ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್
- ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ ಕೆಕೆಆರ್
- ಬಿಸಿಸಿಐ ನಿರ್ದೇಶನದ ಮೇರೆಗೆ 2026ರ ಐಪಿಎಲ್ನಿಂದ ಕೈಬಿಟ್ಟ ಕೋಲ್ಕತ ನೈಟ್ ರೈಡರ್ಸ್
- ಕ್ರಿಕೆಟ್‌ನಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದ ಮಾಜಿ ಕ್ರಿಕೆಟಿಗ
ನವದೆಹಲಿ: ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಸೇರಿ ಒಂದಷ್ಟು ಕ್ರಿಕೆಟಿಗರನ್ನು ಐಪಿಎಲ್ನಿಂದ ಕೈಬಿಡಿ ಎಂಬ ಕೂಗುಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ. ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಲೀಕ ಹಾಗೂ ನಟ ಶಾರುಖ್ ಖಾನ್ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು, ಬಾಂಗ್ಲಾದೇಶದಲ್ಲಿ ಹಿಂದುಗಳ ಕೊಲೆ ಆಗುತ್ತಿರುವಾಗ, ಅಲ್ಲಿನ ಕ್ರಿಕೆಟಿಗರನ್ನು ಇಲ್ಲಿ ಆಡಿಸುವುದು ಎಷ್ಟು ಸರಿ? ಇದೆಲ್ಲ ಇಲ್ಲಿಗೆ ಅಂತ್ಯಗೊಳ್ಳಬೇಕು ಎಂದು ಕಿಡಿಕಾರಿದ್ದರು. ಅಂತೆಯೇ, ಬಿಸಿಸಿಐ ನಿರ್ದೇಶನದಂತೆ ಕೆಕೆಆರ್ ಇದೀಗ ಮುಸ್ತಾಫಿಜುರ್ರನ್ನು 2026ರ ಐಪಿಎಲ್ನಿಂದ ಕೈಬಿಟ್ಟಿದೆ. ಆದ್ರೆ, ಈ ನಿರ್ಧಾರಕ್ಕೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮದನ್ ಲಾಲ್ ಕಿಡಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ಮದನ್ ಲಾಲ್, "ರಾಜಕೀಯ ಪ್ರಭಾವ ಕ್ರಿಕೆಟ್‌ನಲ್ಲಿ ಹೆಚ್ಚಾಗಿವೆ. ಇದರಿಂದ ಆಟಗಾರರು ದುರ್ಬಲರಾಗುತ್ತಿದ್ದಾರೆ ಎಂಬುದನ್ನು ಪರಿಸ್ಥಿತಿಗಳು ಹೇಳುತ್ತಿವೆ. ಬಾಂಗ್ಲಾ ಕ್ರಿಕೆಟಿಗ ಮುಸ್ತುಫಿಜುರ್ ರೆಹಮಾನ್ರನ್ನು ಕೈಬಿಡುವಂತೆ ಬಿಸಿಸಿಐ ಕೆಕೆಆರ್ ಮೇಲೆ ಒತ್ತಾಯ ಹೇರಿದೆ. ಇದನ್ನು ಪ್ರಶ್ನಿಸಲು ಸಾಧ್ಯವಾಗದ ಕಾರಣ, ಫ್ರಾಂಚೈಸಿಯ ಮಾಲೀಕರಾಗಲಿ ಅಥವಾ ಇನ್ಯಾರಾದರೂ ಆಗಲಿ, ಆದೇಶದಂತೆ ವೇಗಿಯನ್ನು 2026ರ ಐಪಿಎಲ್ನಿಂದ ಕೈಬಿಟ್ಟಿದೆ" ಎಂದಿದ್ದಾರೆ.
ನನಗಿಲ್ಲಿ ಒಂದು ಅರ್ಥವಾಗ್ತಿಲ್ಲ. ಅದೇನೆಂದರೆ, ಕ್ರೀಡೆ ಎತ್ತ ಸಾಗುತ್ತಿದೆ. ಕ್ರಿಕೆಟ್‌ನಲ್ಲಿ ರಾಜಕೀಯ ಬೆರೆಸುವುದು ಏಕೆ? ಹೌದು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗಳು ತೀವ್ರ ಬೇಸರ, ನೋವು ತಂದಿದೆ. ಅದರಲ್ಲಿ ಅನುಮಾನವಿಲ್ಲ. ಆದರೆ, ಇದರಿಂದ ಆಟಗಾರರಿಗೆ ಸಂಕಷ್ಟ ತಂದಿಡುವುದು ಸರಿಯಲ್ಲ. ರಾಜಕೀಯ ಎಂದಿಗೂ ಕ್ರೀಡೆಯಲ್ಲಿ ಬೆರೆಯಬಾರದು" ಎಂದಿದ್ದಾರೆ.
ಸಿಎಸ್ಕೆ, ಡೆಲ್ಲಿ ಕ್ಯಾಪಿಟಲ್ಸ್...
2025ರ ಡಿಸೆಂಬರ್ನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವು ಮುಸ್ತಾಫಿಜುರ್ ರೆಹಮಾನ್ ಅವರನ್ನು 9.20 ಕೋಟಿ ರೂ.ಗೆ ಖರೀದಿ ಮಾಡಿತು. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಟ್ ತಂಡಗಳ ಪರ ಆಡಿರುವ ಎಡಗೈ ವೇಗಿ, ಇತರೆ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಮುಸ್ತುಫಿಜುರ್ಗೆ ನಮ್ಮ ತಂಡದಲ್ಲಿ ಸ್ಥಾನ ಕೊಡಬೇಕು ಎಂದು ಮೊದಲೇ ಕಣ್ಣಿಟ್ಟಿದ್ದ ಕೆಕೆಆರ್, ಅಂತೆಯೇ ಅವರನ್ನು ಬಿಡ್ಡಿಂಗ್ನಲ್ಲಿ ಖರೀದಿಸಿ, ಒಪ್ಪಂದ ಮಾಡಿಕೊಂಡಿತು. ಆದರೆ, ಆ ಲೆಕ್ಕಾಚಾರಗಳೆಲ್ಲವೂ ಇದೀಗ ತಲೆಕೆಳಗಾಗಿವೆ,(ಏಜೆನ್ಸೀಸ್).