ಅವರಿಗೆಲ್ಲ ಗಂಭೀರ್ ವಿಲನ್ ರೀತಿ ಕಾಣ್ತಾರೆ ಆದರೆ... ಗೌತಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಫಾಫ್ ಡು ಪ್ಲೆಸಿಸ್! Gautam Gambhir
- ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿಲನ್ ರೀತಿ ಕಾಣುತ್ತಾರೆ
- ಅಚ್ಚರಿ ಹೇಳಿಕೆಗಳನ್ನು ನೀಡಿದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್
- ಜಿಯೋಸ್ಟಾರ್‌ನಲ್ಲಿ ಗಂಭೀರ್ ಬಗ್ಗೆ ತಮಗಿರುವ ಅಭಿಪ್ರಾಯಗಳನ್ನು ಮುಕ್ತವಾಗಿ ಬಹಿರಂಗಪಡಿಸಿದ ಡು ಪ್ಲೆಸಿಸ್
Gautam Gambhir : ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಎದುರಾಳಿಗಳ ದೃಷ್ಟಿಯಲ್ಲಿ ವಿಲನ್ ರೀತಿ ಕಾಣಬಹುದು ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ.
ಇತ್ತೀಚೆಗೆ ಜಿಯೋಸ್ಟಾರ್‌ನಲ್ಲಿ ಮಾತನಾಡಿದ ಡು ಪ್ಲೆಸಿಸ್, ಗಂಭೀರ್ ಬಗ್ಗೆ ತಮಗಿರುವ ಅಭಿಪ್ರಾಯಗಳನ್ನು ಮುಕ್ತವಾಗಿ ಬಹಿರಂಗಪಡಿಸಿದರು. ಗಂಭೀರ್ ಅವರು ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ನಾಯಕನಾಗಿ ಎರಡು ಐಪಿಎಲ್ ಪ್ರಶಸ್ತಿಗಳಿಗೆ ಮತ್ತು 2024 ರಲ್ಲಿ ಮಾರ್ಗದರ್ಶಕರಾಗಿ ಮತ್ತೊಂದು ಪ್ರಶಸ್ತಿಗೆ ಕರೆದೊಯ್ದಿದ್ದಾರೆ ಎಂದರು.
ಮಾತು ಮುಂದುವರಿಸಿದ ಡು ಪ್ಲೆಸಿಸ್, ಟೀಮ್ ಇಂಡಿಯಾದ ಕೋಚ್ ಆಗಿ 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು 2026ರಲ್ಲಿ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ. ತಮ್ಮ ಈ ಪ್ರಯಾಣದಲ್ಲಿ ಜನರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಗಂಭೀರ್ ಅವರು ಕಾಳಜಿ ವಹಿಸಿಲ್ಲ. ಅವರು ತಮ್ಮ ಮಾನದಂಡಗಳಿಗೆ ತಕ್ಕಂತೆ ಮುಂದುವರಿದಿದ್ದು ನಿಜಕ್ಕೂ ಶ್ಲಾಘನೀಯ ಎಂದು ಕೊಂಡಾಡಿದರು.
ನಾನು ಗಂಭೀರ್ ಜೊತೆ ಆಡಿಲ್ಲ ಆದರೆ, ನಾನು ಎದುರಾಳಿಯಾಗಿ ಅವರ ವಿರುದ್ಧ ಆಡುವಾಗ, ಯಾವಾಗಲೂ ಕಥೆಯಲ್ಲಿ ಬರುವ ಖಳನಾಯಕನಂತೆ ಗಂಭೀರ್ ಕಾಣುತ್ತಾರೆ. ಆದರೆ, ನಾವು ಅದನ್ನು ಗೌರವಿಸಬೇಕು. ಅವರು ಯಾರಿಗೂ ಒಳ್ಳೆಯವರಾಗಿ ಕಾಣಲು ಬಯಸುವುದಿಲ್ಲ ಏಕೆಂದರೆ, ಅವರು ಗೆಲ್ಲುವ ದೃಢಸಂಕಲ್ಪವನ್ನು ಮಾತ್ರ ಹೊಂದಿರುತ್ತಾರೆ ಎಂದು ಡು ಪ್ಲೆಸಿಸ್ ಹೇಳಿದರು.
ನಾಯಕನಾಗಿ ಗಂಭೀರ್ ಅವರ ಕೆಲಸವೆಂದರೆ ಡ್ರೆಸ್ಸಿಂಗ್ ಕೋಣೆಯಲ್ಲಿ ಶಿಸ್ತು ಮತ್ತು ಹೊಣೆಗಾರಿಕೆಯನ್ನು ತುಂಬುವುದು. ಒಳ್ಳೆಯ ನಾಯಕರು ಮಾಡುವುದು ಕೂಡ ಅದನ್ನೇ. ಕ್ರಿಕೆಟ್‌ಗೆ ಗಂಭೀರ್‌ನಂತಹ ನಾಯಕರು ಬೇಕು ಎಂದ ಡು ಪ್ಲೆಸಿಸ್, ಗಂಭೀರ್ ಅವರು ವೈಯಕ್ತಿಕ ಇಮೇಜ್ ಬಗ್ಗೆ ಕಾಳಜಿ ವಹಿಸುವುದಿಲ್ಲ ಮತ್ತು ತಂಡದ ಯಶಸ್ಸಿನ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಎಂದು ಪ್ರಶಂಸೆಯ ಸುರಿಮಳೆಗೈದರು, (ಏಜೆನ್ಸೀಸ್).