ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಶುಭಮಾನ್ ಗಿಲ್ ಫಿಟ್ ನಿರೀಕ್ಷೆ
ಬೆಂಗಳೂರು: ಭಾರತ ಟಿ20 ತಂಡದ ಉಪನಾಯಕ ಶುಭಮಾನ್ ಗಿಲ್ (Shubman Gill), ಡಿಸೆಂಬರ್ 9ರಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯೊಂದಿಗೆ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಗಿಲ್ ಸೋಮವಾರ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ (Centre of Excellence) ಆಗಮಿಸಿದ್ದು, ಅವರ ಫಿಟ್ನೆಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಕಳೆದ ತಿಂಗಳು ಕೋಲ್ಕತದಲ್ಲಿ ನಡೆದ ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಗಿಲ್ ಕುತ್ತಿಗೆ ನೋವಿಗೀಡಾಗಿದ್ದರು. ನಂತರ ಅವರು ಸರಣಿಯ 2ನೇ ಟೆಸ್ಟ್ ಮತ್ತು ಪ್ರಸಕ್ತ ನಡೆಯುತ್ತಿರುವ ಏಕದಿನ ಸರಣಿಗೂ ಅಲಭ್ಯರಾಗಿದ್ದರು.
ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ ಸರಣಿ ಗೆಲುವು ಸಾಧಿಸಿದ ಭಾರತ ಟಿ20 ತಂಡದಲ್ಲಿ ಹೆಚ್ಚಿನ ಬದಲಾವಣೆಯ ಸಾಧ್ಯತೆ ಇಲ್ಲ. ಗಾಯ ಅಥವಾ ಬೇರೇನಾದರೂ ವೈಯಕ್ತಿಕ ಕಾರಣಗಳಿದ್ದರೆ ಮಾತ್ರ ಆಟಗಾರರ ಬದಲಾವಣೆಯಾಗಬಹುದು ಎನ್ನಲಾಗಿದೆ.
"ಗಿಲ್ಗೆ ಚುಚ್ಚು ಮದ್ದು ಒಂದನ್ನು ನೀಡಲಾಗಿತ್ತು ಮತ್ತು 21 ದಿನಗಳ ವಿಶ್ರಾಂತಿ ಮತ್ತು ಪುನಶ್ಚೇತನವನ್ನು ಸೂಚಿಸಲಾಗಿತ್ತು. ಬಿಸಿಸಿಐ ಸಿಒಇನಲ್ಲಿ ಕ್ರೀಡಾ ವಿಜ್ಞಾನ ತಂಡ ಗಿಲ್ ಫಿಟ್ನೆಸ್ ಪರಿಶೀಲಿಸಿದ ಬಳಿಕ ಅವರಿಗೆ ಅಭ್ಯಾಸ ಆರಂಭಿಸಲು ಸೂಚಿಸುವ ಬಗ್ಗೆ ನಿರ್ಧರಿಸಲಿದೆ. ಅವರು ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ಬಳಿಕ ಫಿಟ್ನೆಸ್ ಬಗ್ಗೆ ಅಂತಿಮ ಅಭಿಪ್ರಾಯ ಹೊರಬೀಳಲಿದೆ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಶುಭಮಾನ್ ಗಿಲ್ ಅವರ ಫಿಟ್ನೆಸ್ ಪರೀೆ ಮುಗಿದ ಬಳಿಕ ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸುವ ನಿರೀಕ್ಷೆ ಇದೆ. ಸದ್ಯಕ್ಕೆ ಗಿಲ್ ಟಿ20 ಸರಣಿಗೆ ಫಿಟ್ ಆಗುವ ಸಾಧ್ಯತೆ 50-50 ಎಂದೇ ಹೇಳಲಾಗುತ್ತಿದೆ.
ಹಾರ್ದಿಕ್ ಪಾಂಡ್ಯಗೆ ಟಿ20 ಆಡಲು ಒಪ್ಪಿಗೆ
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಟಿ20 ಪಂದ್ಯಗಳನ್ನು ಆಡಲು ಫಿಟ್ ಆಗಿದ್ದಾರೆ ಎಂದು ಬಿಸಿಸಿಐ ಶ್ರೇಷ್ಠತಾ ಕೇಂದ್ರ ಹಸಿರು ನಿಶಾನೆ ತೋರಿದೆ. ಅವರಿಗೆ ಬೌಲಿಂಗ್ ಕೂಡ ಮಾಡಲು ಅನುಮತಿ ನೀಡಲಾಗಿದೆ. ಇದರಿಂದ ಅವರು ಮಂಗಳವಾರ ಹೈದರಾಬಾದ್ನಲ್ಲಿ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂನಿಯಲ್ಲಿ ಬರೋಡ ಪರ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ. ನಂತರ ಡಿಸೆಂಬರ್ 4ಕ್ಕೆ ನಡೆಯಲಿರುವ ಬರೋಡ ವಿರುದ್ಧದ ಪಂದ್ಯದಲ್ಲೂ ಅವರು ಆಡಲಿದ್ದು, ಈ ವೇಳೆ ಆಯ್ಕೆಗಾರ ಪ್ರಜ್ಞಾನ್ ಓಜಾ ಹಾಜರಿರಲಿದ್ದಾರೆ. ಹಾರ್ದಿಕ್ ಫಿಟ್ನೆಸ್ ಬಗ್ಗೆ ಪ್ರಜ್ಞಾನ್ ಓಜಾ ಸಮಗ್ರವಾಗಿ ಗಮನಿಸಿದ ಬಳಿಕ ದ. ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟಗೊಳ್ಳಲಿದೆ ಎನ್ನಲಾಗಿದೆ. ಹಾರ್ದಿಕ್ ಡಿ.6ಕ್ಕೆ ಹರಿಯಾಣ ವಿರುದ್ಧದ ಪಂದ್ಯದಲ್ಲೂ ಆಡಲಿದ್ದಾರೆ.