ನೋವಿನಿಂದ ಬಳಲುತ್ತಿದ್ದ ಕೃನಾಲ್ ಪಾಂಡ್ಯ
- ಎಂಐ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು
- ಈ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ತಂಡದ ಪರ ಏಕಾಂಗಿ ಹೋರಾಟ
- ಕಾಲಿನ ನೋವಿನಿಂದ ಮೈದಾನದಲ್ಲಿ ಕುಸಿದ ಪಾಂಡ್ಯ ಬಗ್ಗೆ ವ್ಯಂಗ್ಯ
- ಮಾಜಿ ಸಿಎಸ್ಕೆ ಆಟಗಾರನ ಮಾತಿಗೆ ಆರ್ಸಿಬಿ ಅಭಿಮಾನಿಗಳು ಗರಂ
Krunal Pandya: ನಿನ್ನೆ ರಾಯ್ಪುರದ ಅತಿದೊಡ್ಡ ಕ್ರೀಡಾಂಗಣದಲ್ಲಿ ನಡೆದ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ದಾಖಲಿಸಿತು. ಕೊನೆಯ ಬಾಲ್ವರೆಗೂ ತಲುಪಿದ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ರಜತ್ ಪಾಟಿದಾರ್ ಪಡೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವುದರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಲೀಗ್ನಿಂದ ಹೊರನೂಕಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಕೃನಾಲ್ ಪಾಂಡ್ಯ ಬಗ್ಗೆ ಲೈವ್ನಲ್ಲಿ ಮಾಜಿ ಸಿಎಸ್ಕೆ ಆಟಗಾರ ಆಡಿದ ಮಾತು ಸದ್ಯ ಆರ್ಸಿಬಿ ಅಭಿಮಾನಿಗಳ ಪಿತ್ತವನ್ನು ನೆತ್ತಿಗೇರಿಸಿದೆ.
73 ರನ್ಗಳನ್ನು ಬಾರಿಸಿದ ಕೃನಾಲ್ ಪಾಂಡ್ಯ, ಆರ್ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಏಕಾಂಗಿ ಹೋರಾಟದ ಮಧ್ಯೆ ಓಡಲಾಗದೆ, ಕೆಲ ಸಮಯ ಮೈದಾನದಲ್ಲಿ ವಿಶ್ರಾಂತಿ ಪಡೆದ ಕೃನಾಲ್, ವಿಪರೀತ ನೋವಿನಿಂದ ನೆಲದ ಮೇಲೆಯೇ ಕಾಲು ಚಾಚಿ ಮಲಗಿದ್ದರು. ಈ ವೇಳೆ, ಮುಂಬೈ ಇಂಡಿಯನ್ಸ್ ಕೀಪರ್-ಬ್ಯಾಟರ್ ರಿಕಲ್ಟನ್ ಕೃನಾಲ್ ನೋವಿಗೆ ಸ್ಪಂದಿಸಿದಾಗ ತಮಿಳಿನಲ್ಲಿ ಲೈವ್ ಕಾಮೆಂಟ್ರಿ ಮಾಡುತ್ತಿದ್ದ ಮಾಜಿ ಸಿಎಸ್ಕೆ ಆಟಗಾರ ಸುಬ್ರಮಣಿಯಂ ಬದ್ರಿನಾಥ್, ಆತನಿಗೆ ಮೊದಲೇ ನೋವಿತ್ತು. ನಾನೇನಾದರೂ ಆಗಿದ್ದಿದ್ರೆ, ಆ ನೋವಿನಿಂದಲೇ ಸಾಯಲಿ ಬಿಡು ಎನ್ನುತ್ತಿದ್ದೆ. ಪರವಾಗಿಲ್ಲ, ರಿಕಲ್ಟನ್ ಅವರಿಗೆ ಸಹಾಯ ಮಾಡಿದರು ಎಂದು ನಗುತ್ತಲೇ ಹೇಳಿದರು.
ಒಬ್ಬ ಕಮೆಂಟೇಟರ್ ಆಗಿ ಬದ್ರಿನಾಥ್ ಆಡಿದ ಮಾತುಗಳು ಆ ಕ್ಷಣಕ್ಕೆ ಅವರಿಗೆ ಹಾಸ್ಯಸ್ಪದ ಅನಿಸಿದ್ದೇ ಆದರೂ ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳಿಗೆ ಇದು ತೀರ ವ್ಯಂಗ್ಯ ಅನಿಸಿದೆ. ಜೊತೆಗೆ ಅವರಿಗೆ ನೋವುಂಟು ಮಾಡಿದೆ. ಹಿರಿಯ ಕ್ರಿಕೆಟಿಗನಾಗಿ ಜವಾಬ್ದಾರಿಯಿಂದ ಮಾತನಾಡಬೇಕಿದ್ದ ಸುಬ್ರಮಣಿಯಂ ಸದ್ಯ ಆರ್ಸಿಬಿ ಫ್ಯಾನ್ಸ್ಗಳ ಸಾಲು ಸಾಲು ಛೀಮಾರಿಗೆ ಗುರಿಯಾಗಿದ್ದಾರೆ. ಕೆಲವರಂತು, ಕಡೆಗೂ ನಿಮ್ಮ ಸಿಎಸ್ಕೆ ಬುದ್ಧಿಯನ್ನು ತೋರಿಸಿಬಿಟ್ಟಿರಲ್ಲ ಎಂದೆಲ್ಲ ಬೇಸರದಿಂದ ಕಮೆಂಟ್ ಮಾಡುತ್ತಿದ್ದಾರೆ.