ಫಿಫಾ ವಿಶ್ವಕಪ್: ಮೆಸ್ಸಿ ದಾಖಲೆ ಸನಿಹ ಎಂಬಾಪೆ, ನಾಕೌಟ್‌ಗೆ ಲೆಸ್ ಬ್ಲೂಸ್
ಫಿಲಡೆಲ್ಫಿಯಾ: ಲೆಸ್ ಬ್ಲೂಸ್ ಖ್ಯಾತಿಯ ಹಾಲಿ ರನ್ನರ್ ಅಪ್ ಫ್ರಾನ್ಸ್ ತಂಡ ಸತತ ನಾಲ್ಕನೇ ಫಿಫಾ ವಿಶ್ವಕಪ್ (FIFA World Cup) ಆವೃತ್ತಿಯಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ತಾರಾ ಆಟಗಾರ ಕೈಲಿಯಾನ್ ಎಂಬಾಪೆ (14, 54ನೇ ನಿಮಿಷ) ಸಿಡಿಸಿದ ದಾಖಲೆಯ ಅವಳಿ ಗೋಲುಗಳ ನೆರವಿನಿಂದ ಎರಡು ಬಾರಿಯ ಚಾಂಪಿಯನ್ ಫ್ರಾನ್ಸ್ ತಂಡ 23ನೇ ಆವೃತ್ತಿಯಲ್ಲಿ ಇರಾಕ್ ವಿರುದ್ಧ 3-0 ಅಂತರದಿಂದ ಗೆದ್ದು ಬೀಗಿದೆ. ಇದರೊಂದಿಗೆ ಫ್ರಾನ್ಸ್ ಐ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್‌ಗೆ ಅರ್ಹತೆ ಪಡೆದುಕೊಂಡಿತು.
ಭಾರತೀಯ ಕಾಲಮಾನ ಮಂಗಳವಾರ ನಸುಕಿನಲ್ಲಿ ಫಿಲಡೆಲ್ಫಿಯಾ ಸ್ಟೇಡಿಯಂನಲ್ಲಿ ನಡೆದ ಮಳೆಬಾಧಿತ ಪಂದ್ಯದಲ್ಲಿ ಫ್ರಾನ್ಸ್ ಪ್ರಾಬಲ್ಯ ಮೆರೆಯಿತು. ಮೈಕೆಲ್ ಓಲಿಸ್ ನೀಡಿದ ಚೆಂಡಿನ ಪಾಸ್ ಅನ್ನು ಎಂಬಾಪೆ, 20 ಯಾರ್ಡ್ ದೂರದಿಂದಲೇ ಎಡಗಾಲಿನಲ್ಲಿ ಗೋಲು ಪೆಟ್ಟಿಗೆ ಸೇರಿಸಿ ಫ್ರಾನ್ಸ್ ಗೆ ಮೊದಲಾರ್ಧ ಮುಕ್ತಾಯಕ್ಕೆ 1-0 ಅಂತರದ ಮುನ್ನಡೆ ನೀಡಿದರು. ಪಂದ್ಯದ 37ನೇ ನಿಮಿಷದಲ್ಲಿ ಪ್ರಾರಂಭವಾದ ಮಳೆ ನಡುವೆಯೂ ಆಟ ಮುಂದುವರಿಯಿತು.
ಮೊದಲಾರ್ಧದ ಮುಕ್ತಾಯದ ಬಳಿಕ ಭಾರಿ ಗುಡುಗು ಸಹಿತ ಮಳೆಯಿಂದಾಗಿ ವಿರಾಮದ ಎರಡು ಗಂಟೆಗಳ ನಂತರ ದ್ವಿತೀಯಾರ್ಧದ ಆರಂಭಗೊಂಡಿತು. ಇರಾಕ್ ಡಿಫೆಂಡರ್ ಜೈದ್ ತಹ್ಸೀನ್ ಮತ್ತು ಗೋಲುಕೀಪರ್ ಎಡವಟ್ಟಿನ ಪಾಸ್ ಲಾಭ ಪಡೆದ ಬ್ಯಾಲನ್ ಡಿ ಓಆರ್ ಪ್ರಶಸ್ತಿ ವಿಜೇತ ಔಸ್ಮಾನ್ ಡೆಂಬೆಲ್ ಮುನ್ನಡೆಗೆ ನೆರವಾದರು.
ಡೆಂಬೆಲ್ ನೀಡಿದ ಪಾಸ್‌ನಲ್ಲಿ ಎರಡನೇ ಗೋಲು ಬಾರಿಸಿದ 27 ವರ್ಷದ ಎಂಬಾಪೆ, ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ದಾಖಲೆ ಸರಿಗಟ್ಟಿದರು. ಎಂಬಾಪೆಗೆ ಇದು ಮೂರನೇ ವಿಶ್ವಕಪ್ ಟೂರ್ನಿ ಆಗಿದ್ದು, 2018ರಲ್ಲಿ ಚಾಂಪಿಯನ್ ಹಾಗೂ 2022ರ ರನ್ನರ್ ಅಪ್ ಫ್ರಾನ್ಸ್ ತಂಡದಲ್ಲೂ ಇದ್ದರು. 66ನೇ ನಿಮಿಷದಲ್ಲಿ ಔಸ್ಮಾನೆ ಡೆಂಬೆಲ್ ಫ್ರಾನ್ಸ್ ಪರ ಮೂರನೇ ಗೋಲು ಗಳಿಸಿ ಗೆಲುವಿನ ಅಂತರ ಹಿಗ್ಗಿಸಿದರು. 1986ರ ನಂತರ ಎರಡನೇ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಇರಾಕ್ ಸತತ ಎರಡನೇ ಸೋಲಿನೊಂದಿಗೆ ಗುಂಪಿನ ಕೊನೇ ಸ್ಥಾನದಲ್ಲಿ ಉಳಿಯಿತು.
*ಕೈಲಿಯಾನ್ ಎಂಬಾಪೆ (14, 54)
ವಿಶ್ವಕಪ್‌ನಲ್ಲಿ ಗರಿಷ್ಠ ಗೋಲು
18: ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ)
16: ಕೈಲಿಯಾನ್ ಎಂಬಾಪೆ (ಫ್ರಾನ್ಸ್)
16: ಮಿರೋಸ್ಲಾವ್ ಕ್ಲೋಸ್ (ಜರ್ಮನಿ)
15: ರೊನಾಲ್ಡೊ (ಬ್ರೆಜಿಲ್)
14: ಗೆರ್ಡ್ ಮುಲ್ಲರ್ (ಜರ್ಮನಿ)
1. ಕೈಲಿಯಾನ್ ಎಂಬಾಪೆ ಫಿಫಾ ವಿಶ್ವಕಪ್‌ನ ಸತತ ಆರು ಪಂದ್ಯಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಗೋಲು ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು.
10. ಫ್ರಾನ್ಸ್ ಪರ 100 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ 10ನೇ ಆಟಗಾರ ಕೈಲಿಯಾನ್ ಎಂಬಾಪೆ. ಜತೆಗೆ ಈ ಸಾಧನೆ ಮಾಡಿದ ಯುರೋಪ್‌ನ 4ನೇ ಕಿರಿಯ ಆಟಗಾರ.