- ಟೀಮ್ ಇಂಡಿಯಾ ಪುರುಷರ ಸೀನಿಯರ್ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆ
- 15 ವರ್ಷದ ವಂಡರ್ ಕಿಡ್ ಬಗ್ಗೆ ಟೀಮ್ ಇಂಡಿಯಾ ದಿಗ್ಗಜನ ಹೇಳಿಕೆ
Vaibhav Sooryavanshi: ಇತ್ತೀಚೆಗಷ್ಟೇ ಆರ್ಸಿಬಿಯ ಅದ್ಧೂರಿ ಗೆಲುವಿನೊಂದಿಗೆ ಮುಕ್ತಾಯಗೊಂಡ ಐಪಿಎಲ್ 19ನೇ ಆವೃತ್ತಿಯಲ್ಲಿ 15 ವರ್ಷದ ಹುಡುಗನೊಬ್ಬ ಅಂತಾರಾಷ್ಟ್ರೀಯ ಹಾಗೂ ಅನುಭವಿ ಬೌಲರ್ಗಳನ್ನು ಮನಬಂದಂತೆ ಬೆಂಡೆತ್ತಿದ ದೃಶ್ಯ ಈಗಲೂ ಕ್ರಿಕೆಟ್ ಪ್ರಿಯರ ಕಣ್ಣಿನಲ್ಲಿ ಕಟ್ಟಿದಂತಿದೆ. ಆ ಅಬ್ಬರದ ಸಿಕ್ಸರ್ಗಳನ್ನು ಬಾರಿಸಿದ ವೈಭವದ ಬ್ಯಾಟಿಂಗ್ ಶೈಲಿಯನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಆತನ ಸ್ಫೋಟಕ ಬ್ಯಾಟಿಂಗ್ಗೆ ಸ್ವತಃ ಕ್ರಿಕೆಟ್ ದಿಗ್ಗಜರೇ ಅಕ್ಷರಶಃ ಬೆರಗಾಗಿ ಹೋಗಿದ್ದಾರೆ.
ಯಾವುದೇ ಬೌಲರ್ ಬರಲಿ, ಎಷ್ಟೇ ವೇಗದಲ್ಲಿ ಬೌಲ್ ಮಾಡಲಿ ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳನ್ನು ಹಿಗ್ಗಾಮುಗ್ಗಾ ಬಾರಿಸುವ ವೈಭವ್ ಸೂರ್ಯವಂಶಿ ಅದಾಗಲೇ ಟೀಮ್ ಇಂಡಿಯಾ ಪುರುಷ ಸೀನಿಯರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ನಿಜಕ್ಕೂ ಹುಬ್ಬೇರಿಸುವ ಸಂಗತಿಯಾಗಿದೆ. ಭವಿಷ್ಯದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ಗೆ ಈಗಾಗಲೇ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಈತನನ್ನು ಆಡಿಸುತ್ತಿರುವ ರಾಜಸ್ಥಾನ ರಾಯಲ್ಸ್ಗೆ ವೈಭವ್ ಲಕ್ಕಿ ಚಾರ್ಮ್ ಆಗಿದ್ದಾರೆ. ಮತ್ತೊಂದೆಡೆ, ಹಿರಿಯರ ತಂಡದಲ್ಲಿ ಆಡುವ ಅವಕಾಶ ಪಡೆದಿರುವ ವಂಡರ್ ಕಿಡ್ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿರುವ ವೈಭವ್ ಸೂರ್ಯವಂಶಿ ಇದೀಗ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಸೀನಿಯರ್ ತಂಡಕ್ಕೆ ಆಯ್ಕೆ ಆಗಿರುವುದು ಹಲವರಿಗೆ ಖುಷಿ ತಂದಿದೆ. ಮತ್ತೊಂದೆಡೆ, ಅತಿ ಕಿರಿಯ ಆಟಗಾರನ ಮೇಲೆ ದುಪ್ಪಟ್ಟು ಭರವಸೆ, ನಿರೀಕ್ಷೆಗಳನ್ನು ಇಟ್ಟುಕೊಂಡು ಚೀರಾಡುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಸದ್ಯ ಕಪಿಲ್ ದೇವ್ ಮಹತ್ವದ ಕಿವಿಮಾತು ನೀಡಿದ್ದಾರೆ.
ಸ್ಕೈ ಸ್ಫೋರ್ಟ್ಸ್ ಕ್ರಿಕೆಟ್ ಶೋ ಜೊತೆ ಮಾತನಾಡಿದ ಅವರು, ಆತ ಒಬ್ಬ ವಿಶೇಷ ಪ್ರತಿಭೆ. ಅಂತಾರಾಷ್ಟ್ರೀಯ ತಂಡಗಳಲ್ಲಿ ಆಡುವುದು ಅಷ್ಟು ಸುಲಭವಲ್ಲ. ವೈಭವ್ಗೆ ಸ್ವಲ್ಪ ಸಮಯ ಕೊಡಿ. ಈಗ ಹೊಂದಿಕೊಳ್ಳಲು ಆತನಿಗೂ ಸಮಯದ ಅಗತ್ಯವಿದೆ. ತನ್ನ ಸಾಮರ್ಥ್ಯವೇನು ಅನ್ನೋದನ್ನು ಈಗಾಗಲೇ ಸೂರ್ಯವಂಶಿ ಇಡೀ ಜಗತ್ತಿಗೆ ತೋರಿಸಿದ್ದಾನೆ. ಅದಕ್ಕೆ ನನಗೂ ಖುಷಿ ಇದೆ. ಆದರೆ, ಇಷ್ಟೊಂದು ಹೈಪ್! ಅತಿಯಾದ ನಿರೀಕ್ಷೆ ಸರಿಯಲ್ಲ. ಅದು ವೈಭವ್ ಆಟಕ್ಕೆ ದೊಡ್ಡ ಪೆಟ್ಟು ನೀಡಲಿದೆ. ಅವನ ಮೇಲೆ ಅಪಾರ ನಿರೀಕ್ಷೆಗಳ ಒತ್ತಡ ಹೇರಲಿದೆ ಎಂದರು.
ಈ ಸಮಯದಲ್ಲಿ ವೈಭವ್ ಸೂರ್ಯವಂಶಿ ಮೇಲೆ ಅಷ್ಟೊಂದು ನಿರೀಕ್ಷೆಗಳನ್ನು ಹೇರುವುದು ಸರಿಯಲ್ಲ. ಕ್ಲಬ್ ಮತ್ತು ಕಂಟ್ರಿ ಕ್ರಿಕೆಟ್ ನಡುವಿನ ವ್ಯತ್ಯಾಸವನ್ನು ನಿಧಾನವಾಗಿ ಆತ ಅರ್ಥ ಮಾಡಿಕೊಳ್ಳುತ್ತಾನೆ. ಈಗ ಎಲ್ಲರೂ ವೈಭವ್ಗೆ ಕೊಡಬೇಕಿರುವುದು ಸಮಯ ಅಷ್ಟೇ ಎಂದು ಹೇಳಿದರು,(ಏಜೆನ್ಸೀಸ್).