಯಾಂಶಗಳು

  • ಪುರುಷರಷ್ಟೇ ಮಹಿಳಾ ಕ್ರಿಕೆಟ್ ಕ್ರೇಜ್​ ಕೂಡ ಇದೀಗ ಬೆಳೆಯುತ್ತಿದೆ
  • ಕ್ರಿಕೆಟಿಗರಾಗಲು ಅನೇಕ ಯುವತಿಯರು ಇಂದು ಮುಂದೆ ಬರುತ್ತಿದ್ದಾರೆ
  • ಮಹಿಳಾ ಕ್ರಿಕೆಟರ್​ಗಳಿಗೆ ಇದೀಗ ಬಿಸಿಸಿಐ ಒಂದು ಸಿಹಿ ಸುದ್ದಿ ನೀಡಿದೆ
  • ಮಹಿಳಾ ಕ್ರಿಕೆಟಿಗರ ಪಂದ್ಯದ ಶುಲ್ಕವನ್ನು ಬಿಸಿಸಿಐ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ
ನವದೆಹಲಿ: ಪುರುಷರಷ್ಟೇ ಮಹಿಳಾ ಕ್ರಿಕೆಟ್ ಕ್ರೇಜ್​ ಕೂಡ ಇದೀಗ ಬೆಳೆಯುತ್ತಿದೆ. ಹೀಗಾಗಿ, ಕ್ರಿಕೆಟಿಗರಾಗಲು ಅನೇಕ ಯುವತಿಯರು ಇಂದು ಮುಂದೆ ಬರುತ್ತಿದ್ದಾರೆ. ತಾನೊರ್ವ ಕ್ರಿಕೆಟರ್​ ಆಗಬೇಕೆಂಬ ಕನಸು ಹೊತ್ತು ಬರುವ ಎಲ್ಲ ಮಹಿಳಾ ಕ್ರಿಕೆಟರ್​ಗಳಿಗೆ ಇದೀಗ ಬಿಸಿಸಿಐ ( BCCI ) ಒಂದು ಸಿಹಿ ಸುದ್ದಿ ನೀಡಿದೆ. ಅದೇನೆಂದರೆ, ದೇಶೀಯ ಮಹಿಳಾ ಕ್ರಿಕೆಟಿಗರ ಪಂದ್ಯದ ಶುಲ್ಕವನ್ನು ಬಿಸಿಸಿಐ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ.
ಹೌದು, ಈ ಹಿಂದಿನ ಶುಲ್ಕಕ್ಕೆ ಹೋಲಿಕೆ ಮಾಡಿದರೆ ಸುಮಾರು 2 ಪಟ್ಟು ಹೆಚ್ಚು ಶುಲ್ಕವನ್ನು ಬಿಸಿಸಿಐ ಏರಿಕೆ ಮಾಡಿದೆ. ಈ ಒಂದು ನಿರ್ಧಾರದಿಂದಾಗಿ, ಕ್ರಿಕೆಟ್ ಅನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿರುವ ಹುಡುಗಿಯರ ಆರ್ಥಿಕ ಸ್ಥಿರತೆ ಕೂಡ ಇದೀಗ ಹೆಚ್ಚಾಗುತ್ತದೆ. ಅಲ್ಲದೆ, ಕ್ರಿಕೆಟರ್​ ಆಗಬೇಕೆಂಬ ಕನಸು ಹೊತ್ತುಕೊಂಡಿರುವವರಿಗೆ ಇದು ಉತ್ತೇಜನ ನೀಡಲಿದೆ. ಈ ಒಂದು ಹೆಚ್ಚಳವನ್ನು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಅನುಮೋದಿಸಿದೆ.
ಬಿಸಿಸಿಐ ಶುಲ್ಕ ಹೆಚ್ಚಳದ ಪ್ರಕಾರ, ಹಿರಿಯ ಮಹಿಳಾ ದೇಶೀಯ ಏಕದಿನ ಪಂದ್ಯಾವಳಿಗಳು ಮತ್ತು ಬಹು-ತಂಡ ಪಂದ್ಯಾವಳಿಗಳ ಅಂತಿಮ ತಂಡದಲ್ಲಿರುವ ಆಟಗಾರ್ತಿಯರಿಗೆ ಒಂದು ದಿನಕ್ಕೆ 50,000 ರೂ. ಸಿಗುತ್ತದೆ. ಈ ಮೊದಲು ಈ ಶುಲ್ಕ 20,000 ರೂ. ಇತ್ತು. ಇನ್ನು ಮೀಸಲು ಆಟಗಾರ್ತಿಯರಿಗೆ 25,000 ರೂ. ಪಾವತಿಸಲಾಗುತ್ತದೆ.
ದೇಶೀಯ ಟಿ20 ಪಂದ್ಯಾವಳಿಗಳಲ್ಲಿ ಅಂತಿಮ ತಂಡದಲ್ಲಿರುವ ಆಟಗಾರ್ತಿಯರಿಗೆ ದಿನಕ್ಕೆ 25,000 ರೂ. ಪಾವತಿಸಲಾಗುವುದು. ಅದೇ ರೀತಿ, ಮೀಸಲು ಆಟಗಾರ್ತಿಯರಿಗೆ ಪಂದ್ಯ ಶುಲ್ಕವಾಗಿ 12,500 ರೂ. ಪಡೆಯುತ್ತಾರೆ.
ಎಲ್ಲ ಸ್ವರೂಪಗಳಲ್ಲಿ ಆಡುವ ಉನ್ನತ ಮಟ್ಟದ ಮಹಿಳಾ ಕ್ರಿಕೆಟಿಗರು ಪ್ರತಿ ಋತುವಿಗೆ 12 ರಿಂದ 14 ಲಕ್ಷ ರೂ. ಗಳಿಸುತ್ತಾರೆ. 23 ವರ್ಷದೊಳಗಿನವರು ಮತ್ತು 19 ವರ್ಷದೊಳಗಿನವರ ವಿಭಾಗಗಳಲ್ಲಿ ಆಡುವ ಹುಡುಗಿಯರು ದಿನಕ್ಕೆ 25,000 ರೂ. ಪಡೆಯುತ್ತಾರೆ ಮತ್ತು ಮೀಸಲು ಆಟಗಾರ್ತಿಯರಿಗೆ 12,500 ರೂ. ಪಡೆಯುತ್ತಾರೆ.

