ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಗಿಲ್, ಹಾರ್ದಿಕ್ ವಾಪಸ್; ರಿಂಕು ಸಿಂಗ್, ನಿತೀಶ್ ರೆಡ್ಡಿಗೆ ಕೊಕ್
ರಾಯ್ಪುರ: ಸ್ಟಾರ್ ಬ್ಯಾಟರ್ ಶುಭಮಾನ್ ಗಿಲ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಡಿಸೆಂಬರ್ 9ರಿಂದ ನಡೆಯಲಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಗಿಲ್ ಆಡುವುದು ಫಿಟ್ನೆಸ್ ಆಧರಿಸಿದೆ. ಆಯ್ಕೆ ಸಮಿತಿ ಬುಧವಾರ ಸಭೆ ನಡೆಸಿ 15 ಆಟಗಾರರ ತಂಡವನ್ನು ಅಂತಿಮಗೊಳಿಸಿದ್ದು, ಕಳೆದ ಆಸ್ಟ್ರೆಲಿಯಾ ಪ್ರವಾಸದ ಟಿ20 ಸರಣಿಗೆ ತಂಡದಲ್ಲಿದ್ದ ಬ್ಯಾಟರ್ ರಿಂಕು ಸಿಂಗ್ ಮತ್ತು ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಹೊರಬಿದ್ದಿದ್ದಾರೆ.
ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಕುತ್ತಿಗೆ ನೋವಿಗೆ ಒಳಗಾಗಿದ್ದ ಗಿಲ್, ಎರಡನೇ ಟೆಸ್ಟ್ ಬಳಿಕ ಪ್ರಸಕ್ತ ನಡೆಯುತ್ತಿರುವ ಏಕದಿನ ಸರಣಿಯಿಂದಲೂ ಹೊರಗುಳಿದಿದ್ದಾರೆ. ಟಿ20 ಸರಣಿಗೆ ಅವರು ಉಪನಾಯಕರಾಗಿ ಮರಳುತ್ತಿದ್ದಾರೆ. ಆದರೆ ಗಿಲ್ ಫಿಟ್ನೆಸ್ಗೆ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಿಂದ ಇನ್ನೂ ಅಂತಿಮ ಒಪ್ಪಿಗೆ ದೊರೆತಿಲ್ಲ ಎನ್ನಲಾಗಿದೆ. ಹೀಗಾಗಿ ಗಿಲ್ ಟಿ20 ತಂಡದಲ್ಲಿ ಮರಳಿ ಸ್ಥಾನ ಪಡೆದಿದ್ದರೂ, ಸಂಪೂರ್ಣ ಫಿಟ್ ಆದರಷ್ಟೇ ಮೈದಾನಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಕಳೆದ ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ಗೆ ಮುನ್ನ ಗಾಯಗೊಂಡಿದ್ದ ಹಾರ್ದಿಕ್, ಬಳಿಕ ಆಸ್ಟ್ರೆಲಿಯಾ ಪ್ರವಾಸದ ಟಿ20 ಸರಣಿಯನ್ನೂ ತಪ್ಪಿಸಿಕೊಂಡಿದ್ದರು. ಮಂಗಳವಾರವಷ್ಟೇ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಪಂದ್ಯದಲ್ಲಿ ಆಡುವ ಮೂಲಕ ಹಾರ್ದಿಕ್ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ. ಮುಂದಿನ ವರ್ಷದ ಟಿ20 ವಿಶ್ವಕಪ್ವರೆಗೆ ಅವರು ಚುಟುಕು ಕ್ರಿಕೆಟ್ ಮಾದರಿಯಲ್ಲಿ ಮಾತ್ರ ಆಡಲಿದ್ದಾರೆ ಎನ್ನಲಾಗಿದೆ. ಹಾರ್ದಿಕ್ ವಾಪಸಾತಿಯಿಂದ ನಿತೀಶ್ ರೆಡ್ಡಿ ಅವರನ್ನು ಕೈಬಿಟ್ಟಿರುವುದು ನಿರೀತ ನಡೆ ಎನಿಸಿದೆ.
ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತೆ ಟಿ20 ತಂಡದಲ್ಲಿ ಆಡಲಿದ್ದು, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ತಂಡದಲ್ಲಿರುವ ಇನ್ನಿಬ್ಬರು ವೇಗಿಗಳು. ಸ್ಯಾಮ್ಸನ್ ಜತೆ ಜಿತೇಶ್ ಶರ್ಮ 2ನೇ ಕೀಪರ್ ಆಗಿ ಸ್ಥಾನ ಕಾಯ್ದುಕೊಂಡಿದ್ದಾರೆ. ಅಕ್ಷರ್ ಪಟೇಲ್, ವಾಷಿಂಗ್ಟನ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ತಂಡದಲ್ಲಿರುವ ನಾಲ್ವರು ಸ್ಪಿನ್ನರ್ಸ್.
ಡಿಸೆಂಬರ್ 9ಕ್ಕೆ ಕಟಕ್ನಲ್ಲಿ ಟಿ20 ಸರಣಿ ಆರಂಭವಾಗಲಿದ್ದು, ನಂತರ ಚಂಡೀಗಢ (ಡಿ.11), ಧರ್ಮಶಾಲಾ (ಡಿ.14), ಲಖನೌ (ಡಿ.17) ಹಾಗೂ ಅಹಮದಾಬಾದ್ನಲ್ಲಿ (ಡಿ.19) ಪಂದ್ಯಗಳು ನಡೆಯಲಿವೆ.
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), *ಶುಭಮಾನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮ, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್. *ಫಿಟ್ನೆಸ್ ಆಧರಿಸಿ ಆಟ.