- ಎಸ್ಆರ್ಎಚ್ ಸಹ ಮಾಲೀಕರಾದ ಕಾವ್ಯಾ ಮಾರನ್ ನಿರ್ಧಾರಕ್ಕೆ ಛೀಮಾರಿ
- ಸನ್ರೈಸರ್ಸ್ ಲೀಡ್ಸ್ ತಂಡಕ್ಕೆ ಪಾಕ್ ಆಟಗಾರನ ಖರೀದಿ ವಿರುದ್ಧ ಆಕ್ರೋಶ
- ಕಾವ್ಯ ಮಾರನ್ ಮುಖಕ್ಕೆ ಹೊಡೆದಂತೆ ಮಾತನಾಡಿದ ಸುನಿಲ್ ಗವಾಸ್ಕರ್
ನವದೆಹಲಿ: ಈ ಬಾರಿ 'ದಿ ಹಂಡ್ರೆಡ್' 2026ರ ಟಿ20 ಲೀಗ್ ಇಂಗ್ಲೆಂಡ್ನಲ್ಲಿ ನಡೆಯಲಿದ್ದು, ಇತ್ತೀಚೆಗಷ್ಟೇ ಹರಾಜು ಪ್ರಕ್ರಿಯೆ ನಡೆಯಿತು. ಈ ಆಕ್ಷನ್ನಲ್ಲಿ ಕಾವ್ಯ ಮಾರನ್ ಸಹ ಒಡೆತನದ ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ನನ್ನು ಬರೋಬ್ಬರಿ 2.34 ಕೋಟಿ (190,000 ಪೌಂಡ್‌ಗಳು) ರೂ.ಗೆ ಖರೀದಿಸಿತು. ಈ ವಿಚಾರ ಹೊರಬೀಳುತ್ತಿದ್ದಂತೆ ಸದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾವ್ಯ ವಿರುದ್ಧ ತೀವ್ರ ಕಿಡಿಕಾರುತ್ತಿದ್ದಾರೆ. ಈ ಸಾಲಿಗೆ ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಸೇರ್ಪಡೆಯಾಗಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ಅಬ್ರಾರ್ ಮಾತ್ರವಲ್ಲದೇ, ಉಸ್ಮಾನ್ ತಾರೀಕ್ರಂತಹ ಮತ್ತೊಂದಷ್ಟು ಪಾಕ್ ಕ್ರಿಕೆಟಿಗರನ್ನು ತಂಡಕ್ಕೆ ಖರೀದಿ ಮಾಡಲು ಕಾವ್ಯ ಮತ್ತು ಫ್ರಾಂಚೈಸಿಯ ಕೋಚ್ ಡೆನಿಯಲ್ ವೆಟೋರಿ ಮೊದಲೇ ಪ್ಲ್ಯಾನ್ ಮಾಡಿದ್ದರು. ಆದರೆ, ಯಾವಾಗ ಅಬ್ರಾರ್ ಅಹ್ಮದ್ರನ್ನು ಆಯ್ಕೆ ಮಾಡಿದ್ದು ತಿಳಿಯಿಯೋ, ಆ ಕ್ಷಣವೇ ಸನ್ರೈಸರ್ಸ್ ಲೀಡ್ಸ್ ವಿರುದ್ಧ ಛೀಮಾರಿಗಳು ಜೋರಾಯಿತು. ಇದು ತೀವ್ರವಾಗುತ್ತಿದ್ದಂತೆ ಎಲಾನ್ ಮಸ್ಕ್ ಒಡೆತನದ ಎಕ್ಸ್ ಕೂಡ ಫ್ರಾಂಚೈಸಿಯ ಅಧಿಕೃತ ಖಾತೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದು ಹಲವರಲ್ಲಿ ಭಾರೀ ಅಚ್ಚರಿ ಮೂಡಿಸಿತು.
ಈ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮಿಡ್-ಡೇ ಅಂಕಣದಲ್ಲಿ ಬರೆದ ಗವಾಸ್ಕರ್, 2008ರ ಮುಂಬೈ ತಾಜ್ ಅಟ್ಯಾಕ್ ಅನ್ನು ಗಮನದಲ್ಲಿಟ್ಟುಕೊಂಡೇ ಭಾರತೀಯ ಕ್ರಿಕೆಟ್ ಮಂಡಳಿ ತನ್ನ ನಿಲುವನ್ನು ತೆಗೆದುಕೊಂಡಿರುವುದು. ಪಾಕ್ ಉಗ್ರರ ದಾಳಿಯ ಬೆನ್ನಲ್ಲೇ ಪಾಕಿಸ್ತಾನ ಆಟಗಾರರನ್ನು ಐಪಿಎಲ್ನಿಂದ ಬಹಿಷ್ಕರಿಸಿರುವುದು. ಆದರೆ, ನಮ್ಮದೇ ಒಂದು ಫ್ರಾಂಚೈಸಿ ಅಲ್ಲಿನ ಆಟಗಾರನನ್ನು ಖರೀದಿ ಮಾಡಿರುವುದು ನಿಜಕ್ಕೂ ಆಶ್ಚರ್ಯಕರ ಎಂದರು.
ನೀವಿಲ್ಲಿ ತುಂಬ ದೊಡ್ಡ ತಪ್ಪು ಮಾಡಿದ್ದೀರಿ. ಪಾಕ್ ಆಟಗಾರರನ್ನು ಖರೀದಿಸುವ ಮೂಲಕ ನಮ್ಮ ಹಣವನ್ನು ಅವರಿಗೆ ಕೊಡುತ್ತಿದ್ದೀರಿ. ಅದರ ತೆರಿಗೆ ಹಣ ಅವರ ಸರ್ಕಾರಕ್ಕೆ ಹೋಗುತ್ತದೆ. ಆ ಹಣದಿಂದ, ಅವರು ಆಯುಧಗಳು ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುತ್ತಾರೆ. ನೀವು ಪರೋಕ್ಷವಾಗಿ ಭಾರತೀಯ ಸೈನಿಕರು ಮತ್ತು ನಾಗರಿಕರನ್ನು ಜೀವಕ್ಕೆ ಕುತ್ತು ತಂದಿಡುತ್ತಿದ್ದೀರಿ ಎಂಬ ಅರಿವು ನಿಮಗಿದೆಯೇ? ಎಂದು ಭಾರೀ ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್).