ಅಂಪೈರ್‌ಗಳು ಮತ್ತು ರೆಫರಿಗಳ ಆದಾಯವೂ ಹೆಚ್ಚು

ಬಿಸಿಸಿಐ, ದೇಶೀಯ ಅಂಪೈರ್‌ಗಳು ಮತ್ತು ರೆಫರಿಗಳ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಇನ್ನು ಮುಂದೆ, ಅಂಪೈರ್‌ಗಳು ದಿನಕ್ಕೆ 40 ಸಾವಿರ ರೂ. ಪಡೆಯುತ್ತಾರೆ. ನಾಕೌಟ್ ಪಂದ್ಯಗಳಿಗೆ, ಪಂದ್ಯದ ಮಹತ್ವವನ್ನು ಅವಲಂಬಿಸಿ 50 ಸಾವಿರದಿಂದ 60 ಸಾವಿರ ರೂ. ವರೆಗೂ ಸಿಗುತ್ತದೆ.
ಈ ಲೆಕ್ಕಾಚಾರದ ಆಧಾರದ ಮೇಲೆ, ರಣಜಿ ಟ್ರೋಫಿಯಲ್ಲಿ ಲೀಗ್ ಪಂದ್ಯಗಳಿಗೆ ಅಂಪೈರಿಂಗ್​ ಮಾಡುವ ಅಂಪೈರ್​ಗಳಿಗೆ ಪ್ರತಿ ಪಂದ್ಯಕ್ಕೆ 1.60 ಲಕ್ಷ ರೂ. ಮತ್ತು ನಾಕೌಟ್ ಪಂದ್ಯಗಳಿಗೆ 2.5 ಲಕ್ಷ ರೂ. ನಿಂದ 3 ಲಕ್ಷ ರೂ. ವರೆಗೆ ಸಿಗುತ್ತದೆ, (ಏಜೆನ್ಸೀಸ್​).