ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್: ಆತಿಥೇಯ ಭಾರತ ಶುಭಾರಂಭ
ನವದೆಹಲಿ: ಕನ್ನಡತಿ ದೀಪಿಕಾ ಟಿ.ಸಿ. ಸಾರಥ್ಯದ ಆತಿಥೇಯ ಭಾರತ ತಂಡ ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್ (Women''s T20 Cricket World Cup) ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಭಾರತ ತಂಡ ಮಂಗಳವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 10 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿತು.
ಮಾಡರ್ನ್ ಸ್ಕೂಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಶ್ರೀಲಂಕಾ ತಂಡ 13.3 ಓವರ್ಗಳಲ್ಲೇ 41 ರನ್ಗಳಿಗೆ ಆಲೌಟ್ ಆಯಿತು. ಲಂಕಾದ 7 ಆಟಗಾರ್ತಿಯರು ರನೌಟ್ ಆದರು. ದೀಪಿಕಾ ಟಿ.ಎಸ್, ಗಂಗಾ ಕದಂ ಮತ್ತು ಜಮುನಾ ರಾಣಿ ತಲಾ 1 ವಿಕೆಟ್ ಪಡೆದರು. ಭಾರತ ತಂಡ 3 ಓವರ್ಗಳಲ್ಲೇ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಸಿ ಜಯಿಸಿತು. ದೀಪಿಕಾ ಟಿ.ಎಸ್. (26*) ಮತ್ತು ಅನೇಖಾ ದೇವಿ (15*) ಗೆಲುವಿನ ದಡ ಸೇರಿಸಿದರು. 4 ರನೌಟ್ಗೂ ನೆರವಾದ ಗಂಗಾ ಕದಂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮಾಜಿ ಕೇಂದ್ರ ಸಚಿವ ಮತ್ತು ಬಿಸಿಸಿಐ ಮಾಜಿ ಸಚಿವ ಅನುರಾಗ್ ಠಾಕೂರ್ ಟೂರ್ನಿಗೆ ಚಾಲನೆ ನೀಡಿದರು. ಭಾರತ ತಂಡ ಬುಧವಾರ ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಆಸ್ಟ್ರೆಲಿಯಾವನ್ನು ಎದುರಿಸಲಿದೆ.