ಮೈದಾನದಲ್ಲಿ ಗೆಳತಿ ಮಹಿಕಾ ಜತೆ ಅಸಭ್ಯ ವರ್ತನೆ: ಹಾರ್ದಿಕ್ ಪಾಂಡ್ಯ ವಿರುದ್ಧ ಭಾರಿ ಆಕ್ರೋಶ! Hardik Pandya
- ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ
- ಕ್ರೀಡಾಂಗಣದಲ್ಲಿ ತಮ್ಮ ಪತ್ನಿಯರು ಹಾಗೂ ಗೆಳತಿಯರ ಜತೆ ಆಟಗಾರರು ಸಂಭ್ರಮಾಚರಣೆ ಮಾಡಿದರು
- ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಜತೆ ಕೊಂಚ ಅತಿಯಾಗಿ ವರ್ತಿಸಿದರು
Hardik Pandya : ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಸದ್ಯ ಇಡೀ ದೇಶ ಇದನ್ನು ಸಂಭ್ರಮಿಸುತ್ತಿದೆ. ಭಾನುವಾರ (ಮಾರ್ಚ್) ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ 96 ರನ್ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿ ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿಹಿಡಿಯಿತು. ಬಳಿಕ ಟೀಮ್ ಇಂಡಿಯಾ ಆಟಗಾರರು ಅಹಮದಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತಮ್ಮ ಪತ್ನಿಯರು ಹಾಗೂ ಗೆಳತಿಯರ ಜತೆ ಸಂಭ್ರಮಾಚರಣೆ ಮಾಡಿದರು. ಆದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಜತೆ ಕೊಂಚ ಅತಿಯಾಗಿ ವರ್ತಿಸಿದರು. ಇದು ಟೀಮ್ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಪಾಂಡ್ಯ ಮತ್ತು ಅವರ ಗೆಳತಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ಟೀಮ್ ಇಂಡಿಯಾದ ಇತರೆ ಆಟಗಾರರು ತಮ್ಮ ಪತ್ನಿ ಹಾಗೂ ಗೆಳತಿಯರ ಜೊತೆ ಬಹಳ ಸಭ್ಯವಾಗಿ ನಡೆದುಕೊಂಡರು. ಆದರೆ, ಹಾರ್ದಿಕ್ ಮಾತ್ರ ತನ್ನ ಗೆಳತಿ ಮಹಿಕಾ ಜತೆ ಲಕ್ಷಾಂತರ ಮಂದಿ ಹಾಗೂ ಅನೇಕ ಗಣ್ಯರು ಇರುವ ಕ್ರೀಡಾಂಗಣದ ನಡುವೆ ವರ್ತಿಸಿದ ರೀತಿ ಸರಿಯಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.
ವಿಶ್ವಕಪ್ ಗೆದ್ದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು. ನಾಯಕ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ಟ್ರೋಫಿಯನ್ನು ಸ್ವೀಕರಿಸಿದರು. ಇದಾದ ಬಳಿಕ ಟೀಮ್ ಇಂಡಿಯಾ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದರು. ಈ ವೇಳೆ ಹಾರ್ದಿಕ್ ಮತ್ತು ಮಹಿಕಾ ಸಭ್ಯತೆಯನ್ನು ಪ್ರದರ್ಶಿಸದೇ ಹುಚ್ಚಾಟವನ್ನು ಮೆರೆದರು. ಆ ಆಟಕ್ಕೆ ಇರುವ ಘನತೆ ಹಾಗೂ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಮೈದಾನದಲ್ಲೇ ಪರಸ್ಪರ ಹೆಗಲ ಮೇಲೆ ಕೈಹಾಕಿ, ಡಾನ್ಸ್ ಮಾಡುತ್ತಾ ಸಂಭ್ರಮಿಸಿದರು. ಇಷ್ಡೇ ಅಲ್ಲದೆ, ಪ್ರಶಸ್ತಿ ವಿತರಿಸಿದ ಬಳಿಕ ಅದೇ ವೇದಿಕೆ ಮೇಲೆ ಒಬ್ಬರು ಒಟ್ಟಾಗಿ ಮಲಗಿಕೊಂಡರು. ಇದು ಕೂಡ ನೋಡುಗರಿಗೆ ಕೊಂಚ ಇರುಸುಮುರುಸು ಉಂಟುಮಾಡಿತು.
