ಸೌರವ್ ಗಂಗೂಲಿ, ಗೌತಮ್ ಗಂಭೀರ್
- ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಹೀನಾಯ ಸೋಲು
- ಹೆಡ್ ಕೋಚ್ ಗೌತಿಗೆ ಗಂಗೂಲಿ ಕಿವಿಮಾತು
- ಶಮಿಗೆ ತಂಡದಲ್ಲಿ ಸ್ಥಾನ ನೀಡುವಂತೆ ಸಲಹೆ
ನವದೆಹಲಿ: ನಿನ್ನೆ (ನ.16) ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲುಂಡಿತು. ಹರಿಣರ ಪಡೆ ನೀಡಿದ 124 ರನ್‌ಗಳ ಸಾಧಾರಣ ಗುರಿಯನ್ನು ತಲುಪುವಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ, 30 ರನ್‌ಗಳಿಂದ ಪಂದ್ಯ ಸೋತಿತು. ಈ ಸೋಲಿಗೆ ಕ್ರಿಕೆಟ್ ಪ್ರಿಯರಿಂದ ಬೇಸರ, ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ, ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ಗೆ ಮಾಜಿ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಬಹುಮುಖ್ಯ ಸಲಹೆಯೊಂದನ್ನು ನೀಡಿದ್ದಾರೆ.
ಟೆಸ್ಟ್ ತಂಡಕ್ಕೆ ವೇಗಿ ಮೊಹಮ್ಮದ್ ಶಮಿ ಅವರನ್ನು ಮರಳಿ ಕರೆತರಬೇಕೆಂದು ಗಂಗೂಲಿ ಸಲಹೆ ನೀಡಿದ್ದಾರೆ. ಇದೇ ಸಮಯದಲ್ಲಿ, ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ವೇಗಿಗಳಾದ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಮೇಲೆ ವಿಶ್ವಾಸ ಇಡಬೇಕು. ಅವರನ್ನು ಮರೆಯಬಾರದು ಎಂಬುದನ್ನು ಒತ್ತಿ ಹೇಳಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಹೆಚ್ಚುವರಿ ರನ್ ಗಳಿಸಿದರು. ಅದಕ್ಕಾಗಿಯೇ ಅವರು ಆ ನೆಲದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದರು. ಟೆಸ್ಟ್ ಪಂದ್ಯಗಳನ್ನು 5 ದಿನಗಳವರೆಗೂ ಆಡಿ ಗೆಲುವುದನ್ನು ನೋಡಿ. ಕೇವಲ ಮೂರು ದಿನಗಳಲ್ಲಿ ಮುಗಿಸಬೇಡಿ ಎಂದು ಗಂಭೀರ್ಗೆ ಪ್ರಮುಖ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).