ಭಾರತ ಮಹಿಳಾ ಏಕದಿನ ತಂಡಕ್ಕೆ ಪ್ರತಿಕಾ ರಾವಲ್ ವಾಪಸ್
ನವದೆಹಲಿ: ಕಳೆದ ವರ್ಷ ತವರಿನ ಏಕದಿನ ವಿಶ್ವಕಪ್ ವೇಳೆ ಕಾಲಿನ ಗಾಯಕ್ಕೊಳಗಾಗಿದ್ದ ಬ್ಯಾಟರ್ ಪ್ರತಿಕಾ ರಾವಲ್ (Pratika Rawal) ಇದೀಗ ಸಂಪೂರ್ಣ ಚೇತರಿಕೆ ಕಂಡಿದ್ದು, ಆತಿಥೇಯ ಆಸ್ಟ್ರೆಲಿಯಾ ವಿರುದ್ಧ ಫೆಬ್ರವರಿ 24ರಿಂದ ನಡೆಯಲಿರುವ 3 ಪಂದ್ಯಗಳ ಮಹಿಳೆಯರ ಏಕದಿನ ಸರಣಿಗೆ ಭಾರತ ತಂಡಕ್ಕೆ 16ನೇ ಆಟಗಾರ್ತಿಯಾಗಿ ಸೇರ್ಪಡೆಯಾಗಿದ್ದಾರೆ.
ವಿಶ್ವಕಪ್ನ ಕೊನೇ ಲೀಗ್ ಪಂದ್ಯದ ವೇಳೆ ಪ್ರತಿಕಾ ಗಾಯಗೊಂಡು ಹೊರಬಿದ್ದಿದ್ದರು ಮತ್ತು ಅವರ ಬದಲಿಗೆ ತಂಡ ಸೇರಿದ್ದ ಶೆಫಾಲಿ ವರ್ಮ ಫೈನಲ್ನಲ್ಲಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದರು. ಇದೀಗ ತಂಡದಲ್ಲಿ ಶೆಫಾಲಿ, ಪ್ರತಿಕಾ ಇಬ್ಬರೂ ಸ್ಥಾನ ಪಡೆದಂತಾಗಿದೆ.
25 ವರ್ಷದ ಪ್ರತಿಕಾ ಈಗಾಗಲೆ ಆಸೀಸ್ ವಿರುದ್ಧ ಮಾರ್ಚ್ 6ರಿಂದ ಪರ್ತ್ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.