RRvsGT: 19ನೇ ಆವೃತ್ತಿಯ ಐಪಿಎಲ್‌ನ ಹೈವೋಲ್ಟೇಜ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಮುಲ್ಲನ್‌ಪುರದ ಅಂಗಳದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಆರ್ ತಂಡ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಒಂದೆಡೆ ವಿಕೆಟ್ ಬೀಳುತ್ತಿದ್ದರು ದೃತಿಗೆಡದ ವೈಭವ್ ಸೂರ್ಯವಂಶಿ, ಗುಜರಾತ್ ಬೌಲರ್‌ಗಳ ಮನಬಂದಂತೆ ದಂಡಿಸಿದರು. ಕೇವಲ 47 ಎಸೆತಗಳನ್ನು ಎದುರಿಸಿದ ಈ ಎಡಗೈ ಬ್ಯಾಟರ್ 96 ರನ್‌ಗಳ ಅತ್ಯಂತ ಸ್ಫೋಟಕ ಇನಿಂಗ್ಸ್ ಆಡಿ, ಕೇವಲ 4 ರನ್‌ಗಳಿಂದ ಮತ್ತೊಮ್ಮೆ ಶತಕ ವಂಚಿತರಾದರು.
ರಾಜಸ್ಥಾನ್ ರಾಯಲ್ಸ್ ಸ್ಕೋರ್ಕಾರ್ಡ್
ಆಂಡ್ರೆ ರಸೆಲ್ ಸಾರ್ವಕಾಲಿಕ ಮಹಾ ದಾಖಲೆ ಉಡೀಸ್!
ಈ ಪಂದ್ಯದ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಸಾರ್ವಕಾಲಿಕ ವಿಶ್ವದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾಗಿದ್ದಾರೆ. ಕೇವಲ 440 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ವೈಭವ್ಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ದೈತ್ಯ ಆಟಗಾರ ಆಂಡ್ರೆ ರಸೆಲ್ 545 ಎಸೆತಗಳಲ್ಲಿ 1,000 ಐಪಿಎಲ್ ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 15 ವರ್ಷದ ಸೂರ್ಯವಂಶಿ, ರಸೆಲ್ರ ಹಳೆಯ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ(ಏಜೆನ್ಸೀಸ್).