ಮಹೇಂದ್ರ ಸಿಂಗ್ ಧೋನಿ (ಎಡ), ಎಬಿ ಡಿವಿಲಿಯರ್ಸ್ (ಬಲ)
- ಇದೇ ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭ
- ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಮಹೇಂದ್ರ ಸಿಂಗ್ ಧೋನಿ ರೆಡಿ
- 'ಕ್ಯಾಪ್ಟನ್ ಕೂಲ್'ಗೆ ಸಲಹೆ ನೀಡಿದ ಮಾಜಿ ಆರ್ಸಿಬಿ ಕ್ರಿಕೆಟಿಗ
ನವದೆಹಲಿ: ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಭಾರತ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು. ಪ್ರಸ್ತುತ, ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡಿದ್ದು, ಕ್ರಿಕೆಟ್ ಪ್ರಿಯರ ಕಣ್ಣು ಐಪಿಎಲ್ ಮೇಲೆ ಬಿದ್ದಿದೆ. 10 ತಂಡಗಳ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸದ್ಯ ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ. ಈ ಟಿ20 ಲೀಗ್ ಇನ್ನೂ ಒಂದೆರೆಡು ತಿಂಗಳ ಕಾಲ ಕ್ರಿಕೆಟ್ ಪ್ರಿಯರಿಗಂತು ಭರಪೂರ ಮನರಂಜನೆ ನೀಡಲಿದೆ (MS Dhoni).
ಇದೇ ಮಾ.28ರಿಂದ ಐಪಿಎಲ್ 19ನೇ ಆವೃತ್ತಿ ಆರಂಭವಾಗಲಿದ್ದು, ಕಿಕ್ಸ್ಟಾರ್ಟ್ ಪಂದ್ಯದಲ್ಲಿ ಕಳೆದ ಬಾರಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ ಆಗಲಿವೆ. ಐಪಿಎಲ್ ಎಂದರೆ, ಬಹುತೇಕ ಕ್ರಿಕೆಟ್ ಪ್ರಿಯರು ಹುಚ್ಚೆದ್ದು ಕುಣಿಯುವುದು ಹಾಗೂ ಕುತೂಹಲದಿಂದ ಕಾಯುವುದೇ ಮೂವರು ದಿಗ್ಗಜರನ್ನು ನೋಡಲು. ಅದು ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ.
ಈ ಮೂವರ ಪೈಕಿ ಎಲ್ಲರ ಅಚ್ಚುಮೆಚ್ಚು 'ಕ್ಯಾಪ್ಟನ್ ಕೂಲ್', ಚೆನ್ನೈ ಸೂಪರ್ ಕಿಂಗ್ಸ್ನ ರೂವಾರಿ ಎಂ.ಎಸ್. ಧೋನಿ. 2008ರಿಂದ ಸಿಎಸ್ಕೆ ತಂಡವನ್ನು ಪ್ರತಿನಿಧಿಸುತ್ತ ಬಂದಿರುವ ಮಾಹಿ, ಕಳೆದ ಎರಡು ವರ್ಷಗಳಿಂದ ನಾಯಕತ್ವ ಬಿಟ್ಟು ತಂಡದಲ್ಲಿ ಕೇವಲ ಒಬ್ಬ ಆಟಗಾರನಾಗಿ, ರುತುರಾಜ್ ಗಾಯಕ್ವಾಡ್ ಅವರ ಕ್ಯಾಪ್ಟನ್ಸಿಯಲ್ಲಿ ಆಡುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು. 44ನೇ ವಯಸ್ಸಿನಲ್ಲಿ ತಂಡದ ಪರ ಮೈದಾನಕ್ಕಿಳಿಯಲು ದಿಗ್ಗಜನಿಗೆ ಆರ್ಸಿಬಿಯ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಒಂದೊಳ್ಳೆ ಸಲಹೆ ನೀಡಿದ್ದಾರೆ.
ಎಂಎಸ್ ಬ್ಯಾಟಿಂಗ್ ವಿಷಯದಲ್ಲಿ 8 ಅಥವಾ 9ನೇ ಕ್ರಮಾಂಕದಲ್ಲಿ ತಂಡದ ಪರ ಕ್ರೀಸ್ಗೆ ಇಳಿಯುವುದು ಬೇಡ. ತಮ್ಮ ಸ್ಥಾನವನ್ನು ತುಂಬಲು ಅವರು ಒತ್ತಡದಲ್ಲಿ ಸಿಲುಕುವುದು ಅವಶ್ಯಕತೆಯಿಲ್ಲ. ಅಷ್ಟಕ್ಕೂ, ಧೋನಿ ಆಡಬೇಕಿರುವ ಕ್ರಮಾಂಕ ಕೂಡ ಅದಲ್ಲ. ಮಾಹಿ ಕನಿಷ್ಠ 5-6 ಸ್ಥಾನದಲ್ಲಿ ಬಂದು ಬ್ಯಾಟಿಂಗ್ ಮಾಡಿದರೆ ಉತ್ತಮ. ವೈಯಕ್ತಿಕವಾಗಿ ನಾನು ಅವರನ್ನು 4ನೇ ಕ್ರಮಾಂಕದಲ್ಲಿ ನೋಡಲು ಬಯಸುತ್ತೇನೆ ಎಂದಿದ್ದಾರೆ,(ಏಜೆನ್ಸೀಸ್).