ಎಂಎಸ್ ಧೋನಿ  
ಕ್ರಿಕೆಟ್

ಸಿಎಸ್​ಕೆ ಕೊನೇ ಲೀಗ್ ಪಂದ್ಯಕ್ಕೂ ಮುನ್ನವೇ ತಂಡ ತೊರೆದ ಮಾಜಿ ನಾಯಕ ಎಂಎಸ್ ಧೋನಿ!

ಅಹಮದಾಬಾದ್: ಅಂಕಪಟ್ಟಿಯ ಅಗ್ರ-2ರಲ್ಲಿ ಸ್ಥಾನ ಖಾತ್ರಿಪಡಿಸಿಕೊಳ್ಳುವ ಹಂಬಲದಲ್ಲಿರುವ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-19ರ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಗುರುವಾರ ಚೆನ್ನೈ ಸೂಪರ್‌ಕಿಂಗ್ಸ್ ಸವಾಲು ಎದುರಿಸಲಿದೆ.  ಫ್ಲೇಆಫ್​ಗೇರುವ ಸಣ್ಣ ಅವಕಾಶ ವೃದ್ಧಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಋತುರಾಜ್ ಗಾಯಕ್ವಾಡ್ ಬಳಗ ಹ್ಯಾಟ್ರಿಕ್ ಸೋಲು ತಪ್ಪಿಸುವ ಸವಾಲು ಹೊಂದಿದೆ.    
ಟೈಟಾನ್ಸ್ ಅಗ್ರ-2ರ ಲೆಕ್ಕಾಚಾರ
ಅಂಕಪಟ್ಟಿಯ ಅಗ್ರ 2 ತಂಡಗಳು ಕ್ವಾಲಿಫೈಯರ್-1ರಲ್ಲಿ ಸೆಣಸಲಿದ್ದು, ಗೆದ್ದ ತಂಡ ನೇರವಾಗಿ ಫೈನಲ್‌ಗೇರಿದರೆ, ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಇದರಿಂದ, +0.400 ರನ್‌ರೇಟ್ ಹೊಂದಿರುವ ಗುಜರಾತ್ ಟೈಟಾನ್ಸ್, ಸಿಎಸ್‌ಕೆ ಎದುರು ಸುಲಭವಾಗಿ ಗೆದ್ದರೆ, ಅಗ್ರ-2ರಲ್ಲಿ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ. ಜತೆಗೆ ಆರ್‌ಸಿಬಿ ತನ್ನ ಕೊನೇ ಪಂದ್ಯದಲ್ಲಿ 88 ರನ್ ಅಂತರದಿಂದ ಸೋತರೆ, ಗುಜರಾತ್ ಅಗ್ರಸ್ಥಾನಕ್ಕೂ ಏರಲಿದೆ. ಗುಜರಾತ್ 12ಕ್ಕಿಂತ ಹೆಚ್ಚಿನ ರನ್ ಅಂತರದಲ್ಲಿ ಸೋತು, ಇಷ್ಟೇ ಅಂತರದಿಂದ ಸನ್‌ರೈಸರ್ಸ್‌ ಗೆದ್ದರೆ ಗುಜರಾತ್ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಗುಜರಾತ್, ಸನ್‌ರೈಸರ್ಸ್‌ ಎರಡೂ ತಂಡಗಳು ಸೋತರೆ, 16 ಅಂಕದೊಂದಿಗೆ ಅಗ್ರ-2ರಲ್ಲಿ ಸ್ಥಾನ ಪಡೆಯುವ ಅವಕಾಶ ರಾಜಸ್ಥಾನಕ್ಕೂ ಸಿಗಲಿದೆ.
ಸಿಎಸ್‌ಕೆ ಪ್ಲೇಆಫ್ ಹಾದಿ
*ಗುಜರಾತ್ ವಿರುದ್ಧ ಕನಿಷ್ಠ 25 ರನ್‌ಗಳಿಂದ ಗೆದ್ದು, ರನ್‌ರೇಟ್‌ನಲ್ಲಿ ರಾಜಸ್ಥಾನವನ್ನು ಹಿಂದಿಕ್ಕಬೇಕು.
*ಪಂಜಾಬ್, ರಾಜಸ್ಥಾನ, ಕೆಕೆಆರ್ ತಂಡಗಳು ಕೊನೇ ಪಂದ್ಯದಲ್ಲಿ ಸೋಲಬೇಕು.
ರಾಂಚಿಗೆ ಮರಳಿದ ಧೋನಿ
ಸಿಎಸ್‌ಕೆ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮಂಡಿರಜ್ಜು ಸಮಸ್ಯೆಯಿಂದ ಹಾಲಿ ಆವೃತ್ತಿಯಲ್ಲಿ ಒಂದೂ ಪಂದ್ಯವನ್ನಾಡದೆ ತನ್ನ ರಾಂಚಿಯ ಮನೆಗೆ ವಾಪಸ್ ಆಗಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯಕ್ಕೆ ಅಹಮದಾಬಾದ್‌ಗೆ ತಂಡದೊಂದಿಗೆ ತೆರಳದ ಅವರು, ಐಪಿಎಲ್ ಟೂರ್ನಿಯನ್ನು ತೊರೆದಿದ್ದಾರೆ. ಪವಾಡಸದೃಶ್ಯವಾಗಿ ಸಿಎಸ್‌ಕೆ ಪ್ಲೇಆ್ಗೇರಿದರೆ ಅವರು ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚೆನ್ನೈನಲ್ಲೇ ತನ್ನ ಕೊನೇ ಟಿ20 ಪಂದ್ಯವನ್ನಾಡುವುದಾಗಿ 2021ರಲ್ಲಿ ಸುಳಿವು ನೀಡಿದ್ದ 44 ವರ್ಷದ ಧೋನಿ, ಸಿಎಸ್‌ಕೆ ತಂಡ 19ನೇ ಆವೃತ್ತಿಯಲ್ಲಿ ಚೆನ್ನೈನಲ್ಲಿ ಕೊನೇ ಪಂದ್ಯವನ್ನಾಡಿದರೂ ಕಣಕ್ಕಿಳಿದಿರಲಿಲ್ಲ. ಆದರೆ, ಧೋನಿ ಐಪಿಎಲ್‌ಗೆ ಇನ್ನೂ ಅಧಿಕೃತವಾಗಿ ನಿವೃತ್ತಿ ಘೋಷಿಸಿಲ್ಲ. 
ಮುಖಾಮುಖಿ: 9
ಸಿಎಸ್‌ಕೆ: 4
ಗುಜರಾತ್: 5
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.