ಗೌತಮ್ ಗಂಭೀರ್, ಅರ್ಷ್ದೀಪ್ ಸಿಂಗ್
- 20 ಓವರ್ ಅಂತ್ಯಕ್ಕೆ 213 ರನ್ ಬಾರಿಸಿದ ಸೌತ್ ಆಫ್ರಿಕಾ
- ಬೌಲಿಂಗ್ ವೇಳೆ ಎಡವಟ್ಟು ಮಾಡಿದ ಅರ್ಷ್ದೀಪ್ ಸಿಂಗ್
- ಒಂದಲ್ಲ, ಎರಡಲ್ಲ ಒಟ್ಟು 7 ವೈಡ್ ಹಾಕಿದ ಬೌಲರ್
ನವದೆಹಲಿ: ಇಂದು (ಡಿ.11) ಮುಲ್ಲನ್‌ಪುರದ ನ್ಯೂ ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. 20 ಓವರ್ ಅಂತ್ಯಕ್ಕೆ 213 ರನ್ ಕಲೆಹಾಕಿದ ಹರಿಣರ ಪಡೆ, ಟೀಮ್ ಇಂಡಿಯಾಗೆ ಬೃಹತ್ ರನ್ಗಳ ಗುರಿಯನ್ನೇ ನೀಡಿದೆ. ಈ ಮಧ್ಯೆ, ಬೌಲಿಂಗ್ನಲ್ಲಿ ತಂಡಕ್ಕೆ ಆಸರೆಯಾಗಬೇಕಿದ್ದ ಅರ್ಷ್ದೀಪ್ ಸಿಂಗ್ ಮಾಡಿದ ತಪ್ಪಿಗೆ ಮೈದಾನದಲ್ಲೇ ಹೆಡ್ ಕೋಚ್ ಗೌತಮ್ ಗಂಭೀರ್ ಕೆಂಡಾಮಂಡಲಗೊಂಡಿದ್ದಾರೆ.
ತಂಡದ ಪರ ಕ್ವಿಂಟನ್ ಡಿ ಕಾಕ್ ಸ್ಫೋಟಕ ಪ್ರದರ್ಶನ ( 46 ಎಸೆತ, 93 ರನ್) ತಂಡದ ಮೊತ್ತವನ್ನು 200ರ ಗಡಿದಾಟಿಸಲು ಸಹಾಯ ಮಾಡಿತು. ಈ ಬೃಹತ್ ರನ್ಗೆ ಮತ್ತೊಂದು ಕೊಡುಗೆ ನೀಡಿದ್ದು ಟೀಮ್ ಇಂಡಿಯಾ ವೇಗಿ ಅರ್ಷ್ದೀಪ್ ಸಿಂಗ್ ಬೌಲಿಂಗ್. ಹೌದು, 11ನೇ ಓವರ್ನಲ್ಲಿ ಪದೇ ಪದೇ ವೈಡ್ಗಳನ್ನು ಎಸೆದ ಅರ್ಷ್ದೀಪ್, ಒಂದಲ್ಲ, ಎರಡಲ್ಲ ಒಟ್ಟು 7 ವೈಡ್ ಹಾಕಿದರು. ಇದು ಮೈದಾನದಲ್ಲಿ ಕುಳಿತಿದ್ದ ಕೋಚ್ ಗೌತಮ್ ಗಂಭೀರ್ ತಾಳ್ಮೆಯನ್ನು ಕಳೆದುಕೊಳ್ಳುವಂತೆ ಮಾಡಿತು.
ಅರ್ಷ್ದೀಪ್ ಸಿಂಗ್ ಮಾಡಿದ ವೈಡ್ಗಳನ್ನು ನೋಡುತ್ತಿದ್ದಂತೆ ಸಿಡಿದೆದ್ದ ಗೌತಿ, ತಂಡಕ್ಕೆ ಚೇಸಿಂಗ್ನಲ್ಲಿ ತೊಂದರೆ ಆಗುವಂತೆ ಮಾಡಿದ್ದಕ್ಕೆ ಕೋಪಗೊಂಡರು. ಈ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸರೆಯಾಗಿದೆ. ಮತ್ತೊಂದೆಡೆ, ಕಮೆಂಟೇಟರ್ ಆಗಿ ಪಂದ್ಯ ವೀಕ್ಷಿಸುತ್ತಾ ಕುಳಿತಿದ್ದ ಸುನಿಲ್ ಗವಾಸ್ಕರ್ ಕೂಡ ಕಿಡಿಕಾರಿದರು. ಒಂದೇ ಲೈನ್ನಲ್ಲಿ ನೀವು ಬೌಲಿಂಗ್ ಮಾಡುವುದು ಸರಿಯಲ್ಲ. ಇದು ನಿಜಕ್ಕೂ ಒಪ್ಪುವಂತದ್ದಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು,(ಏಜೆನ್ಸೀಸ್).