ಟೀಮ್ ಇಂಡಿಯಾ ಯುವ ಬ್ಯಾಟರ್ ಅಭಿಷೇಕ್ ಶರ್ಮ
- ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸದ ಅಭಿಷೇಕ್ ಶರ್ಮ
- ಸತತ ಮೂರು ಪಂದ್ಯಗಳಲ್ಲಿ ಒಂದು ರನ್ ಗಳಿಸದೆ ಔಟ್
- ಕಡೆಗೂ ಟೀಕೆಗಳ ಕುರಿತು ಮೌನ ಮುರಿದ ಅಭಿಷೇಕ್ ಶರ್ಮ
ಮುಂಬೈ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಡಿದ ನಾಲ್ಕು ಪಂದ್ಯಗಳಲ್ಲಿ 4 ಗೆದ್ದು ಇದೀಗ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದೆ. ಈಗಾಗಲೇ ಸೂಪರ್ 8 ಹಂತಕ್ಕೆ ನೇರ ಪ್ರವೇಶ ಪಡೆದಿರುವ ಸೂರ್ಯಕುಮಾರ್ ಯಾದವ್ ಪಡೆಗೆ ಕಾಡುತ್ತಿರುವ ಚಿಂತೆಯೇ ಅಭಿಷೇಕ್ ಶರ್ಮ. ಇದು ಕೇವಲ ತಂಡಕ್ಕೆ ಮಾತ್ರವಲ್ಲ, ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳಿಗೂ ಕೂಡ. ಮುಂದಿನ ಪಂದ್ಯದಲ್ಲಿ ಅವರನ್ನು ಆಡಿಸುತ್ತಾರೋ ಅಥವಾ ಪೆವಿಲಿಯನ್ನಲ್ಲಿ ಕೂರಿಸುತ್ತಾರೋ ಎಂಬ ಪ್ರಶ್ನೆಗಳು ಮೂಡಿವೆ. ಈ ಮಧ್ಯೆ, ತಮ್ಮ ಸರಣಿ ಡಕ್ಔಟ್ ಕುರಿತು ಹರಿದುಬಂದ ಟೀಕೆಗಳ ಬಗ್ಗೆ ಕಡೆಗೂ ಅಭಿಷೇಕ್ ಮೌನ ಮುರಿದಿದ್ದಾರೆ.
ತಂಡದ ಪರ ಸ್ಫೋಟಕ ಇನ್ನಿಂಗ್ಸ್ ಆಡುವ ಅಭಿಷೇಕ್ ಶರ್ಮ ಟಿ20 ವಿಶ್ವಕಪ್ನಲ್ಲಿ ಮಾತ್ರ ಡಕ್ಔಟ್ ಆಗುತ್ತಿರುವುದು ಈಗ ಕ್ರಿಕೆಟ್ ಪ್ರಿಯರನ್ನು ಕೆರಳಿಸಿದೆ. ಉತ್ತಮ ಆರಂಭಿಕ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಅಭಿಷೇಕ್, ಅದ್ಯಾಕೋ ಒಂದೇ ಒಂದು ರನ್ ಕಲೆಹಾಕಲು ತೀರ ಪರದಾಡುವ ಪರಿಸ್ಥಿತಿ ತಲುಪಿದ್ದಾರೆ. ಯುಎಸ್ಎ, ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಗಳಲ್ಲಿ ಅಭಿಷೇಕ್ ಶೂನ್ಯಕ್ಕೆ ಔಟ್ ಆಗಿರುವುದು ಸದ್ಯ ಕ್ರಿಕೆಟ್ ಪ್ರಿಯರ ಟೀಕೆಗಳಿಗೆ ಮಾತ್ರವಲ್ಲ, ಪಾಕಿಸ್ತಾನದ ಆಟಗಾರ ಮೊಹಮ್ಮದ್ ಅಮೀರ್ ಸೊಕ್ಕಿನ ಮಾತಿಗೂ ಕಾರಣವಾಯಿತು.
ಭಾನುವಾರ (ಫೆ.22) ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ತನ್ನ ಮೊದಲ ಸೂಪರ್ 8 ಹಂತದ ಪಂದ್ಯವನ್ನಾಡಲಿದೆ. ಇದರ ಬೆನ್ನಲ್ಲೇ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವ ಅಭಿಷೇಕ್, ನನ್ನ ಆಟದ ಶೈಲಿಯಲ್ಲಿ ಯಾವುದೇ ಬದಲಾವಣೆ ಇರೋದಿಲ್ಲ ಎಂದು ತಮ್ಮ ಪ್ರದರ್ಶನಕ್ಕೆ ವ್ಯಕ್ತವಾದ ಟೀಕೆಗಳಿಗೆ ಖಡಕ್ ಉತ್ತರವನ್ನೇ ನೀಡಿದ್ದಾರೆ. “ನಾನು ಯಾವಾಗಲೂ ನನ್ನ ಬ್ಯಾಟಿಂಗ್ ಅನ್ನು ಎಂಜಾಯ್ ಮಾಡ್ತೇನೆ. ಎರಡು ವರ್ಷಗಳ ಹಿಂದೆಯೇ ಒತ್ತಡ ಹೇರಿಕೊಳ್ಳುವುದನ್ನು ಬಿಟ್ಟಿದ್ದೇನೆ. ಯಾಕೆಂದರೆ, ಪ್ರಕ್ರಿಯೆ ಮಾತ್ರ ನನ್ನ ಕೈಯಲ್ಲಿದೆ. ಅದು ಅಭ್ಯಾಸ ಪಂದ್ಯಗಳಲ್ಲಿಯೇ ಇರಲಿ ಅಥವಾ ಟ್ರೇನಿಂಗ್ ಇರಲಿ ಎಂದಿದ್ದಾರೆ.
ನನ್ನ ಪ್ರಕ್ರಿಯೆ ಮತ್ತು ಮನಸ್ಥಿತಿಯನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಒಬ್ಬ ಬ್ಯಾಟ್ಸ್‌ಮನ್ ಕರಿಯರ್ನಲ್ಲಿ ಏರಿಳಿತಗಳು ಸಹಜ. ಕೆಲವೊಮ್ಮೆ ನಾವು ಚೆನ್ನಾಗಿ ಸ್ಕೋರ್ ಮಾಡುತ್ತೇವೆ. ಅದೇ ಕೆಲವೊಮ್ಮೆ ಮಾಡೋದಿಲ್ಲ. ಹೀಗೆ ಆಡಬೇಕು ಎಂಬ ಉದ್ದೇಶದಿಂದ ಮೈದಾನಕ್ಕೆ ಇಳಿದಿರುತ್ತೇನೆ. ಆದರೆ, ಇದು ಎಲ್ಲಾ ಸಂದರ್ಭಗಳಲ್ಲಿಯೂ ನನಗೆ ಪಾಸಿಟಿವ್ ಫಲಿತಾಂಶ ಕೊಡದಿರಬಹುದು. ಈ ನಿಟ್ಟಿನಲ್ಲಿ, ನಾನು ಯಾವುದೇ ಸಂದರ್ಭದಲ್ಲೂ ನನ್ನ ಉದ್ದೇಶ ಅಥವಾ ಪ್ರಕ್ರಿಯೆಯನ್ನು ಬದಲಾಯಿಸುವುದಿಲ್ಲ" ಎಂದು ಹೇಳಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).