ಟೀಮ್ ಇಂಡಿಯಾ ಮಾಜಿ ನಾಯಕ ಗಂಗೂಲಿ, ಪೀಟರ್ಸೆನ್‌ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ
ದುಬೈ: ಭಾರತ ಪುರುಷರ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಮಹಿಳಾ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ ಜತೆಗೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸೆನ್‌ರನ್ನು ಐಸಿಸಿ ಹಾಲ್ ಫೇಮ್‌ಗೆ ಸೇರ್ಪಡೆಗೊಳಿಸಲಾಯಿತು. ಶನಿವಾರ ಎಡಿನ್‌ಬರ್ಗ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಐಸಿಸಿ ಚೇರ್ಮನ್ ಜಯ್ ಷಾ ಈ ಗೌರವ ಪ್ರದಾನ ಮಾಡಿದರು. ಇದರೊಂದಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಕ್ರಿಕೆಟಿಗರ ಸಂಖ್ಯೆ 125ಕ್ಕೇರಿತು.
ಸಮಾರಂಭಕ್ಕೆ ಗೈರಾಗಿದ್ದ 54 ವರ್ಷ ಸೌರವ್ ಗಂಗೂಲಿ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ. 1996ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ‘ದಾದಾ’ ಖ್ಯಾತಿಯ ಗಂಗೂಲಿ ನಾಯಕತ್ವ ವಹಿಸಿಕೊಂಡ ನಂತರ ಭಾರತೀಯ ಕ್ರಿಕೆಟ್ ಹೊಸ ಸ್ಪರ್ಶ ನೀಡಿದರು.
ಮ್ಯಾಚ್ ಫಿಕ್ಸಿಂಗ್ ಕಳಂಕದ ನಂತರ 2002ರಲ್ಲಿ ಇಂಗ್ಲೆಂಡ್‌ನಲ್ಲಿ ನಾಟ್‌ವೆಸ್ಟ್ ಸರಣಿ ಜಯ, 2003ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಂಟಿ ಚಾಂಪಿಯನ್ ಹಾಗೂ ಅದೇ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದರು. ಭಾರತ ಪರ 113 ಪಂದ್ಯ ಆಡಿರುವ ಅವರು, 7,212 ರನ್ ಕಲೆಹಾಕಿದರೆ, 311 ಏಕದಿನ ಪಂದ್ಯದಲ್ಲಿ 11,363 ರನ್‌ಗಳಿಸಿದ್ದರು. 2012ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಅವರು, ಬಿಸಿಸಿಐ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
2005 ಹಾಗೂ 2010ರ ಆಶಸ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸೆನ್, 2004ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 104 ಟೆಸ್ಟ್, 136 ಏಕದಿನ ಮತ್ತು 37 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಪ್ರತಿನಿಧಿಸಿರುವ ಅವರು 14 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. 2008ರಲ್ಲಿ ಟೆಸ್ಟ್ ಮತ್ತು ಏಕದಿನ ತಂಡವನ್ನು ಮುನ್ನಡೆಸಿದ್ದರು.
3ನೇ ಭಾರತೀಯ ಮಹಿಳಾ ಕ್ರಿಕೆಟರ್
ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ 100 ಪಂದ್ಯಗಳನ್ನಾಡಿದ ಮೊದಲಿಗರಾಗಿರುವ ಎಡಗೈ ಬ್ಯಾಟರ್ ಅಂಜುಮ್ ಚೋಪ್ರಾ ಐಸಿಸಿ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡ 3ನೇ ಭಾರತೀಯ ಮಹಿಳಾ ಕ್ರಿಕೆಟ್ ಎನಿಸಿದರು. ಮೂರು ಮಾದರಿಯಲ್ಲಿ ತಂಡವನ್ನು ಮುನ್ನಡೆಸಿರುವ ಅವರು, 2002ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ವಿದೇಶಿ ಟೆಸ್ಟ್ ಗೆದ್ದ ತಂಡದ ನಾಯಕಿ ಹಾಗೂ 2005ರ ಏಕದಿನ ವಿಶ್ವಕಪ್ ಫೈನಲ್ ಆಡಿದ ತಂಡದ ಸದಸ್ಯೆ ಆಗಿದ್ದರು. ಡಯಾನಾ ಎಡುಲ್ಜಿ (2023), ನೀತು ಡೇವಿಡ್ (2024) ಐಸಿಸಿ ಹಾಲ್ ಆಫ್ ಫೇಮ್ನಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟರ್‌ಗಳಾಗಿದ್ದಾರೆ.
"
ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿರುವುದು ನನಗೆ ಗೌರವ ತಂದಿದೆ. ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ನನ್ನ ಹೆಸರು ಸೇರ್ಪಡೆಗೊಂಡಿರುವುದು ನನ್ನ ನೆಚ್ಚಿನ ಕ್ಷಣಗಳಲ್ಲಿ ಒಂದಾಗಿರುಲಿದೆ.ಭಾರತವನ್ನು ಪ್ರತಿನಿಧಿಸುವುದು ಮತ್ತು ಶ್ರೇಷ್ಠ ಆಟಗಾರರೊಂದಿಗೆ ಆಡುವುದು ಒಂದು ಸುಯೋಗವಾಗಿದೆ.
— ಸೌರವ್ ಗಂಗೂಲಿ, ಟೀಮ್ ಇಂಡಿಯಾ ಮಾಜಿ ನಾಯಕ.