Alcoholism 
ಕ್ರಿಕೆಟ್

ಯಾರೂ ನನಗೆ ಹೆಣ್ಣು ಕೊಡಲು ಸಿದ್ಧರಿರಲಿಲ್ಲ: ಖಿನ್ನತೆ ಮತ್ತು ಮದ್ಯವ್ಯಸನದ ನರಕಯಾತನೆ ಬಿಚ್ಚಿಟ್ಟ ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗ! | Alcoholism

ಚೆನ್ನೈ: ಕ್ರಿಕೆಟ್ ಲೋಕದ ಉತ್ತುಂಗದಲ್ಲಿದ್ದಾಗ ಇಡೀ ಜಗತ್ತೇ ಅವರ ಕೈಯ್ಯಲ್ಲಿತ್ತು. ಆದರೆ, ಕಾಲಕ್ರಮೇಣ ಅದೇ ಜಗತ್ತು ಅವರತ್ತ ಬೆನ್ನುಹಾಕಿತು. ಭಾರತದ ಮಾಜಿ ಸ್ಟಾರ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ (L Sivaramakrishnan) ತಮ್ಮ ಜೀವನದ ಅತ್ಯಂತ ಕಠಿಣ ಮತ್ತು ಕರಾಳ ದಿನಗಳ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಖಿನ್ನತೆ (Depression) ಮತ್ತು ಮದ್ಯವ್ಯಸನ (Alcoholism) ಒಬ್ಬ ಮನುಷ್ಯನನ್ನು ಹೇಗೆ ಪಾತಾಳಕ್ಕೆ ತಳ್ಳುತ್ತದೆ ಎಂಬುದಕ್ಕೆ ಅವರ ಮಾತುಗಳೇ ಸಾಕ್ಷಿ.

ನರಕವಾಗಿದ್ದ ವೈಯಕ್ತಿಕ ಜೀವನ!

ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನೋವನ್ನು ಹಂಚಿಕೊಂಡಿರುವ ಶಿವರಾಮಕೃಷ್ಣನ್, "ನಾನು ಖಿನ್ನತೆ ಮತ್ತು ಮದ್ಯದ ಚಟಕ್ಕೆ ದಾಸನಾಗಿದ್ದಾಗ ನನ್ನ ಜೀವನ ದಿಕ್ಕಾಪಾಲಾಗಿತ್ತು. ಆ ಸಮಯದಲ್ಲಿ ನನ್ನನ್ನು ವಿವಾಹವಾಗಲು ಯಾರೂ ಸಿದ್ಧರಿರಲಿಲ್ಲ. 'ಯಾರೂ ತಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಲು ಬಯಸುತ್ತಿರಲಿಲ್ಲ' (Nobody wanted their daughter to marry me). ಇದು ನನ್ನ ಜೀವನದ ಅತ್ಯಂತ ನೋವಿನ ಸಂಗತಿಯಾಗಿತ್ತು," ಎಂದು ಭಾವುಕರಾಗಿ ಹೇಳಿದ್ದಾರೆ.
"ನನ್ನ ತಂದೆ-ತಾಯಿ ನಾನು ಟೆಸ್ಟ್ ಕ್ರಿಕೆಟಿಗ, ಸ್ವಂತ ಮನೆ ಇದೆ ಎಂದು ಮದುವೆ ಜಾಹೀರಾತು ನೀಡಿದ್ದರು. ಆದರೆ ಎರಡು ವಾರಗಳ ನಂತರ ಪೆಟ್ಟಿಗೆ ತೆರೆದು ನೋಡಿದಾಗ ಅಲ್ಲಿ ಒಂದೂ ಅರ್ಜಿ ಇರಲಿಲ್ಲ! ಅಂದರೆ, ನನ್ನ ಬಗ್ಗೆ ಹರಡಿದ್ದ ಸುಳ್ಳು ಸುದ್ದಿಗಳು ಎಷ್ಟು ಭೀಕರವಾಗಿದ್ದವೆಂದರೆ, ಯಾರೂ ತಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಲು ಸಿದ್ಧರಿರಲಿಲ್ಲ," ಎಂದು ಶಿವರಾಮಕೃಷ್ಣನ್ ತಮ್ಮ ನೋವು ತೋಡಿಕೊಂಡಿದ್ದಾರೆ.

