ಪಾಂಡ್ಯಗಾಗಿ ಪಂಚ ತಂಡಗಳ ನಡುವೆ ಫೈಟಿಂಗ್
- ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೊರೆಯುವ ಬಗ್ಗೆ ಕ್ರೀಡಾ ಲೋಕದಲ್ಲಿ ಚರ್ಚೆ
- ಸಿಎಸ್‌ಕೆ, ಕೆಕೆಆರ್ ಸೇರಿದಂತೆ ಪ್ರಮುಖ ತಂಡಗಳು ನೀಡಿರುವ ಆಫರ್‌ಗಳೇನು?
- ಪಾಂಡ್ಯಗಾಗಿ ಪಂಚ ತಂಡಗಳ ನಡುವೆ ಫೈಟಿಂಗ್
ಮುಂಬೈ: ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಕ್ರೀಡೆಯಲ್ಲ, ಬದಲಾಗಿ ಅದೊಂದು ಎಮೊಷನ್ ಎಂದರೂ ತಪ್ಪಾಗದು. ಅದರಲ್ಲೂ ಐಪಿಎಲ್ ಎಂದರೆ ಅದು ಭಾರತದಲ್ಲಿ ನಡೆಯುವ ಕ್ರಿಕೆಟ್ ಹಬ್ಬ ಎಂದು ಕರೆಯಬಹುದಾಗಿದೆ.
2027 ರಲ್ಲಿ ನಡೆಯಲಿರುವ ಐಪಿಎಲ್ ಪ್ರಾರಂಭಕ್ಕೆ ಬಹಳ ಸಮಯವಿದ್ದರೂ, ಈಗಲೇ ಕೆಲ ಆಟಗಾರರ ಕುರಿತಾದ ಸುದ್ದಿಗಳು ಭಾರಿ ಸದ್ದು ಮಾಡುತ್ತಿವೆ.
ಹಾರ್ದಿಕ್ ಖರೀದಿಗೆ 'ಪಂಚ' ಕಸರತ್ತು!
19 ನೇ ಆವೃತ್ತಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ (Hardik Pandya) ಸಂಪೂರ್ಣ ವಿಫಲತೆಯನ್ನು ಕಂಡಿದ್ದರು. ಡ್ರೆಸ್ಸಿಂಗ್ ರೂಮ್ನಿಂದ ಹಿಡಿದು, ಎಂಐ ಅಭಿಮಾನಿಗಳು ಹಾರ್ದಿಕ್ ಮೇಲೆ ಬೇಸರಗೊಂಡಿದ್ದಾರೆ.
ಹಾರ್ದಿಕ್ ತಂಡದ ನಾಯಕತ್ವ ವಹಿಸಿಕೊಂಡ ವರ್ಷದಿಂದ ಮುಂಬೈ ತಂಡದ ಪ್ರದರ್ಶನ ಕಳಪೆಯಾಗುತ್ತಿರುವುದು ಇದಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಆದ್ದರಿಂದ 2027 ರ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಬೇರೆ ತಂಡವನ್ನು ಸೇರಲಿದ್ದಾರೆಂದು ಹೇಳಲಾಗುತ್ತಿದೆ.
ಮಾಹಿತಿ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಹಾರ್ದಿಕ್ನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಯೋಜನೆ ರೂಪಿಸುತ್ತಿವೆ ಎಂದು ತಿಳಿದು ಬಂದಿದೆ.
ಯಾರ್ಯಾರ ಆಫರ್ ಏನಿದೆ?
ಮಾಹಿತಿ ಪ್ರಕಾರ, ಹಾರ್ದಿಕ್ ಪಾಂಡ್ಯನನ್ನು ಹರಾಜಿನಲ್ಲಿ ಖರೀದಿಸಲು ಮುಂದಾದರೆ ಭಾರಿ ಮೊತ್ತ ಖರ್ಚಾಗುವ ಕಾರಣ ತಮ್ಮಲ್ಲಿರುವ ಒಬ್ಬ ಆಟಗಾರನನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊಟ್ಟು, ಅಲ್ಲಿಂದ ಹಾರ್ದಿಕ್ನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೆಲ ತಂಡಗಳು ಮುಂದಾಗಿವೆ ಎಂದು ಹೇಳಲಾಗುತ್ತಿದೆ.
ಮೊದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಮ್ಮ ತಂಡದಲ್ಲಿರುವ ಆಲ್-ರೌಂಡರ್ ಆಟಗಾರ ಅಕ್ಷರ್ ಪಟೇಲ್ನನ್ನು ಎಂಐ ಗೆ ನೀಡಿ ಹಾರ್ದಿಕ್ನನ್ನು ಪಡೆಯಲು ಮುಂದಾದರೆ, ಲಕ್ನೋ ತಂಡ ನಿಕೊಲಸ್ ಪೂರನ್ ಬದಲಿಗೆ ಹಾರ್ದಿಕ್ನನ್ನು ಪಡೆಯಲು ಯೋಜನೆ ರೂಪಿಸುತ್ತಿದ್ದರೆ, ಕೆಕೆಆರ್ ಕೆಮರಾನ್ ಗ್ರಿನ್ನನ್ನು ಮುಂಬೈಗೆ ನೀಡಿ ಪಾಂಡ್ಯನನ್ನು ಪಡೆಯಲು ಪ್ಲಾನ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಸ್‌ಕೆ ಮತ್ತು ರಾಜಸ್ಥಾನ್ ತಂಡಗಳು ಕೂಡ ಇದೇ ತಂತ್ರಕ್ಕೆ ಮುಂದಾಗಿದ್ದು, ಚೆನ್ನೈ ಶಿವಂ ದುಬೆ, ಆಯುಶ್ ಮಾತ್ರೆ ಹಾಗೂ ಬ್ರೆವಿಸ್ ಈ ಮೂವರಲ್ಲಿ ಒಬ್ಬರನ್ನು ಮುಂಬೈಗೆ ನೀಡಲು ಮುಂದಾಗಿದ್ದರೆ, ರಾಜಸ್ಥಾನ್ ತನ್ನ ತಂಡದ ಓಪನರ್ ಯಶಸ್ವಿ ಜೈಸ್ವಾಲ್ನನ್ನು ಮುಂಬೈ ತಂಡಕ್ಕೆ ನೀಡಿ ಹಾರ್ದಿಕ್ನನ್ನು ತನ್ನದಾಗಿಸಿಕೊಳ್ಳಲು ಮ್ಯಾನೆಜ್ಮೆಂಟ್ ಜೊತೆ ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಹಾರ್ದಿಕ್ನಿಂದ ಸ್ಪಷ್ಟನೆ ಬಂದಿಲ್ಲ!
ತನ್ನ ಕುರಿತು ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ ಕೂಡ ಹಾರ್ದಿಕ್ ಪಾಂಡ್ಯ ಇದರ ಬಗ್ಗೆ ಇಲ್ಲಿವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಕೆಲ ತಿಂಗಳುಗಳಿಂದ ಪಾಂಡ್ಯ ಸಿಎಸ್‌ಕೆ ಮತ್ತು ಕೆಕೆಆರ್ ತಂಡದ ಜೊತೆಗೆ ಸಂಪರ್ಕ ಹೊಂದಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ ಅದಕ್ಕೆ ಯಾವುದೇ ಸ್ಪಷ್ಟನೆ ದೊರೆತಿರಲಿಲ್ಲ.
ಹಾಗೆಯೇ ಮುಂಬೈ ಇಂಡಿಯನ್ಸ್ ತಂಡ ಕೂಡ ಹಾರ್ದಿಕ್ ತಮ್ಮ ತಂಡವನ್ನು ಬಿಟ್ಟು ಹೋಗುತ್ತಿದ್ದಾರೆಂದು ಇಲ್ಲಿವರೆಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ನಿಖರ, ಸ್ಪಷ್ಟ ಅಧಿಕೃತ ಹೇಳಿಕೆ ಬರುವವರೆಗೆ ಇವೆಲ್ಲಾ ಕೇವಲ ವದಂತಿಗಳೆಂದು ಹೇಳಬಹುದಾಗಿದೆ, (ಏಜನ್ಸೀಸ್).