ಗೌತಮ್ ಗಂಭೀರ್ (ಎಡ), ರೋಕೊ ಜೋಡಿ (ಬಲ)
- ಭಾರತ ತಂಡದಲ್ಲಿ ಏನಾದರೂ ಒಂದು ಸಮಸ್ಯೆಗಳು
- ವಿರಾಟ್ ಕೊಹ್ಲಿ ಮತ್ತು ರೋಹಿತ್ ಟೆಸ್ಟ್ ನಿವೃತ್ತಿಗೆ ಗೌತಿಯೇ ಕಾರಣ?
- ಹೆಡ್ಕೋಚ್ ಗೌತಮ್ ಗಂಭೀರ್ ಮಾಡಿದ ಕಮೆಂಟ್ಸ್ ವೈರಲ್
ನವದೆಹಲಿ: ಟೀಮ್ ಇಂಡಿಯಾ ಹೆಡ್ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡ ದಿನದಿಂದಲೂ ಭಾರತ ತಂಡದಲ್ಲಿ ಏನಾದರೂ ಒಂದು ಸಮಸ್ಯೆಗಳು ಉಂಟಾಗುತ್ತಲೇ ಇವೆ. ಈ ಕುರಿತಂತೆ ಮಾಜಿ ಕ್ರಿಕೆಟಿಗರು ಹಾಗೂ ದಿಗ್ಗಜರು ಗಂಭೀರ್ ಲೋಪದೋಷಗಳನ್ನು ಆಗಾಗ್ಗೆ ಎತ್ತಿಹಿಡಿಯುತ್ತಿರುತ್ತಾರೆ. ಕೆಲವರು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದರೆ, ಇನ್ನೂ ಕೆಲವರು ಪರೋಕ್ಷವಾಗಿ ಕುಟುಕುತ್ತಾರೆ. ಈ ಸಾಲಿನಲ್ಲಿ ಕ್ರಿಕೆಟ್ ಪ್ರೇಮಿಗಳು ಸದಾ ಮುಂಚೂಣಿ.
ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಭಾರತದ ಮುಡಿಗೇರಿದ ಬಳಿಕ ಸಖತ್ ರಿಲ್ಯಾಕ್ಸಿಂಗ್ ಹಾಗೂ ನೆಮ್ಮದಿಯ ಮೂಡ್ನಲ್ಲಿರುವ ಗಂಭೀರ್, 2027ರ ಏಕದಿನ ವಿಶ್ವಕಪ್ ಟ್ರೋಫಿಯನ್ನು ಟೀಮ್ ಇಂಡಿಯಾಗೆ ತಂದುಕೊಡಲು ಎದುರುನೋಡುತ್ತಿದ್ದಾರೆ. ಮಹತ್ತರ ಕೊಡುಗೆಗಳ ಮಧ್ಯೆಯೂ ಸ್ಟಾರ್ ಆಟಗಾರರ ವಿಷಯದಲ್ಲಿ ಗೌತಿ ತೆಗೆದುಕೊಳ್ಳುವ ನಿರ್ಧಾರಗಳೇ ಹೆಚ್ಚಾಗಿ ಮುನ್ನೆಲೆಗೆ ಬರುವುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಇದು ಸರಣಿ ಟೀಕೆ, ಆರೋಪಗಳಿಗೂ ಕಾರಣವಾಗಿದೆ. ತಮ್ಮ ವೈಯಕ್ತಿಕ ಹಾಗೂ ಅಹಂನಿಂದ ಟೀಮ್ ಇಂಡಿಯಾವನ್ನು ಭಾರೀ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂಬ ಆರೋಪಗಳು ನೆಟ್ಟಿಗರಿಂದ ಆಗಾಗ್ಗೆ ವ್ಯಕ್ತವಾಗುತ್ತವೆ.
ಅತಿ ಮುಖ್ಯವಾಗಿ, ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ಗಳಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಟೆಸ್ಟ್ ಹಾಗೂ ಟಿ20 ನಿವೃತ್ತಿ. ತಂಡದ ಸೀನಿಯರ್ ಪ್ಲೇಯರ್ಗಳಾದ ರೋಕೊ ಜೋಡಿಯನ್ನು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವಂತೆ ಒತ್ತಾಯ ಮಾಡಿದ್ದೇ ಗಂಭೀರ್ ಎಂಬ ಆರೋಪಗಳು ಈ ಹಿಂದಿನಿಂದಲೂ ಸಾಕಷ್ಟು ಬಾರಿ ಕೇಳಿಬಂದಿವೆ. ಇದಕ್ಕೆ ಪರೋಕ್ಷವಾಗಿ ಗೌತಿ ಪ್ರತಿಕ್ರಿಯಿಸಿರುವುದು ಸದ್ಯ ಹಲವರ ಹುಬ್ಬೇರಿಸಿದೆ.
'ರೇವ್ ಸ್ಫೋರ್ಟ್ಸ್' ಕಾನ್ಕ್ಲೇವ್ನಲ್ಲಿ ಮಾತನಾಡಿದ ಗೌತಿ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ಆಟಗಾರರೊಂದಿಗೆ ಚರ್ಚಿಸುವ ವೇಳೆ ನಾನು ತೆಗೆದುಕೊಂಡ ನಿರ್ಧಾರಗಳನ್ನು ಸದಾ ಒಳ್ಳೆಯ ಉದ್ದೇಶದಿಂದಲೇ ಮಾಡಿರುತ್ತೇನೆ. ನಾನು ಕೂಡ ಮನುಷ್ಯನೇ. ನಾನು ತಪ್ಪುಗಳನ್ನು ಮಾಡಬಹುದು. ಆಟಗಾರರಿಗೂ ಮಿಸ್ಟೇಕ್ಸ್ ಮಾಡುವ ಹಕ್ಕಿದೆ. ಕಳೆದ 18 ತಿಂಗಳುಗಳಲ್ಲಿ ನಾನು ಒಂದಷ್ಟು ತಪ್ಪುಗಳನ್ನು ಮಾಡಿರಬಹುದು. ಆದರೆ ನನ್ನ ಉದ್ದೇಶಗಳು ಯಾವಾಗಲೂ ಸರಿಯಾಗಿವೆ ಎಂದರು.
ಕೆಟ್ಟ ಉದ್ದೇಶದಿಂದ ತೆಗೆದುಕೊಂಡ ಯಾವುದೇ ನಿರ್ಧಾರವನ್ನು ಡ್ರೆಸ್ಸಿಂಗ್ ರೂಮ್ನಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ. ಆಟಗಾರರ ಕಣ್ಣುಗಳಲ್ಲಿ ನೋಡಿ ಮತ್ತು ಪ್ರಾಮಾಣಿಕವಾಗಿ ಮಾತನಾಡಲು ಸಾಧ್ಯವಾದರೆ ಮಾತ್ರ ಕೋಚ್ ಆಗಿ ನನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯ ಎಂದು ಹೇಳಿದರು,(ಏಜೆನ್ಸೀಸ್).