ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಶಶಾಂಕ್ ಸಿಂಗ್
- ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಶಶಾಂಕ್ ಸಿಂಗ್ ವಿರುದ್ಧ ಎಫ್ಐಆರ್
- ಅಡುಗೆ ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ
- ಶಶಾಂಕ್ ಸಿಂಗ್ ಮತ್ತು ಅವರ ತಂದೆಯ ವಿರುದ್ಧ ದೂರು ದಾಖಲು
ಮಧ್ಯಪ್ರದೇಶ: ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುವ ಸ್ಟಾರ್ ಬ್ಯಾಟರ್ ಶಶಾಂಕ್ ಸಿಂಗ್ ಮತ್ತು ಅವರ ತಂದೆಯ ವಿರುದ್ಧ ಭೋಪಾಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶಶಾಂಕ್ ಸಿಂಗ್ ಮತ್ತು ಅವರ ತಂದೆ ನಿವೃತ್ತ ವಿಶೇಷ ಮಹಾನಿರ್ದೇಶಕ (ಡಿಜಿ) ಶೈಲೇಶ್ ಸಿಂಗ್ ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯಿಂದ ದೂರ ದಾಖಲಾಗಿದೆ. ತನ್ನ ಮೇಲೆ ಮನಬಂದಂತೆ ಹಲ್ಲೆ, ನಿಂದನೆ ಮತ್ತು ಬಲವಂತವಾಗಿ ಮೊಬೈಲ್ ಫೋನ್ ಕಸಿದುಕೊಂಡಿದ್ದಾಗಿ ಆರೋಪಿಸಿದ್ದಾರೆ. ಎಫ್ಐಆರ್ ಪ್ರತಿಯಲ್ಲಿ, ಶೈಲೇಶ್ ಸಿಂಗ್, ಶಶಾಂಕ್ ಸಿಂಗ್ ಮತ್ತು ಅವರ ಕಾರು ಚಾಲಕ ಮಿಶ್ರಾ ಹೆಸರುಗಳನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ದೂರುದಾರ, ರೇವಾ ಜಿಲ್ಲೆಯ ನಿವಾಸಿ ವಿಪೇಂದ್ರ ಸಿಂಗ್ ತೋಮರ್ ಎನ್ನಲಾಗಿದೆ. ಇದೇ ಜೂ.25ರಂದು ನೀಲ್ಬಾದ್‌ನಲ್ಲಿರುವ ಶೈಲೇಶ್ ಅವರ ಬಂಗಲೆಯಲ್ಲಿ ದಿನನಿತ್ಯ ಅಡುಗೆ ಮಾಡುತ್ತಿದ್ದ ತೋಮರ್ಗೆ ನಿನ್ನ ಕೆಲಸದಲ್ಲಿ ಸಮಸ್ಯೆಗಳಿವೆ. ನೀನು ಕೊಟ್ಟ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಬೈದು, ಮೊಬೈಲ್ ಫೋನ್ ಕಸಿದುಕೊಂಡರು. ಊಟ ಮತ್ತು ವಸತಿ ಸೇರಿ ತಿಂಗಳಿಗೆ 15,000 ರೂ. ಸಂಬಳವನ್ನು ಕೊಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜೂ.28ರಂದು, ಬೆಳಗ್ಗಿನ ತಿಂಡಿ ಕೊಟ್ಟು ಶಶಾಂಕ್ ಅವರ ತಂದೆ ಶೈಲೇಶ್ ಸಿಂಗ್ ಬಳಿ ನನ್ನ ಮೊಬೈಲ್ ಫೋನ್ ವಾಪಾಸ್ ಕೊಡುವಂತೆ ಕೇಳಿದೆ. ಅದಕ್ಕೆ ಸಿಟ್ಟಿಗೆದ್ದ ಅವರು, ನನ್ನನ್ನು ನಿಂದಿಸಿ ಕಳುಹಿಸಿದರು. ಬೇಸರದಲ್ಲಿ ಅಡುಗೆ ಮನೆಯಲ್ಲಿ ಕುಳಿತಿದ್ದವನ ಮೇಲೆ ಶಶಾಂಕ್ ಸಿಂಗ್ ಮತ್ತು ಅವರ ಕಾರು ಚಾಲಕ ಮುಷ್ಠಿ ಕಟ್ಟಿ ಹೊಡೆದರು ಮತ್ತು ಮನೆಯಿಂದ ಹೊರಹಾಕಿದರು ಎಂದು ಹೇಳಿಕೊಂಡಿದ್ದಾರೆ.
ಊಟ ಮತ್ತು ವಸತಿ ಕೊಟ್ಟಿದ್ದೀವಿ ನಿನಗೆ, ಅದಕ್ಕೆ ಈ 1 ಸಾವಿರ ಊ. ಎಂದು ನನ್ನ ಮೊಬೈಲ್ ಫೋನ್‌ನಿಂದ ದುಡ್ಡನ್ನು ಟ್ರಾನ್ಸ್ಫರ್ ಮಾಡಿಕೊಂಡರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕ್ರಿಕೆಟಿಗ ಮತ್ತು ಆತನ ಕುಟುಂಬದವರ ವಿರುದ್ಧ ಸಂತ್ರಸ್ತ ದೂರು ನೀಡಿದ ಬೆನ್ನಲ್ಲೇ ಪೊಲೀಸರು ಎಫ್ಐಆರ್ ದಾಖಲಿಸಿ, ವಿಚಾರಣೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).