ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್
- ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು
- ಕೋಲ್ಕತದ ಈಡನ್ ಗಾರ್ಡನ್ಸ್ ಪಿಚ್ ವಿರುದ್ಧ ಭಾರೀ ಟೀಕೆ
- ಪಿಚ್ ಸಮರ್ಥಿಸಿಕೊಂಡ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್
- ಗಂಭೀರ್ ಕುರಿತು ಅಚ್ಚರಿ ಹೇಳಿಕೆ ನೀಡಿದ ದಕ್ಷಿಣ ಆಫ್ರಿಕಾ ದಿಗ್ಗಜ ಆಟಗಾರ ಡಿವಿಲಿಯರ್ಸ್
AB de Villiers : ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲುಂಡಿತು. ಇದರಿಂದ ಎಲ್ಲರು ಈಡನ್ ಗಾರ್ಡನ್ಸ್ ಪಿಚ್ ಅನ್ನು ಟೀಕಿಸಿದರು. ಏಕೆಂದರೆ, ಪಂದ್ಯದ ಎರಡನೇ ದಿನದಂದು ಬೌಲರ್‌ಗಳು ಮೇಲುಗೈ ಸಾಧಿಸಿದರು. ವೇಗಿಗಳು ಮತ್ತು ಸ್ಪಿನ್ನರ್ಗಳಿಗೆ ಪಿಚ್ ನೆರವಾಯಿತು. ಅದರಲ್ಲೂ ಸ್ಪಿನ್ನರ್ಗಳಿಗೆ ಸಾಕಷ್ಟು ಟರ್ನ್ ಸಿಕ್ಕಿತು. ಈ ಪರಿಸ್ಥಿತಿಯ ಲಾಭ ಪಡೆದ ಎದುರಾಳಿ ತಂಡದ ಸ್ಪಿನ್ನರ್ ಸೈಮನ್ ಹಾರ್ಮರ್ 8 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬೌನ್ಸಿ ಪಿಚ್‌ನಲ್ಲಿ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ತುಂಬಾ ಕಷ್ಟಪಟ್ಟರು. ಭಾರತದ ಆಟಗಾರರು ಮಾತ್ರವಲ್ಲ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಸಹ ಈ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ, ಈಡನ್ ಗಾರ್ಡನ್ಸ್ ಪಿಚ್ ತೀವ್ರ ಟೀಕೆಗೆ ಗುರಿಯಾಯಿತು. ಇದು ಟೆಸ್ಟ್ ಕ್ರಿಕೆಟ್‌ಗೆ ಸೂಕ್ತವಾದ ಪಿಚ್ ಅಲ್ಲ ಎಂದು ಅನೇಕ ಮಾಜಿ ಆಟಗಾರರು ಕಿಡಿಕಾರಿದರು.
ಈಡನ್ ಗಾರ್ಡನ್ ಪಿಚ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುವಾಗ, ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್, ಪಿಚ್ ಅನ್ನು ಸಮರ್ಥಿಸಿಕೊಂಡರು. ಈ ಪಿಚ್ ಬ್ಯಾಟಿಂಗ್‌ಗೆ ಅಷ್ಟೊಂದು ಕಷ್ಟಕರವೇನಲ್ಲ ಮತ್ತು ಸರಿಯಾದ ರಕ್ಷಣಾತ್ಮಕ ತಂತ್ರವಿದ್ದರೆ ಸುಲಭವಾಗಿ ರನ್ ಗಳಿಸಬಹುದು ಎಂದು ಗಂಭೀರ್ ಹೇಳಿದರು.
ಗಂಭೀರ್ ಅವರ ಈ ಹೇಳಿಕೆಗಳು ಈಗ ಕೋಲಾಹಲಕ್ಕೆ ಕಾರಣವಾಗಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಗಂಭೀರ್ ನಡೆಯನ್ನು ಟೀಕಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಎಬಿಡಿ, ಗಂಭೀರ್ ಅವರು ಪರೋಕ್ಷವಾಗಿ ತಮ್ಮದೇ ತಂಡವನ್ನು ಟೀಕಿಸಿದ್ದಾರೆ ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿದ ಎಬಿಡಿ, ಕಳೆದ ಐದು ವರ್ಷಗಳಲ್ಲಿ ಟೀಮ್ ಇಂಡಿಯಾ ತವರಿನಲ್ಲಿ ಹೆಚ್ಚು ಪಂದ್ಯಗಳನ್ನು ಸೋಲುತ್ತಿವೆ. ಇದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ. ಈ ಹಿಂದೆ, ತವರಿನ ನೆಲದಲ್ಲಿ ಭಾರತವನ್ನು ಸೋಲಿಸುವುದು ತುಂಬಾ ಕಷ್ಟಕರವಾಗಿತ್ತು. ಆದರೆ, ಇತ್ತೀಚೆಗೆ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಭಾರತ ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನು ಸೋತಿದ್ದಾರೆ. ಈಗ, ಭಾರತೀಯ ಬ್ಯಾಟ್ಸ್‌ಮನ್‌ಗಳು ಸ್ಪಿನ್ಗೆ ಆಡಲು ದುರ್ಬಲರಾಗಿದ್ದಾರೆಯೇ? ನಾನು ಆ ರೀತಿ ಭಾವಿಸುವುದಿಲ್ಲ. ಏಕೆಂದರೆ, ಎದುರಾಳಿ ತಂಡಗಳು ಭಾರತದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿವೆ ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿಡಿ ಹೇಳಿದರು.
ಅಂದಹಾಗೆ, ಮೊದಲ ದಿನದ ಮೊದಲಾರ್ಧದಲ್ಲಿ ಈಡನ್ ಗಾರ್ಡನ್ಸ್ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿದ್ದರೂ, ಎರಡನೇ ದಿನದಂದು ಅದು ಸಂಪೂರ್ಣವಾಗಿ ಬೌಲರ್ಗಳ ಪರವಾಗಿ ಬದಲಾಯಿತು. ಹೀಗಾಗಿ ಟೀಮ್ ಇಂಡಿಯಾದ ಕೇವಲ 124 ರನ್‌ಗಳ ಸಣ್ಣ ಗುರಿಯನ್ನು ತಲುಪಲು ಸಾಧ್ಯವಾಗದೇ ಕೇವಲ 93 ರನ್ಗಳಿಗೆ ಆಲೌಟ್ ಆಗುವ ಮೂಲಕ ಹರಿಣ ಪಡೆ ಎದುರು ಮಂಡಿಯೂರಿತು.
ಇನ್ನು ಎರಡನೇ ಟೆಸ್ಟ್ ನವೆಂಬರ್ 22 ರಂದು ಗುವಾಹಟಿಯಲ್ಲಿ ಪ್ರಾರಂಭವಾಗಲಿದೆ. ಸರಣಿಯಲ್ಲಿ ಹಿಂದುಳಿದಿರುವ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ, (ಏಜೆನ್ಸೀಸ್).