ಕರ್ನಾಟಕದ ಕ್ರಿಕೆಟಿಗ ಕೆ. ಗೌತಮ್ ವಿದಾಯ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕರ್ನಾಟಕದ ಆಫ್ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಕೃಷ್ಣಪ್ಪ ಗೌತಮ್ (k gowtham) ಸೋಮವಾರ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದರು. ಈ ಮೂಲಕ 14 ವರ್ಷಗಳ ವೃತ್ತೀಜಿವನಕ್ಕೆ ತೆರೆ ಎಳೆದರು. ಕರ್ನಾಟಕ ಪರ ವಿವಿಧ ಕ್ರಿಕೆಟ್ ಪ್ರಕಾರದಲ್ಲಿ ಒಟ್ಟು 394 ವಿಕೆಟ್ ಕಬಳಿಸಿರುವ ಅವರು, 2021ರಲ್ಲಿ ಭಾರತ ಪರ ಏಕೈಕ ಏಕದಿನ ಪಂದ್ಯ ಆಡುವ ಅವಕಾಶ ಪಡೆದಿದ್ದರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ 37 ವರ್ಷದ ಕೆ. ಗೌತಮ್, "ನನಗೆ ಬೇರೆ ರಾಜ್ಯಗಳ ಪರ ಆಡುವ ಆರ್ಗಳು ಬಂದಿದ್ದರೂ, ನಾನು ಎಂದಿಗೂ ದೇಶೀಯ ಕ್ರಿಕೆಟ್ನಲ್ಲಿ ಕರ್ನಾಟಕ ಹೊರತಾಗಿ ಬೇರೆ ತಂಡದ ಪರ ಆಡುವ ಯೋಚನೆ ಮಾಡಲಿಲ್ಲ. ಕರ್ನಾಟಕದ ಕ್ರಿಕೆಟಿಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ' ಎಂದು ತಿಳಿಸಿದರು. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸಂತೋಷ್ ಮೆನನ್ ಈ ವೇಳೆ ಹಾಜರಿದ್ದು, ಮುಂದಿನ ಇನಿಂಗ್ಸ್ಗೆ ಶುಭ ಹಾರೈಸಿದರು.
ಹರ್ಭಜನ್ ಸಿಂಗ್ ಅವರ ಬೌಲಿಂಗ್ ಶೈಲಿಯ ಹೋಲಿಕೆಯಿಂದಾಗಿ ಸಹ&ಆಟಗಾರರಿಂದ "ಬಜ್ಜಿ' ಎಂದೇ ಪ್ರೀತಿಯಿಂದ ಕರೆಯಲ್ಪಡುವ ಗೌತಮ್, ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ಕಿಂಗ್ಸ್ ಮತ್ತು ಲಖನೌ ಸೂಪರ್ಜೈಂಟ್ಸ್ ತಂಡಗಳ ಪರ ಆಡಿದ್ದಾರೆ. ಐಪಿಎಲ್ನಲ್ಲಿ ಒಟ್ಟು 36 ಪಂದ್ಯ ಆಡಿದ್ದು, 21 ವಿಕೆಟ್ ಕಬಳಿಸಿದ್ದಾರೆ.
ಗೌತಮ್ 2021ರ ಐಪಿಎಲ್ ಹರಾಜಿನಲ್ಲಿ 9.25 ಕೋಟಿ ರೂ.ಗೆ ಸಿಎಸ್ಕೆ ತಂಡ ಸೇರಿದ್ದರು. ಇದು ಆಗ ಅನ್ಕ್ಯಾಪ್ಡ್ (ದೇಶೀಯ ಕ್ರಿಕೆಟಿಗ) ಕ್ರಿಕೆಟಿಗನೊಬ್ಬ ಪಡೆದ ಗರಿಷ್ಠ ಬಿಡ್ ಎನಿಸಿತ್ತು. ಅದಕ್ಕೆ ಮುನ್ನ 6.2 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು.
