(ಚಿತ್ರ X) 
ಕ್ರಿಕೆಟ್

ವಿಶ್ವಕಪ್ ಗೆಲುವನ್ನು ಆ ಇಬ್ಬರಿಗೆ ಅರ್ಪಿಸಿದ ಗಂಭೀರ್...ಗೌತಿ ಕಷ್ಟ ಕಾಲದಲ್ಲಿ ಜೊತೆಗೆ ನಿಂತ ಆಪದ್ಭಾಂದವರು ಇವರೇ ನೋಡಿ! Gautam Gambhir

ಪ್ರಮುಖ ಮುಖ್ಯಾಂಶಗಳು

  • 2026 ರ ಟಿ 20 ವಿಶ್ವಕಪ್​ ಫೈನಲ್ ಪಂದ್ಯವು ಕೇವಲ ಒಂದು ಕ್ರಿಕೆಟ್ ಪಂದ್ಯವಾಗಿರಲಿಲ್ಲ
  • ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಅಂತರದಿಂದ ಮಣಿಸಿದ ಭಾರತ, ಗೆಲುವನ್ನು ಮುಡಿಗೇರಿಸಿಕೊಂಡಿತು
  • ನಾನು ಹೊರಗಿನ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ; ಕೋಚ್​ ಗೌತಮ್​ ಗಂಭೀರ್​
Gautam Gambhir 2026 ರ ಟಿ 20 ವಿಶ್ವಕಪ್​ ಫೈನಲ್  ಪಂದ್ಯವು ಕೇವಲ ಒಂದು ಕ್ರಿಕೆಟ್ ಪಂದ್ಯವಾಗಿರಲಿಲ್ಲ. ಬದಲಿಗೆ ಟೀಮ್​ ಇಂಡಿಯಾದ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಅವರ ತಂತ್ರಗಾರಿಕೆ ಮತ್ತು ನಾಯಕತ್ವಕ್ಕೆ ಸಿಕ್ಕ ಅತಿದೊಡ್ಡ ಜಯವಾಗಿತ್ತು. ಭಾನುವಾರ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಅಂತರದಿಂದ ಮಣಿಸಿದ ಭಾರತ, ಗೆಲುವನ್ನು ಮುಡಿಗೇರಿಸಿಕೊಂಡಿತು.
ಟೂರ್ನಿಗೂ ಮುನ್ನ ಗಂಭೀರ್ ತೀವ್ರ ಒತ್ತಡದಲ್ಲಿದ್ದರು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ, ಅವರ ತರಬೇತಿ ಶೈಲಿ ಬಗ್ಗೆ ಅನೇಕರು ಟೀಕೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಇದೀಗ ವಿಶ್ವಕಪ್ ಜಯದೊಂದಿಗೆ ಗಂಭೀರ್ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.
ಪಂದ್ಯದ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಂಭೀರ, ನಾನು ಹೊರಗಿನ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿರುವ ನನ್ನ 30 ಜನರಿಗೆ ಮಾತ್ರ ನಾನು ಜವಬ್ದಾರ. ಒಬ್ಬ ತರಬೇತುದಾರ ತನ್ನ ತಂಡದಷ್ಟೇ ಒಳ್ಳೆಯವನು. ಆಟಗಾರರು ಮೈದಾನದಲ್ಲಿ ಪ್ರದರ್ಶನ ನೀಡದಿದ್ದರೆ ಕೋಚ್​ನ ಸಿದ್ದಾಂತಗಳಿಗೆ ಬೆಲೆ ಇರುವುದಿಲ್ಲ. ಈ ಆಟಗಾರರೇ ನನ್ನನ್ನು ಒಬ್ಬ ಯಶಸ್ವಿ ತರಬೇತುದಾರನನ್ನಾಗಿ ಮಾಡಿದ್ದಾರೆ ಎಂದು ಸ್ಪಷ್ಟ ನಿಲುವನ್ನು ಸ್ಪಷ್ಟ ಪಡಿಸಿದರು.
ಆದರೆ ತನ್ನ ವೈಭವದ ಘಳಿಗೆಯಲ್ಲೂ ಗಂಭೀರ್ ಅಹಂಕಾರ ತೋರಿಸಲಿಲ್ಲ. ಬದಲಿಗೆ 2024 ರಲ್ಲಿ ಭಾರತಕ್ಕೆ ಟಿ 20 ವಿಶ್ವಕಪ್​  ಗೆದ್ದುಕೊಟ್ಟ ರಾಹುಲ್​  ದ್ರಾವಿಡ್​ ಮತ್ತು  ಪ್ರಸ್ತುತ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಮುಖ್ಯಸ್ಥ ಲಕ್ಷ್ಮಣ್ ಅವರ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಭಾರತದ ಮಾಜಿ ಆರಂಭಿಕ ಆಟಗಾರ ಅಜಿತ್ ಅಗರ್ಕರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರಿಗೆ ಧನ್ಯವಾದ ಅರ್ಪಿಸಿದರು. ಸಾಕಷ್ಟು ಟೀಕೆಗಳನ್ನು ಸ್ವೀಕರಿಸಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರು. ನ್ಯೂಜಿಲ್ಯಾಂಡ್​ ಮತ್ತು ದಕ್ಷಿಣ ಆಫ್ರಿಕಾ ಸರಣಿ ಸೋಲಿನ ನಂತರ ನಾನು ಕುಗ್ಗಿ ಹೋಗಿದ್ದೆ ಆ ಸಮಯದಲ್ಲಿ ಜಯ್​ ಶಾ ಅವರು ಕರೆ ಮಾಡಿ ಧೈರ್ಯ ತುಂಬಿದರು ಎಂದು ಹೇಳಿದರು.

