ದಕ್ಷಿಣ ಆಫ್ರಿಕಾ vs ಟೀಮ್ ಇಂಡಿಯಾ ಮೊದಲ ಟಿ20 
ಕ್ರಿಕೆಟ್

IND vs SA ಮೊದಲ ಟಿ20 ಪಂದ್ಯಕ್ಕೆ ಕಾತರ! ಟಿಕೆಟ್​ ಖರೀದಿಗೆ ಫ್ಯಾನ್ಸ್ ಜಟಾಪಟಿ, ಹೀಗಿದೆ ದರ ಪಟ್ಟಿ

ಪ್ರಮುಖ ಮುಖ್ಯಾಂಶಗಳು

  • ಭಾರತ-ದಕ್ಷಿಣ ಆಫ್ರಿಕಾ ನಡುವಿನ 5 ಪಂದ್ಯಗಳ ಟಿ20 ಸರಣಿ
  • ಮೊದಲ ಪಂದ್ಯ ಇದೇ ಡಿ.9ರಂದು ಕಟಕ್‌ನಲ್ಲಿ ಆರಂಭ
  • ಬರಾಬತಿ ಕ್ರೀಡಾಂಗಣದಲ್ಲಿ ಆಫ್‌ಲೈನ್ ಟಿಕೆಟ್‌ಗೆ ಮುಗಿಬಿದ್ದ ಕ್ರಿಕೆಟ್​ ಅಭಿಮಾನಿಗಳು
ಒಡಿಶಾ: ಪ್ರಸಕ್ತ ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-1 ಅಂತರ ಕಾಯ್ದುಕೊಂಡಿದೆ. ಉಳಿದಿರುವ ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಯಾರಿಗೆ ಜಯ ಸಿಗಲಿದೆ ಎಂಬ ಸದ್ಯ ಕಾತರ ಕ್ರಿಕೆಟ್​ ಪ್ರೇಮಿಗಳಲ್ಲಿ ಕಾಡುತ್ತಿದೆ. ಈ ಮಧ್ಯೆ, ಡಿ.09ರಿಂದ ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಈಗಾಗಲೇ ಟಿಕೆಟ್​ ಖರೀದಿ ಬಲು ಜೋರಾಗಿದೆ.
ಮೊದಲ ಪಂದ್ಯ ಡಿ.9ರಂದು ಕಟಕ್‌ನಲ್ಲಿ ನಡೆಯಲಿದ್ದು, ಒಡಿಶಾ ಕ್ರಿಕೆಟ್ ಸ್ಟೇಡಿಯಂನ ಕೌಂಟರ್‌ಗಳಲ್ಲಿ ಅಭಿಮಾನಿಗಳು ಟಿಕೆಟ್​ ಪಡೆಯಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ. ಮೊದಲು ಟಿ20 ನೋಡಲು ತೀವ್ರ ಕಾತರ ವ್ಯಕ್ತಪಡಿಸಿರುವ ಕ್ರಿಕೆಟ್​ ಪ್ರಿಯರು, ಟಿಕೆಟ್‌ ಖರೀದಿಗೆ ದೊಡ್ಡ ಸಂಖ್ಯೆಯಲ್ಲಿ ಸ್ಟೇಡಿಯಂ ಕೌಂಟರ್​ ಮುಂದೆ ಜಮಾಯಿಸಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. 
ಟಿಕೆಟ್​ ಕೌಂಟರ್​ ತೆರೆಯುವ ಮುನ್ನವೇ ಬೆಳಿಗ್ಗೆಯಿಂದ ರಸ್ತೆಯಲ್ಲೇ ಸರತಿ ಸಾಲಿನಲ್ಲಿ ಸಾವಿರಾರು ಅಭಿಮಾನಿಗಳು, ಕ್ರೀಡಾಂಗಣದ ಹೊರಗೆ ಟಿಕೆಟ್​ ಪಡೆದರೆ ಸಾಕಪ್ಪ ಎಂಬ ಹಪಾಹಪಿಯಲ್ಲಿರುವುದು ಕಂಡುಬಂದಿದೆ. ಕೌಂಟರ್‌ಗಳು ತೆರೆದ ತಕ್ಷಣ, ಟಿಕೆಟ್‌ಗಳನ್ನು ಪಡೆಯಲು ಮುಗಿಬಿದ್ದಿದ್ದಾರೆ. ಹೆಚ್ಚಿನ ಟಿಕೆಟ್​ಗಳ ಬದಲಿಗೆ ಒಂದಷ್ಟು ಟಿಕೆಟ್​ಗಳನ್ನು ಮಾತ್ರ ಆಫ್​ಲೈನ್​ ಮಾರಾಟಕ್ಕೆ ಬಿಟ್ಟಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 
ಒಡಿಶಾ ಕ್ರಿಕೆಟ್ ಅಸೋಸಿಯೇಷನ್ ​​ತನ್ನ ಸದಸ್ಯರು ಮತ್ತು ವಿಐಪಿಗಳಿಗೆ ಹೆಚ್ಚಿನ ಸಂಖ್ಯೆಯ ಟಿಕೆಟ್‌ಗಳನ್ನು ಹಂಚಿಕೆ ಮಾಡಿದ್ದರಿಂದ ಮತ್ತು ಕೌಂಟರ್‌ಗಳಲ್ಲಿ ಕಡಿಮೆ ಸಂಖ್ಯೆಯ ಟಿಕೆಟ್‌ಗಳನ್ನು ಮಾತ್ರ ಮಾರಾಟಕ್ಕೆ ಇಟ್ಟಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ. ಇದಲ್ಲದೆ, ಟಿಕೆಟ್ ಬೆಲೆ 1,100 ರೂ.ನಿಂದ 6 ಸಾವಿರ ರೂ.ಗೆ ಮಾರಾಟವಾಗಿದೆ ಎಂಬ ಮಾಹಿತಿಯಿದೆ. ಇತರ ಕೆಲವು ಸ್ಥಳಗಳಲ್ಲಿ, ಟಿಕೆಟ್‌ಗಳನ್ನು 11 ಸಾವಿರ ರೂ.ಗೂ ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. 