ಮೈದಾನದಲ್ಲಿ ಓಡಾಡುವಾಗಲೆಲ್ಲ ಅನೇಕಬಾರಿ ಪರಸ್ಪರ ತಬ್ಬಿಕೊಳ್ಳುವುದು ಮತ್ತು ಪದೇಪದೆ ಚುಂಬಿಸುವುದನ್ನು ಮಾಡುತ್ತಿದ್ದರು. ಇದು ನೋಡಿಗರಿಗೆ ಮುಜುಗರ ಉಂಟು ಮಾಡಿದೆ. ಹೀಗಾಗಿ, ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳನ್ನು ಹಂಚಿಕೊಂಡು ಹಾರ್ದಿಕ್ ಮತ್ತು ಮಹಿಕಾ ಇಬ್ಬರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಪ್ರತಿಷ್ಠಿತ ಸಮಾರಂಭದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಮೊದಲು ಕಲಿಯಿರಿ ಎಂದು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
ಕಪಿಲ್ ದೇವ್, ರೋಹಿತ್ ಶರ್ಮ, ಎಂ.ಎಸ್. ಧೋನಿ ಅವರಂತಹ ದಿಗ್ಗಜ ಆಟಗಾರರು ಮೈದಾನದಲ್ಲಿ ಹಾಜರಿದ್ದರು. ಈ ಸಮಯದಲ್ಲಿ ಇಂಥಾ ಹುಚ್ಚು ವರ್ತನೆ ಬೇಕಿತ್ತಾ ಎಂದು ಕೆಲವರು ಕಾಮೆಂಟ್ ಮೂಲಕ ಹಾರ್ದಿಕ್ ಕಾಲೆಳೆಯುತ್ತಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟಿಗರು ಕೂಡ ಹಾರ್ದಿಕ್ ಹುಚ್ಚು ವರ್ತನೆ ಕಂಡು ನಗಾಡಿದ್ದಾರೆ. ಒಟ್ಟಾರೆ ಹಾರ್ದಿಕ್ ಮತ್ತು ಗೆಳತಿ ಮಹಿಳಾ ವಿರುದ್ಧ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಟೀಮ್ ಇಂಡಿಯಾದ ಇತರೆ ಆಟಗಾರರು ತುಂಬಾ ಸಭ್ಯವಾಗಿ ನಡೆದುಕೊಳ್ಳುತ್ತಿರುವಾಗ ನಿಮ್ಮ ಹುಚ್ಚಾಟವನ್ನು ಸಹಿಸಿಕೊಳ್ಳಲು ನಮ್ಮಿಂದ ಆಗಲಿಲ್ಲ ಎಂದು ಕಿಡಿಕಾರುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಈ ಹಿಂದೆ ನಟಿ ನತಶಾ ಸ್ಟಾಂಕೋವಿಕ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಅಗಸ್ತ್ಯ ಹೆಸರಿನ ಓರ್ವ ಮಗನಿದ್ದಾನೆ. ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರು ಬೇರೆಯಾಗಿದ್ದಾರೆ. ಇದಾದ ಬಳಿಕ ಹಾರ್ದಿಕ್, ಮಹಿಕಾ ಜತೆ ತಮ್ಮ ಪ್ರೇಮ ಸಂಬಂಧವನ್ನು ಬೆಳೆಸಿದ್ದಾರೆ. ಹೀಗಾಗಿ, ಟ್ರೋಲಿಗರಿಗೆ ಗುರಿಯಾಗಲು ಇದು ಕೂಡ ಒಂದು ಕಾರಣವಾಗಿದೆ.
ಗೆಳತಿ ಬಗ್ಗೆ ಪಾಂಡ್ಯ ಹೇಳಿದ್ದೇನು?
ಟಿ20 ವಿಶ್ವಕಪ್ ಗೆದ್ದ ನಂತರ ತನ್ನ ಗೆಳತಿ ಮಹಿಕಾ ಬಗ್ಗೆ ಮಾತನಾಡಿದ ಹಾರ್ದಿಕ್, ಮಹಿಕಾ ನನ್ನ ಜೀವನಕ್ಕೆ ಬಂದ ನಂತರ ಎಲ್ಲವೂ ಸರಿಯಾಗುತ್ತಿದೆ, ನಾನು ಕೇವಲ ಗೆಲುವುಗಳನ್ನು ಕಾಣುತ್ತಿದ್ದೇನೆ ಎಂದು ಹೇಳಿದ್ದಾರೆ. ಆಕೆ ನನ್ನ "ಲಕಿ ಚಾರ್ಮ್" ಎಂದ ಹಾರ್ದಿಕ್, ಆಕೆಯ ಬೆಂಬಲದಿಂದಲೇ ತನ್ನ ಇತ್ತೀಚಿನ ಯಶಸ್ಸು ಮತ್ತು ಭಾರತದ ಈ ಐತಿಹಾಸಿಕ ಗೆಲುವು ಸಾಧ್ಯವಾಯಿತು ಎಂದು ಭಾವನಾತ್ಮಕವಾಗಿ ಕ್ರೆಡಿಟ್ ಕೊಟ್ಟಿದ್ದಾರೆ (ಏಜೆನ್ಸೀಸ್).