ನವದೆಹಲಿ: ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನೊಂದಿಗೆ ಭಾರತದ ಮಹಿಳಾ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ (Brand Value) ಹೊಸ ಎತ್ತರಕ್ಕೆ ಏರಿಕೆಯಾಗಿದೆ. ಪ್ರಚಾರ ರಾಯಭಾರಿಯಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಲಕ್ಷ ರೂ. ಲೆಕ್ಕಾಚಾರದಲ್ಲಿ ಹಣ ಪಡೆಯುತ್ತಿದ್ದ ಆಟಗಾರ್ತಿಯರು ಇನ್ನು ಕೋಟಿ ರೂ. ಮೊತ್ತದ ಹಣ ಪಡೆದುಕೊಳ್ಳಲಿದ್ದಾರೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ವಿಶ್ವಕಪ್ನಲ್ಲಿ ಮಿಂಚಿದ ಸ್ಮೃತಿ ಮಂದನಾ (Smrithi Mandhana), ಶೆಫಾಲಿ ವರ್ಮ ಮತ್ತು ಜೆಮೀಮಾ ರೋಡ್ರಿಗಸ್ರಂಥ ಪ್ರಮುಖ ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯ ಶೇ. 50ಕ್ಕೂ ಅಧಿಕ ಏರಿಕೆಯಾಗಿದೆ. ಆಟೋಮೊಬೈಲ್, ಬ್ಯಾಂಕ್, ದಿನನಿತ್ಯದ ಬಳಕೆಯ, ಜೀವನಶೈಲಿ ಉತ್ಪನ್ನಗಳು, ಸೌಂದರ್ಯ ಆರೈಕೆ ಮತ್ತು ಶಿಕ್ಷಣ ಸಂಸ್ಥೆಗಳು ಮುಂತಾದ ಬ್ರ್ಯಾಂಡ್ಗಳ ಪ್ರಚಾರ ಅವಕಾಶ ಒಲಿದುಬರುವ ನಿರೀಕ್ಷೆ ಇದೆ. ಹಿಂದೆ ಪ್ರತಿ ಬ್ರ್ಯಾಂಡ್ ಪ್ರಚಾರಕ್ಕೆ 60 ಲಕ್ಷ ರೂ. ಪಡೆಯುತ್ತಿದ್ದ ಜೆಮೀಮಾ ಇನ್ನು 1.5 ಕೋಟಿ ರೂ. ಪಡೆಯಬಹುದು. 40 ಲಕ್ಷ ರೂ. ಪಡೆಯುತ್ತಿದ್ದ ಶೆಫಾಲಿ ಒಂದು ಕೋಟಿ ರೂ.ಗೂ ಅಧಿಕ ಮೊತ್ತ ಗಳಿಸಬಹುದು ಎಂದು ವಿಶ್ಲೇಷಿಸಿದ್ದಾರೆ. ತಂಡದ ಇತರ ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯ ಕೂಡ ಶೇ. 25ಕ್ಕಿಂತ ಅಧಿಕ ಏರಿಕೆಯಾಗಿದೆ.
ಹಿಂಬಾಲಕರ ಸಂಖ್ಯೆ ಏರಿಕೆ: ವಿಶ್ವಕಪ್ ಗೆಲುವಿನಿಂದ ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಕ್ರಿಕೆಟಿಗರ ಹಿಂಬಾಲಕರ (Followers) ಸಂಖ್ಯೆಯೂ ಏರಿಕೆಯಾಗಿದೆ. ಜೆಮೀಮಾ ಹಿಂಬಾಲಕರ ಸಂಖ್ಯೆ 3.3 ದಶಲಕ್ಷ ಅಂದರೆ ದ್ವಿಗುಣಗೊಂಡಿದ್ದರೆ, ಶೆಫಾಲಿ ಹಿಂಬಾಲಕರ ಸಂಖ್ಯೆಯೂ ಶೇ. 50 ಏರಿಕೆಯಾಗಿದೆ. ಇದು ಕೂಡ ಅವರ ಬ್ರ್ಯಾಂಡ್ ಮೌಲ್ಯ ಏರಿಕೆಗೆ ನೆರವಾಗಲಿದೆ.