RCB  
ಕ್ರಿಕೆಟ್

32ನೇ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ RCB ಮಾಜಿ ಆಟಗಾರ!

ಬೆಂಗಳೂರು: ಭಾರತ ಟೆಸ್ಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್, RCB ಮಾಜಿ ಆಟಗಾರ(ಕೀಪರ್​), ಆಂಧ್ರಪ್ರದೇಶ ಮೂಲದ ಕೋನಾ ಶ್ರೀಕರ್ ಭರತ್ (ಕೆ.ಎಸ್. ಭರತ್) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸುವ ಮೂಲಕ ಕ್ರಿಕೆಟ್ ಪ್ರಿಯರಿಗೆ ಶಾಕ್ ನೀಡಿದ್ದಾರೆ. ಕೇವಲ 32ನೇ ವಯಸ್ಸಿನಲ್ಲಿಯೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಮುಕ್ತಾಯ ಹಾಡಿದ್ದು, ಈ ವಿಷಯವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ.
"ಭಾರತ ತಂಡವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯುನ್ನತ ಗೌರವವಾಗಿದೆ. ಈ ಅದ್ಭುತ ಜರ್ನಿಯಲ್ಲಿ ನನಗೆ ಬೆಂಬಲವಾಗಿ ನಿಂತ ನನ್ನ ಕುಟುಂಬಸ್ಥರು, ತರಬೇತುದಾರರು, ಸಹ ಆಟಗಾರರು ಹಾಗೂ ಬಿಸಿಸಿಐಗೆ (BCCI) ನಾನು ಯಾವಾಗಲೂ ಋಣಿಯಾಗಿರುತ್ತೇನೆ" ಎಂದು ಭರತ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಇದೇ ವೇಳೆ ತಮ್ಮ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಐಪಿಎಲ್‌ನಲ್ಲಿ ತಮಗೆ ಮೊದಲ ಅವಕಾಶ ನೀಡಿದ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಕಾರಣರಾದ ನಾಯಕ ರೋಹಿತ್ ಹಾಗೂ ಇಂಡಿಯಾ-ಎ ತಂಡದಿಂದ ಹಿಡಿದು ರಾಷ್ಟ್ರೀಯ ತಂಡದವರೆಗೆ ಬೆನ್ನುತಟ್ಟಿದ ದ್ರಾವಿಡ್ ಅವರ ಮಾರ್ಗದರ್ಶನವನ್ನು ಭರತ್ ಸ್ಮರಿಸಿದ್ದಾರೆ.

ಅಂತರರಾಷ್ಟ್ರೀಯ ಮತ್ತು ದೇಶಿ ಕ್ರಿಕೆಟ್ ಹಾದಿ

ಕಳೆದ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಭರತ್, ಭಾರತದ ಪರ 7 ಟೆಸ್ಟ್ ಪಂದ್ಯಗಳನ್ನು ಆಡಿ 221 ರನ್ ಗಳಿಸಿದ್ದಾರೆ. ವಿಕೆಟ್ ಕೀಪರ್ ಆಗಿ 18 ಕ್ಯಾಚ್ ಹಾಗೂ ಒಂದು ಅದ್ಭುತ ಸ್ಟಂಪಿಂಗ್ ಮಾಡಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ದೊಡ್ಡ ಮಟ್ಟದ ಯಶಸ್ಸು ಕಾಣದಿದ್ದರೂ, ದೇಶಿ ಕ್ರಿಕೆಟ್‌ನಲ್ಲಿ ಭರತ್ ಅತ್ಯುತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಆಡಿರುವ 113 ಪ್ರಥಮ ದರ್ಜೆ (First-Class) ಪಂದ್ಯಗಳಲ್ಲಿ 11 ಶತಕ ಹಾಗೂ 34 ಅರ್ಧಶತಕಗಳ ನೆರವಿನಿಂದ ಒಟ್ಟು 6102 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 308 ರನ್ ಇವರ ಗರಿಷ್ಠ ಸ್ಕೋರ್ ಆಗಿದೆ. ಇನ್ನು 82 ಲಿಸ್ಟ್-ಎ ಪಂದ್ಯಗಳಿಂದ 2692 ರನ್ (8 ಶತಕ, 10 ಅರ್ಧಶತಕ) ಹಾಗೂ 91 ಟಿ20 ಪಂದ್ಯಗಳಿಂದ 1812 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿರುವ ಇವರು 199 ರನ್ ಬಾರಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ಮುಂಬರುವ ದಿನಗಳಲ್ಲಿ ತರಬೇತಿ (Coaching) ಮತ್ತು ಮಾರ್ಗದರ್ಶನ (Mentoring) ನೀಡುವ ಮೂಲಕ ಯುವ ಆಟಗಾರರ ಬೆಳವಣಿಗೆಗೆ ಶ್ರಮಿಸುವುದಾಗಿ ಕೆ.ಎಸ್. ಭರತ್ ತಮ್ಮ ಭವಿಷ್ಯದ ಯೋಜನೆಯನ್ನು ಪ್ರಕಟಿಸಿದ್ದಾರೆ,(ಏಜೆನ್ಸೀಸ್​).