- ಐಪಿಎಲ್ 2026ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಸೆನ್ಸೇಷನ್
- ಅತೀ ಕಿರಿಯ ವಯಸ್ಸಿನಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ, ಕೀರ್ತಿ ಸಂಪಾದಿಸಿದ ವೈಭವ್ ಸೂರ್ಯವಂಶಿ
- ಸ್ಟಾರ್ ಯುವ ಕ್ರಿಕೆಟಿಗನಿಗೆ ಮಾಜಿ ಕ್ರಿಕೆಟಿಗನಿಂದ ಎಚ್ಚರಿಕೆ
Vaibhav Sooryavanshi: ಪ್ರಸ್ತುತ ನಡೆಯುತ್ತಿರುವ 19ನೇ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವುದು ಬಹುತೇಕ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತೇ ಇದೆ. ಈಗಾಗಲೇ ತಮ್ಮ ಬ್ಯಾಟಿಂಗ್ ಬತ್ತಳಿಕೆಯಿಂದ ಎರಡು ಆಕರ್ಷಕ ಅರ್ಧಶತಕಗಳು ಸಿಡಿಸಿರುವ 'ಬೇಬಿ ಬಾಸ್', ಅಂತಾರಾಷ್ಟ್ರೀಯ ಮತ್ತು ಅನುಭವಿ ವಿಶ್ವದರ್ಜೆಯ ಬೌಲರ್ಗಳಿಗೆ ಬೆವರಿಳಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರ. ಕೇವಲ ಐಪಿಎಲ್ನಲ್ಲಿ ಮಾತ್ರವಲ್ಲದೇ, ಅಂಡರ್-19 ತಂಡದಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿರುವ ವೈಭವ್, ಈಗಾಗಲೇ ಒಂದಷ್ಟು ಬ್ರ್ಯಾಂಡ್ಗಳಿಗೆ ಸಹಿ ಹಾಕಿದ್ದಾರೆ. ಸದ್ಯ ಇದೇ ಈಗ ಮಾಜಿ ಕ್ರಿಕೆಟಿಗನ ಎಚ್ಚರಿಕೆಗೆ ಕಾರಣವಾಗಿದೆ.
ಅತೀ ಚಿಕ್ಕ ವಯಸ್ಸಿಗೆ ದೊಡ್ಡ ಹೆಸರು ಮಾಡಿರುವ ವೈಭವ್, ಅಲ್ಪ ಸಮಯದಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಜನಪ್ರಿಯತೆ ಮೇಲಕ್ಕೇರುತ್ತಿದ್ದಂತೆ ಒಂದಷ್ಟು ಬ್ರ್ಯಾಂಡ್ಗಳ ಆ್ಯಡ್ಗೆ ಸೂರ್ಯವಂಶಿ ಓಕೆ ಎಂದಿದ್ದಾರೆ. ಯುವ ಆಟಗಾರನ ಬೆಳವಣಿಗೆ ಕಂಡು ಕ್ರಿಕ್ಬಜ್ ಜೊತೆ ಮಾತನಾಡಿದ ಮಾಜಿ ನ್ಯೂಜಿಲೆಂಡ್ ಆಟಗಾರ ಸಿಮನ್ ಡೌಲ್, ಇಂದು ಯಾವ ಬ್ರ್ಯಾಂಡ್ಗಳು ಅವನನ್ನು ಹುಡುಕಿಕೊಂಡು ಬಂದಿವೆಯೋ, ಅದೇ ಸಂಸ್ಥೆಗಳು ಅವನಿಂದ ಉತ್ತಮ ಪ್ರದರ್ಶನ ಬರಲಿಲ್ಲ ಎಂದರೆ, ಖಂಡಿತ ಕೈಬಿಡುವುದು ಖಚಿತ ಎಂದು ಹೇಳಿದ್ದಾರೆ.
ವೈಭವ್ ಅದಾಗಲೇ ಒಬ್ಬ ಸೂಪರ್ಸ್ಟಾರ್. ಆತನ ಪ್ರದರ್ಶನ ಹೀಗೆ ಮುಂದುವರಿದರೆ, ಸೂಪರ್ಸ್ಟಾರ್ ಪಟ್ಟ ಉಳಿಯಲಿದೆ. ಈಗಾಗಲೇ ಸೂರ್ಯವಂಶಿಯನ್ನು ಹಲವು ಮ್ಯಾನೇಜ್ಮೆಂಟ್ ಕಂಪನಿಗಳು ಹುಡುಕಿಕೊಂಡು ಬರುತ್ತಿವೆ. ಈ ಯುವ ಕ್ರಿಕೆಟಿಗನಿಂದ ನಾವೆಷ್ಟು ದುಡ್ಡು ಮಾಡಬಹುದು ಎಂಬ ಲೆಕ್ಕಾಚಾರಗಳಿಗೆ ಇಳಿದಿವೆ. ಇಲ್ಲಿ ಅಸಲಿ ಸತ್ಯವೇನು ಎಂದರೆ, ಇದೇ ವೈಭವ್ ಏನಾದರೂ ಬಿರುಗಾಳಿಯ ಬ್ಯಾಟಿಂಗ್ ನಿಲ್ಲಿಸಿದರೆ, ಅದೇ ಸಂಸ್ಥೆಗಳು ಬೇರೆ ಒಂದು ಮುಖವನ್ನು ಹುಡುಕುಲು ಪ್ರಾರಂಭಿಸುತ್ತೆ ಎಂದಿದ್ದಾರೆ ಡೌಲ್.
ಡೌಲ್ ಮಾತಿಗೆ ಒಪ್ಪಿಗೆ ಸೂಚಿಸಿದ ಭಾರತೀಯ ಜನಪ್ರಿಯ ಕಮೆಂಟೇಟರ್ ಹರ್ಷ ಭೋಗ್ಲೆ, ವೈಭವ್ ರೀತಿಯೇ ಸಚಿನ್ ತೆಂಡೂಲ್ಕರ್ ಅವರು ಚಿಕ್ಕ ವಯಸ್ಸಿಗೆ ಕ್ರಿಕೆಟ್ಗೆ ಬಂದರು. ಆದರೆ, ಇಲ್ಲಿ ಸಚಿನ್ ತಮ್ಮ ಕುಟುಂಬದಿಂದ ಬಲವಾದ ಬೆಂಬಲವನ್ನು ಪಡೆದಿದ್ದರು. ಅವರು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದಾರೋ, ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು. ಸೂರ್ಯವಂಶಿಗೂ ಭವಿಷ್ಯದಲ್ಲಿ ಅವರ ಕುಟುಂಬದಿಂದ ಇದೇ ರೀತಿಯ ಬೆಂಬಲದ ಅಗತ್ಯವಿದೆ ಎಂದು ಹೇಳಿದರು,(ಏಜೆನ್ಸೀಸ್).