- ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭ
- ಆರ್ಸಿಬಿ ಮತ್ತು ಎಸ್ಆರ್ಎಚ್ ನಡುವೆ ಮೊದಲ ಪಂದ್ಯ
- ಐಪಿಎಲ್ ಶುರುವಿಗೂ ಮುನ್ನವೇ ನಾಲ್ವರು ಆಸೀಸ್ ಆಟಗಾರರು ಅಲಭ್ಯ
IPL 2026: ಐಪಿಎಲ್ 19ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ಮಧ್ಯೆ, ಸ್ಟಾರ್ ಆಟಗಾರರ ಅಲಭ್ಯತೆ ಕಾಡುತ್ತಿದ್ದು, ನಾಲ್ವರು ಆಸ್ಟ್ರೇಲಿಯಾ ಕ್ರಿಕೆಟಿಗರು ತಮ್ಮ ತಮ್ಮ ತಂಡಗಳಿಗೆ ಕೈಕೊಟ್ಟಿರುವುದು ಸದ್ಯ ಫ್ರಾಂಚೈಸಿಗಳ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿದೆ.
ಈ ಮೊದಲು ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್ ಮತ್ತು ವೇಗಿ ಜೋಶ್ ಹೇಜಲ್ವುಡ್ ತಾವು ಐಪಿಎಲ್ಗೆ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ನಾಯಕನಾಗಿರುವ ಕಮ್ಮಿನ್ಸ್, ತಂಡ ಸೇರುವುದಿಲ್ಲ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ, ಅವರ ಬದಲಿಗೆ ನಾಯಕನ ಸ್ಥಾನದಲ್ಲಿ ಇಶಾನ್ ಕಿಶನ್ ತಂಡವನ್ನು ಮುನ್ನಡೆಸಲಿದ್ದಾರೆ. ಸದ್ಯದ ಮಟ್ಟಿಗೆ ಆರ್ಸಿಬಿಯ ಮೊದಲೆರೆಡು ಪಂದ್ಯಗಳಿಂದ ದೂರ ಉಳಿದಿರುವ ಜೋಶ್, ತದನಂತರ ತಂಡವನ್ನು ಸೇರುವ ಮುನ್ಸೂಚನೆ ನೀಡಿದ್ದಾರೆ. ಆದರೆ, ಇಂಜುರಿಯಿಂದ ಸಂಪೂರ್ಣವಾಗಿ ಗುಣಮುಖರಾದರೆ ಮಾತ್ರ ಅವರು ತಂಡ ಸೇರಲಿದ್ದಾರೆ ಎಂಬ ಸಂಗತಿ ಇಲ್ಲಿ ಗಮನಾರ್ಹ.
ಕೆಲವು ಪಂದ್ಯಗಳಿಂದ ದೂರ
ಇವರ ಹಾದಿಯನ್ನೇ ಅನುಸರಿಸಿರುವ ಕೆಕೆಆರ್ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ನಾಥನ್ ಎಲ್ಲಿಸ್, ತಮ್ಮ ತಂಡಗಳ ಬೌಲಿಂಗ್ ಯೂನಿಟ್ಗೆ ದೊಡ್ಡ ಹೊಡೆತ ನೀಡಿದ್ದಾರೆ. ಇವರ ಬದಲಿಗೆ ಯಾರನ್ನು ಆಯಾ ಫ್ರಾಂಚೈಸಿಗಳು ಆಡಿಸಲಿದೆ? ಈ ರೀತಿ ಕಡೆಯಲ್ಲಿ ಕೈಕೊಡುವ ಆಟಗಾರರ ನಡೆಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು? ಎಂಬ ಪ್ರಶ್ನೆಗಳು ಸದ್ಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿವೆ,(ಏಜೆನ್ಸೀಸ್).