ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಲ್ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಹೊಸ ಬಾಸ್!
ಢಾಕಾ: ಮಾಜಿ ನಾಯಕ ಹಾಗೂ ಎಡಗೈ ಆರಂಭಿಕ ಬ್ಯಾಟರ್ ತಮೀಮ್ ಇಕ್ಬಾಲ್ (Tamim Iqbal) ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 37 ವರ್ಷದ ಅವರು ಬಿಸಿಬಿಯ ಅತ್ಯಂತ ಕಿರಿಯ ಮುಖ್ಯಸ್ಥರೆನಿಸಿದ್ದಾರೆ. ಕಳೆದ ಏಪ್ರಿಲ್ನಿಂದ ತಾತ್ಕಾಲಿಕ ಸಮಿತಿಯ ಅಧ್ಯಕ್ಷರಾಗಿ ಬಿಸಿಬಿಯ ಆಡಳಿತ ನೋಡಿಕೊಳ್ಳುತ್ತಿದ್ದ ಅವರು ಈಗ ಮುಂದಿನ 4 ವರ್ಷಗಳ ಅವಧಿಗೆ ಪೂರ್ಣ ಪ್ರಮಾಣದ ಸಾರಥಿಯಾಗಿದ್ದಾರೆ.
ಸೋಮವಾರ ನಡೆದ ಚುನಾವಣೆಯಲ್ಲಿ ತಮೀಮ್ 75ರಲ್ಲಿ 73 ಮತಗಳನ್ನು ಪಡೆದು ಆಯ್ಕೆಯಾದರು. ತಮೀಮ್ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ 70 ಟೆಸ್ಟ್, 78 ಟಿ20 ಮತ್ತು 243 ಏಕದಿನ ಪಂದ್ಯಗಳನ್ನು ಆಡಿ, ಒಟ್ಟಾರೆ 25 ಶತಕಗಳ ಸಹಿತ 15 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಬಾಂಗ್ಲಾ ತಂಡ ಕಳೆದ ಟಿ20 ವಿಶ್ವಕಪ್ನಿಂದ ಹಿಂದೆ ಸರಿದ ವಿವಾದದ ಸಮಯದಲ್ಲೂ ತಮೀಮ್ ಭಾರತ ಪರ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. ಹೀಗಾಗಿ ತಮೀಮ್, ಭಾರತದ ಜತೆಗಿನ ಕ್ರಿಕೆಟ್ ಸಂಬಂಧ ಸುಧಾರಿಸಲು ಪ್ರಯತ್ನಿಸುವ ನಿರೀಕ್ಷೆ ಇದೆ.