ಚಾಂಪಿಯನ್ ಆದ ಭಾರತ

ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಬೃಹತ್ ಅಂತರದಿಂದ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ (T20 WorldCup Final ) ಮುಡಿಗೇರಿಸಿಕೊಂಡಿತು. ಈ ಗೆಲುವಿನೊಂದಿಗೆ ಭಾರತವು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (3 ಬಾರಿ) ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ (89) ಮತ್ತು ಅಭಿಷೇಕ್ ಶರ್ಮಾ (52) ಸ್ಫೋಟಕ ಆರಂಭ ನೀಡಿದರು. ಪವರ್‌ಪ್ಲೇನಲ್ಲಿ ಕೇವಲ 6 ಓವರ್‌ಗಳಲ್ಲಿ 92 ರನ್‌ ಚಚ್ಚಿದ ಈ ಜೋಡಿ ಕಿವೀಸ್ ಬೌಲರ್‌ಗಳನ್ನು ಚೆಂಡಾಡಿದರು.
ಒನ್​ಡೌನ್ ಆಗಿ ಬಂದ ಇಶಾನ್ ಕಿಶನ್ (54) ಕೂಡ ಅರ್ಧಶತಕ ಸಿಡಿಸಿ ರನ್ ವೇಗವನ್ನು ಕಾಯ್ದುಕೊಂಡರು. ಅಂತಿಮ ಹಂತದಲ್ಲಿ ಶಿವಂ ದುಬೆ ಕೇವಲ 8 ಎಸೆತಗಳಲ್ಲಿ 26 ರನ್ ಚಚ್ಚುವ ಮೂಲಕ ಭಾರತದ ಮೊತ್ತವನ್ನು 255/5 ಕ್ಕೆ ತಲುಪಿಸಿದರು. ಇದು ಟಿ20 ವಿಶ್ವಕಪ್ ಫೈನಲ್ ಇತಿಹಾಸದ ಗರಿಷ್ಠ ಮೊತ್ತವಾಗಿದೆ.

ಗೆಲುವಿನ ಅಕ್ಷರ ಬರೆದ ಬುಮ್ರಾ

ಬೃಹತ್ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಅಪಾಯಕಾರಿ ಫಿನ್ ಅಲೆನ್​ರನ್ನು ಅಕ್ಷರ್ ಪಟೇಲ್ ಪೆವಿಲಿಯನ್‌ಗೆ ಕಳುಹಿಸಿದರೆ, ಇದಾದ ಬಳಿಕ ಬಂದ ರಚಿನ್ ರವೀಂದ್ರ ವಿಕೆಟ್​ನ್ನು ಜಸ್ಪ್ರೀತ್ ಬುಮ್ರಾ ಪಡೆದರು. ಟಿಮ್ ಸೀಫರ್ಟ್ (52) ಪ್ರತಿರೋಧ ತೋರಿದರೂ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಜಾಲಕ್ಕೆ ಕಿವೀಸ್ ತತ್ತರಿಸಿತು.
ಪಂದ್ಯದ ಅಂತಿಮ ಹಂತದಲ್ಲಿ ಮತ್ತೆ ಅಬ್ಬರಿಸಿದ ಬುಮ್ರಾ, ಜೇಮ್ಸ್ ನೀಶಮ್ ಮತ್ತು ಮಿಚೆಲ್ ಸ್ಯಾಂಟ್ನರ್ ವಿಕೆಟ್ ಪಡೆದು ಭಾರತದ ಗೆಲುವನ್ನು ಖಚಿತಪಡಿಸಿದರು. ಬುಮ್ರಾ ನಿಖರ ಯಾರ್ಕರ್‌ಗಳು ಮತ್ತು ಸ್ಲೋಯರ್ ಬಾಲ್‌ಗಳಿಗೆ ಕಿವೀಸ್ ಬ್ಯಾಟರ್‌ಗಳ ಬಳಿ ಉತ್ತರವಿರಲಿಲ್ಲ. ಅಂತಿಮವಾಗಿ ಭಾರತವು ದೊಡ್ಡ ಅಂತರದ ಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿತು (ಏಜೆನ್ಸೀಸ್​).