ಪ್ರತಿಷ್ಠಿತ ಆಶಸ್ ಸಮರಕ್ಕೆ ವೇದಿಕೆ ಸಜ್ಜು
ಪರ್ತ್: ಆತಿಥೇಯ ಆಸ್ಟ್ರೆಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆಶಸ್ (the ashes) ಟೆಸ್ಟ್ ಸರಣಿಗೆ ವೇದಿಕೆ ಸಜ್ಜಾಗಿದೆ. 5 ಪಂದ್ಯಗಳ ಸರಣಿಯ ಮೊದಲ ಟೆಸ್ಟ್ (test cricket) ಶುಕ್ರವಾರದಿಂದ ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆಸ್ಟ್ರೆಲಿಯಾ (Australia) ತಂಡ ತವರಿನ ಲಾಭದೊಂದಿಗೆ ಹಾಲಿ ಚಾಂಪಿಯನ್ ಪಟ್ಟ ಕಾಯ್ದುಕೊಳ್ಳುವ ತವಕದಲ್ಲಿದ್ದರೆ, ಪ್ರವಾಸಿ ಇಂಗ್ಲೆಂಡ್ (England) ತಂಡ 10 ವರ್ಷಗಳ ಬಳಿಕ ಟ್ರೋಫಿಯನ್ನು ಮರಳಿ ಪಡೆಯುವ ಹಂಬಲದಲ್ಲಿದೆ. ಜತೆಗೆ ಸ್ಟೀವನ್ ಸ್ಮಿತ್ ಬಳಗ ಅನುಭವಿ ಆಟಗಾರರ ಬಲ ಹೊಂದಿದ್ದರೆ, ಬೆನ್ ಸ್ಟೋಕ್ಸ್ ಪಡೆ ಆಕ್ರಮಣಕಾರಿ ಬಾಜ್ಬಾಲ್ ಕಾರ್ಯತಂತ್ರದೊಂದಿಗೆ ಯಶಸ್ಸು ಕಾಣುವ ಯೋಜನೆಯಲ್ಲಿದೆ.
ಆಸೀಸ್ ತಂಡ ಕಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಜತೆಗೆ ಮತ್ತೋರ್ವ ವೇಗಿ ಜೋಶ್ ಹ್ಯಾಸಲ್ವುಡ್ ಗೈರಿನ ಹಿನ್ನಡೆ ಹೊಂದಿದ್ದು, 31 ವರ್ಷದ ಆರಂಭಿಕ ಜೇಕ್ ವೆದರಾಲ್ಡ್ ಮತ್ತು ವೇಗಿ ಬ್ರೆಂಡನ್ ಡಾಗೆಟ್ಗೆ ಪದಾರ್ಪಣೆ ಅವಕಾಶ ಕಲ್ಪಿಸಲಿದೆ. ಕಮ್ಮಿನ್ಸ್ ಗೈರಿನಲ್ಲಿ 36 ವರ್ಷದ ಸ್ಮಿತ್ ಹಂಗಾಮಿ ನಾಯಕರಾಗಿದ್ದಾರೆ.
ಇಂಗ್ಲೆಂಡ್ 12ರ ಬಳಗವನ್ನು ಬುಧವಾರವೇ ಪ್ರಕಟಿಸಿದೆ. ಈ ಪೈಕಿ ಸ್ಪಿನ್ನರ್ ಶೋಯಿಬ್ ಬಶೀರ್ 11ರ ಬಳಗದಿಂದ ಹೊರಗುಳಿಯುವ ಸಾಧ್ಯತೆ ಇದೆ. ಹ್ಯಾರಿ ಬ್ರೂಕ್ ಈಗ ತಂಡದ ಹೊಸ ಉಪನಾಯಕರಾಗಿದ್ದು, ಒಲಿ ಪೋಪ್ ಕೂಡ ಸ್ಥಾನ ಉಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ 2015ರಲ್ಲಿ ಕೊನೆಯದಾಗಿ ತವರಿನಲ್ಲೇ ಆಶಸ್ ಟ್ರೋಫಿ ಗೆದ್ದಿತ್ತು. ನಂತರದ 4 ಸರಣಿಗಳಲ್ಲಿ ಆಸೀಸ್ 2ರಲ್ಲಿ ಗೆದ್ದಿದ್ದರೆ, 2ರಲ್ಲಿ ಸಮಬಲದೊಂದಿಗೆ ಟ್ರೋಫಿ ಉಳಿಸಿಕೊಂಡಿತ್ತು. ಇಂಗ್ಲೆಂಡ್ 2010&11ರಲ್ಲಿ ಕೊನೆಯದಾಗಿ ಆಸೀಸ್ ನೆಲದಲ್ಲಿ ಸರಣಿ ಜಯಿಸಿತ್ತು.
1. ನವೆಂಬರ್ 21-25 ಪರ್ತ್ ಬೆಳಗ್ಗೆ 7.50
2. ಡಿಸೆಂಬರ್ 4-8 ಬ್ರಿಸ್ಬೇನ್ ಬೆಳಗ್ಗೆ 9.30
3. ಡಿಸೆಂಬರ್ 17-21 ಅಡಿಲೇಡ್ ಬೆಳಗ್ಗೆ 5.00
4. ಡಿಸೆಂಬರ್ 26-30 ಮೆಲ್ಬೋರ್ನ್ ಬೆಳಗ್ಗೆ 5.00
5. ಜನವರಿ 4-8 ಸಿಡ್ನಿ ಬೆಳಗ್ಗೆ 5.00
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
*73: ಇದುವರೆಗೆ 73 ಆಶಸ್ ಸರಣಿಗಳು ನಡೆದಿದ್ದು, ಆಸ್ಟ್ರೆಲಿಯಾ 34 ಮತ್ತು ಇಂಗ್ಲೆಂಡ್ 32ರಲ್ಲಿ ಸರಣಿ ಗೆದ್ದಿದೆ. ಉಳಿದಂತೆ 7 ಸರಣಿ ಡ್ರಾಗೊಂಡಿವೆ. ಈ ಪೈಕಿ, ಹಿಂದಿನ ಆಶಸ್ ಗೆದ್ದ ಆಧಾರದಲ್ಲಿ ಆಸೀಸ್ 6 (1938, 1962, 1965, 1968, 2019, 2023) ಮತ್ತು ಇಂಗ್ಲೆಂಡ್ 1 (1972) ಬಾರಿ ಟ್ರೋಫಿ ಉಳಿಸಿಕೊಂಡಿದೆ.