ಖಿನ್ನತೆಯ ಸುಳಿಗೆ ಸಿಲುಕಿದ ಪ್ರತಿಭೆ

1983-84ರ ಅವಧಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಶಿವರಾಮಕೃಷ್ಣನ್ ಅತಿ ದೊಡ್ಡ ಭರವಸೆಯಾಗಿ ಮೂಡಿಬಂದಿದ್ದರು. ಆದರೆ, ಕಳಪೆ ಫಾರ್ಮ್ ಮತ್ತು ಮಾನಸಿಕ ಒತ್ತಡ ಅವರನ್ನು ಮದ್ಯದ ದಾಸನನ್ನಾಗಿ ಮಾಡಿತು.ಮೈದಾನದಲ್ಲಿ ಸಾವಿರಾರು ಜನರ ಚಪ್ಪಾಳೆ ಗಿಟ್ಟಿಸುತ್ತಿದ್ದ ಆಟಗಾರ, ವೈಯಕ್ತಿಕ ಜೀವನದಲ್ಲಿ ಸಂಪೂರ್ಣ ಒಂಟಿಯಾಗಿದ್ದರು. ಖಿನ್ನತೆಯಿಂದ ತಪ್ಪಿಸಿಕೊಳ್ಳಲು ಮದ್ಯದ ಮೊರೆ ಹೋದ ಇವರು, ಅದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದರು. ಸಮಾಜ ಅವರನ್ನು ನೋಡುವ ದೃಷ್ಟಿಯೇ ಬದಲಾಗಿತ್ತು, ಇದು ಅವರನ್ನು ಮತ್ತಷ್ಟು ಕುಗ್ಗುವಂತೆ ಮಾಡಿತು.

ಹೋರಾಡಿ ಮೇಲೆದ್ದ ಛಲಗಾರ

ತಮ್ಮ ಅಂಧಕಾರದ ದಿನಗಳನ್ನು ನೆನಪಿಸಿಕೊಂಡ ಅವರು, "ಜೀವನದಲ್ಲಿ ಕೆಳಕ್ಕೆ ಬಿದ್ದಾಗ ಅಲ್ಲಿಂದ ಮೇಲೆ ಏಳುವುದು ಸುಲಭವಲ್ಲ. ಆದರೆ, ನಾನು ನನ್ನ ಆಂತರಿಕ ಶಕ್ತಿಯನ್ನು ಕಂಡುಕೊಂಡೆ. ಇಂದು ನಾನು ಆ ಕೆಟ್ಟ ದಿನಗಳಿಂದ ಹೊರಬಂದಿದ್ದೇನೆ," ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ. 
ಪ್ರತಿಭಾನ್ವಿತ ಕ್ರಿಕೆಟ್​ ಆಟಗಾರ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು 2026 ಮಾರ್ಚ್ 20ರಂದು ಬಿಸಿಸಿಐ ಕಾಮೆಂಟರಿ ಹುದ್ದೆಗೆ ಗುಡ್​ಬೈ ಹೇಳಿದ್ದರು. ಇದಕ್ಕೆ ಕಾರಣ ಏನು ಎಂಬುದನ್ನು ನೇರವಾಗಿಯೇ ತಿಳಿಸಿದ್ದರು. ಲಕ್ಷ್ಮಣ್​ ಅವರು ಹದಿಹರೆಯದಲ್ಲಿ ಮೂಡಿಸಿದ್ದ ಭರವಸೆಯನ್ನು ಇಂದು ಪರಿಪೂರ್ಣ ಮಾಡಲಾಗುತ್ತಿಲ್ಲ. ಕಾರಣ ಅವರ ಮೇಲಾಗಿದ್ದ ವರ್ಣ ಭೇದ ಬಿಟ್ಟು ಮತ್ತೇನು ಇಲ್ಲ ಎಂದು ಹೇಳಿದ್ದರು,(ಏಜೆನ್ಸೀಸ್).