ಟಿಕೆಟ್​ ದರ ಹೇಗಿದೆ? (ಜಿಎಸ್‌ಟಿ ಸೇರಿ)

  • ಗ್ಯಾಲರಿ 1 ಮತ್ತು 3 ಟಿಕೆಟ್‌ ಬೆಲೆ 1,100 ರೂ. 
  • ಗ್ಯಾಲರಿ 2 ಮತ್ತು 4 ಟಿಕೆಟ್‌ ಬೆಲೆ 900 ರೂ. 
  • ಗ್ಯಾಲರಿ 5 ಟಿಕೆಟ್‌ ಬೆಲೆ 1,200 ರೂ. 
  • ಗ್ಯಾಲರಿ 7 ಟಿಕೆಟ್‌ ಬೆಲೆ 700 ರೂ. 
  • ವಿಶೇಷ ಎನ್‌ಕ್ಲೋಸರ್ ಟಿಕೆಟ್‌ ಬೆಲೆ 6000 ರೂ. 
  • ಎಸಿ ಬಾಕ್ಸ್ ಟಿಕೆಟ್‌ ಬೆಲೆ 8000 ರೂ. 
  • ಹೊಸ ಪೆವಿಲಿಯನ್ ಟಿಕೆಟ್‌ ಬೆಲೆ 10,000 ರೂ. 
  • ಕಾರ್ಪೊರೇಟ್ ಬಾಕ್ಸ್ ಟಿಕೆಟ್‌ ಬೆಲೆ 20,000 ರೂ.,(ಏಜೆನ್ಸೀಸ್).