ಟೀಮ್ ಇಂಡಿಯಾ ಆಲ್ರೌಂಡರ್ ವಾಷಿಂಗ್ಟನ್ ಸುಂದರ್
- ಸೆಲ್ಫಿ, ಫೋಟೋ ಕೇಳಿದ ಅಭಿಮಾನಿಗಳಿಗೆ ಬೇಸರ
- ಫೋಟೋ ಕೊಡಲು ಹಿಂದೇಟು ಹಾಕಿದ ಸುಂದರ್ ನಡೆಗೆ ಟೀಕೆ
- ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋ
ನವದೆಹಲಿ: ಟೀಮ್ ಇಂಡಿಯಾ ಕ್ರಿಕೆಟಿಗರು ಅಂದರೆ ಕ್ರಿಕೆಟ್ ಪ್ರೇಮಿಗಳು ಮತ್ತು ಅಭಿಮಾನಿಗಳಿಗೆ ಅದೇನೋ ಒಂದು ಖುಷಿ. ಭಾರತ ಪರ ಆಡುವ ಸ್ಟಾರ್ ಆಟಗಾರರ ಜತೆ ಒಂದೇ ಒಂದು ಸೆಲ್ಫಿ, ಫೋಟೋ ಅಥವಾ ಆಟೋಗ್ರಾಫ್ ಸಿಕ್ಕಿದರೆ ಸಾಕು, ತಮ್ಮ ಜೀವನವೇ ಪಾವನ ಎಂದು ಭಾವಿಸುತ್ತಾರೆ. ಅದೇ ರೀತಿ, ಭಾರತ ತಂಡದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕಂಡ ಒಂದಷ್ಟು ಅಭಿಮಾನಿಗಳು, ಸೆಲ್ಫಿಗಾಗಿ ಅವರ ಹಿಂದೆಯೇ ಓಡೋಡಿ ಬಂದರು. ಈ ವೇಳೆ ಫೋಟೋ ಕೊಡದೆ ಹೋದ ಸುಂದರ್ ನಡೆಯನ್ನು ಕೆಲವರು ತೀವ್ರವಾಗಿ ಟೀಕಿಸಿದ್ದಾರೆ.
ಹಾಲ್ವೇಯಿಂದ ನಡೆದುಕೊಂಡು ಬರುತ್ತಿದ್ದ ಸುಂದರ್ ನೋಡಿದ ಕ್ರಿಕೆಟ್ ಪ್ರೇಮಿಗಳು, ಕೂಡಲೇ ಅವರ ಹಿಂದೆಯೇ ಬಂದು, ಸೆಲ್ಫಿ ಮತ್ತು ಫೋಟೋಗಾಗಿ ಮುಗಿಬಿದ್ದರು. ಯಾರೊಬ್ಬರಿಗೂ ಫೋಟೋ ಕೊಡಲು ಬಯಸದ ವಾಷಿಂಗ್ಟನ್, ಅಲ್ಲಿಂದ ಹೆಚ್ಚು ಮಾತನಾಡದೆ ಅಥವಾ ಪ್ರತಿಕ್ರಿಯಿಸದೆ ಕಾಲ್ಕಿತ್ತರು. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಒಂದಷ್ಟು ನೆಟ್ಟಿಗರು ಸುಂದರ್ ವಿರುದ್ಧ ಕಿಡಿಕಾರಿದ್ದಾರೆ. ಇಷ್ಟೊಂದು ಕೊಬ್ಬು ಇರಬಾರದು ಎಂದೆಲ್ಲ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಹೆಚ್ಚಿನ ಮಂದಿ ಸುಂದರ್ ಪರವೇ ಮಾತನಾಡಿರುವುದು ಗಮನಾರ್ಹ.
ತಮ್ಮ ಅಭಿಮಾನಿಗಳು ಸೆಲ್ಫಿ, ಫೋಟೋ ಕೇಳಲು ಬಂದಾಗ ಈ ರೀತಿಯ ವರ್ತನೆ ನಿಜಕ್ಕೂ ಸರಿಯಲ್ಲ. ಇದೆಲ್ಲ ಒಳ್ಳೆಯದಲ್ಲ ಎಂದಿದ್ದಾರೆ. ಮತ್ತೊಂದೆಡೆ, ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಆಟಗಾರರ ಪರ್ಸನಲ್ ಸ್ಪೇಸ್ ಮತ್ತು ಪ್ರೈವೆಸಿಗೆ ತೊಂದರೆ ಮಾಡಬಾರದು. ಬದಲಿಗೆ ಅದನ್ನು ಗೌರವಿಸಬೇಕು. ಇದು ನೀವು ಹೇಳುವಂತಿಲ್ಲ ಎಂದು ಸುಂದರ್ ಪರ ಅನೇಕರು ಬ್ಯಾಟ್ ಬೀಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).