ರೋಹಿತ್ ಶರ್ಮ, ವಿರಾಟ್ ಕೊಹ್ಲಿ
- ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ
- ಮೈದಾನದಲ್ಲಿ ರೋಕೊ ಜೋಡಿ ಅಬ್ಬರ
- ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹೆಸರು ಸೇರಿದ ದಾಖಲೆಗಳು
ಜಾರ್ಖಂಡ್: ಮೂರು ಪಂದ್ಯಗಳ ಏಕದಿನ ಸರಣಿಯ ಭಾಗವಾಗಿ ಇಂದು (ನ.30) ರಾಂಚಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ತಂಡದ ಪರ 'ರೋಕೊ' ಜೋಡಿ ನಡೆಸಿದ ಅಬ್ಬರದ ಬ್ಯಾಟಿಂಗ್ ಸದ್ಯ ಹರಿಣರ ಪಡೆಯ ಬೌಲರ್ಗಳ ಬೆವರಿಳಿಸಿತು. 50 ಓವರ್ ಅಂತ್ಯಕ್ಕೆ ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡು 349 ರನ್ ಕಲೆಹಾಕಿದ್ದು, ಈ ಸವಾಲಿನ ಗುರಿಯನ್ನು ದಕ್ಷಿಣ ಆಫ್ರಿಕಾ ಸುಲಭವಾಗಿ ತಲುಪಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹರಿಣರ ಪಡೆ, ಟೀಮ್ ಇಂಡಿಯಾಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದೆ. ಅಂತೆಯೇ ಕ್ರೀಸ್ಗೆ ಬಂದ ಆರಂಭಿಕ ಬ್ಯಾಟರ್ಗಳ ಪೈಕಿ ಯಶಸ್ವಿ ಜೈಸ್ವಾಲ್ ಹೆಚ್ಚು ಸಮಯ ಕ್ರೀಸ್ಗೆ ಅಂಟದೆ, ಪೆವಿಲಿಯನ್ ಹಾದಿ ಹಿಡಿದರು. ಮೊದಲ ವಿಕೆಟ್ ಪತನದ ಬೆನ್ನಲ್ಲೇ ಅಖಾಡಕ್ಕಿಳಿದ ವಿರಾಟ್ ಕೊಹ್ಲಿ, ಹಿಟ್ಮ್ಯಾನ್ಗೆ ಉತ್ತಮ ಸಾಥ್ ನೀಡಿದರು. ಇಬ್ಬರು ದಿಗ್ಗಜರು ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ.
ರೋಹಿತ್ ಶರ್ಮ ದಾಖಲೆ
ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಹಿರಿಯ ಆಟಗಾರ ರೋಹಿತ್ ಶರ್ಮ ಇಂದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ (57 ರನ್) ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಗೆ ರೋಹಿತ್ ತಮ್ಮ ಹೆಸರನ್ನು ಸೇರಿಸಿದ್ದಾರೆ. ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಈ ವಿಶೇಷ ಸಾಧನೆ ಮಾಡಿದ್ದಾರೆ. ಇನ್ನಿಂಗ್ಸ್‌ನ 20ನೇ ಓವರ್‌ನಲ್ಲಿ ಮಾರ್ಕೊ ಜಾನ್ಸೆನ್ ಬೌಲಿಂಗ್‌ನ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ 'ಹಿಟ್‌ಮ್ಯಾನ್' ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಇದು ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ 352ನೇ ಸಿಕ್ಸರ್ ಆಗಿದೆ. ಇದಕ್ಕೂ ಮೊದಲು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯ ಹೆಸರಿನಲ್ಲಿ ಈ ದಾಖಲೆಯಿತ್ತು. ಅಫ್ರಿದಿ 398 ಪಂದ್ಯಗಳಲ್ಲಿ 351 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ರೋಹಿತ್ ಕೇವಲ 277 ಪಂದ್ಯಗಳಲ್ಲಿ 352 ಸಿಕ್ಸರ್‌ಗಳನ್ನು ಸಿಡಿಸುವ ಮುಖೇನ ಈ ವಿಶೇಷ ರೆಕಾರ್ಡ್ ಅನ್ನು ತಮ್ಮ ಹೆಸರಿನಲ್ಲಿರಿಸಿದ್ದಾರೆ.
ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರಿವರು
- ರೋಹಿತ್ ಶರ್ಮ (ಭಾರತ) - 352 ಸಿಕ್ಸರ್
- ಶಾಹಿದ್ ಅಫ್ರಿದಿ (ಪಾಕಿಸ್ತಾನ) - 351 ಸಿಕ್ಸರ್
- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 331 ಸಿಕ್ಸರ್
- ಸನತ್ ಜಯಸೂರ್ಯ (ಶ್ರೀಲಂಕಾ) - 270 ಸಿಕ್ಸರ್
- ಎಂ.ಎಸ್. ಧೋನಿ (ಭಾರತ) - 229 ಸಿಕ್ಸರ್
ಈ ಪಂದ್ಯದಲ್ಲಿ ಒಟ್ಟು 51 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 5 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಇದು ಏಕದಿನ ಪಂದ್ಯಗಳಲ್ಲಿ ಹಿಟ್‌ಮ್ಯಾನ್‌ನ 60ನೇ ಅರ್ಧಶತಕ ಎಂಬುದು ಗಮನಾರ್ಹ.
ದಾಖಲೆಗಳ ಸರದಾರ
ವಿರಾಟ್ ಕೊಹ್ಲಿ ಅವರ ಶತಕದಾಟ (133* ರನ್, 115 ಎಸೆತ) ಮೈದಾನದಲ್ಲಿದ್ದ ಕ್ರಿಕೆಟ್ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿತು. ವಿರಾಟ್ ಕೊಹ್ಲಿ ಅಪರೂಪದ ದಾಖಲೆಗೆ ಸಾಕ್ಷಿಯಾಗಲು ಒಂದೇ ಒಂದು ಹೆಜ್ಜೆ ದೂರದಲ್ಲಿದ್ದರು. ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಅವರಿಂದ ಒಂದೇ ಒಂದು ಶತಕದ ಅಗತ್ಯವಿತ್ತು. ಕಡೆಗೂ ಮೊದಲ ಪಂದ್ಯದಲ್ಲಿಯೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.
ಸಚಿನ್ ತೆಂಡೂಲ್ಕರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 200 ಪಂದ್ಯಗಳನ್ನಾಡಿದ್ದು, 53.8 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಮತ್ತು 68 ಅರ್ಧಶತಕಗಳು ಸೇರಿವೆ. ಇನ್ನು ವಿರಾಟ್ ಬಗ್ಗೆ ಹೇಳುವುದಾದರೆ, ಇದುವರೆಗೆ 306 ಏಕದಿನ ಪಂದ್ಯಗಳನ್ನಾಡಿದ್ದು, 294 ಇನ್ನಿಂಗ್ಸ್‌ಗಳಲ್ಲಿ 57.7 ಸರಾಸರಿಯಲ್ಲಿ 14,255* ರನ್ ಗಳಿಸಿದ್ದಾರೆ. ಇದರಲ್ಲಿ 52 ಶತಕ ಮತ್ತು 76 ಅರ್ಧಶತಕಗಳು ಸೇರಿವೆ.