ಮಾಜಿ ಕಬಡ್ಡಿ ಆಟಗಾರ ಎಂ. ಕೃಷ್ಣಪ್ಪ ಅವರ ಪುತ್ರನಾದ ಗೌತಮ್, 2012ರಲ್ಲೇ ಕರ್ನಾಟಕ ಪರ ರಣಜಿಗೆ ಪದಾರ್ಪಣೆ ಮಾಡಿದ್ದರೂ, ಬಳಿಕ ಹೊರಬಿದ್ದಿದ್ದರು. 2016ರಲ್ಲಿ ಪುನರಾಗಮನ ಕಂಡಿದ್ದ ಅವರು, ಆಡಿದ ಮೊದಲ 3 ಪಂದ್ಯಗಳಲ್ಲೇ 18 ವಿಕೆಟ್ ಕಬಳಿಸಿ ಸ್ಥಾನ ಭದ್ರಪಡಿಸಿಕೊಂಡಿದ್ದರು. 2019&20ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ನಲ್ಲಿ ತಮಿಳುನಾಡು ವಿರುದ್ಧದ ಫೈನಲ್ನ ಕೊನೇ ಓವರ್ನಲ್ಲಿ 13 ರನ್ ರಸಿ ಕರ್ನಾಟಕಕ್ಕೆ 1 ರನ್ನಿಂದ ರೋಚಕ ಗೆಲುವು ತಂದುಕೊಟ್ಟಿದ್ದರು. 2019ರ ರಣಜಿ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 8 ವಿಕೆಟ್ ಗೊಂಚಲು ಪಡೆದು 26 ರನ್ ಗೆಲುವು ತಂದುಕೊಟ್ಟಿದ್ದರು. 2023ರ ಫೆಬ್ರವರಿಯಲ್ಲಿ ಅವರು ಕರ್ನಾಟಕ ಪರ ಕೊನೇ ರಣಜಿ ಪಂದ್ಯವಾಡಿದ್ದರು.
ಕೆ. ಗೌತಮ್ ನಿವೃತ್ತಿಯ ನಂತರ ವೀಕ್ಷಕ ವಿವರಣೆಕಾರ ಮತ್ತು ತರಬೇತುದಾರರಾಗಿ ಕಾರ್ಯನಿರ್ವಹಿಸುವತ್ತ ಗಮನಹರಿಸಲಿದ್ದಾರೆ. ಹಾಲಿ ವರ್ಷದ ಮಹಾರಾಜ ಟ್ರೋಫಿ ವೇಳೆ ಅವರು ಮೈಸೂರು ವಾರಿಯರ್ಸ್ ತಂಡದ ಮೆಂಟರ್ ಆಗಿದ್ದರು.
ಕೆ. ಗೌತಮ್ 2021ರ ಜುಲೈ 23ರಂದು ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಪರ ಏಕೈಕ ಪಂದ್ಯವನ್ನು ಆಡಿದ್ದರು. ಶಿಖರ್ ಧವನ್ ಸಾರಥ್ಯದಲ್ಲಿ ಆಡಿದ ಈ ಏಕೈಕ ಏಕದಿನ ಪಂದ್ಯದಲ್ಲಿ 2 ರನ್ ಮತ್ತು 1 ವಿಕೆಟ್ ಗಳಿಸಿದ್ದರು. 33ನೇ ವಯಸ್ಸಿನಲ್ಲಿ ಅವರು ಭಾರತ ಪರ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದರು. ಅದೇ ವರ್ಷ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಅವರು ಭಾರತ ತಂಡದ ನೆಟ್ ಬೌಲರ್ ಕೂಡ ಆಗಿದ್ದರು.
ಕೆಪಿಎಲ್ನಲ್ಲಿ ಶತಕ/8 ವಿಕೆಟ್
ಕೆ. ಗೌತಮ್ 2019ರ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ಸರ್ವಶ್ರೇಷ್ಠ ಆಲ್ರೌಂಡ್ ನಿರ್ವಹಣೆ ಪ್ರದರ್ಶಿಸಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆ ಪಂದ್ಯದಲ್ಲಿ ಅವರು ಬಳ್ಳಾರಿ ಟಸ್ಕರ್ಸ್ ಪರ 56 ಎಸೆತಗಳಲ್ಲಿ 7 ಬೌಂಡರಿ, 13 ಸಿಕ್ಸರ್ ಸಹಿತ ಅಜೇಯ 134 ರನ್ ಸಿಡಿಸಿದ್ದರು. ಬಳಿಕ ಬೌಲಿಂಗ್ನಲ್ಲಿ 4 ಓವರ್ಗಳ ದಾಳಿಯಲ್ಲಿ 15 ರನ್ ನೀಡಿ 8 ವಿಕೆಟ್ ಕಬಳಿಸುವ ಮೂಲಕ ದಾಖಲೆ ಬರೆದಿದ್ದರು.