ಕ್ಯಾಂಡಿ (ಶ್ರೀಲಂಕಾ): ಟಿ20 ವಿಶ್ವಕಪ್‌ನಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನ(Pakistan) ತಂಡಕ್ಕೆ ಈಗ ಮತ್ತೊಂದು ಭಾರೀ ಮುಜುಗರ ಎದುರಾಗಿದೆ. ಶ್ರೀಲಂಕಾದ ಕ್ಯಾಂಡಿಯಲ್ಲಿರುವ 'ಗೋಲ್ಡನ್ ಕ್ರೌನ್' ಹೋಟೆಲ್‌ನಲ್ಲಿ ತಂಗಿದ್ದ ಪಾಕಿಸ್ತಾನ ತಂಡದ ಹೆಸರಿಸದ ಆಟಗಾರನೊಬ್ಬ ಮಹಿಳಾ ಹೌಸ್‌ಕೀಪಿಂಗ್ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ. ಈ ಘಟನೆಯು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತು ಕ್ರೀಡಾ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ 'ಸೂಪರ್ 8' ಹಂತದ ಕೊನೆಯ ಪಂದ್ಯಕ್ಕೆ ಮುನ್ನ ಈ ದುರ್ಘಟನೆ ಸಂಭವಿಸಿದೆ. ಹೌಸ್‌ಕೀಪಿಂಗ್ ಕೆಲಸಕ್ಕಾಗಿ ಬಂದಿದ್ದ ಮಹಿಳಾ ಸಿಬ್ಬಂದಿಯೊಂದಿಗೆ ಪಾಕ್ ಆಟಗಾರ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎನ್ನಲಾಗಿದೆ. ಕೂಡಲೇ ಆ ಮಹಿಳೆ ಜೋರಾಗಿ ಕೂಗಿಕೊಂಡಾಗ ಹೋಟೆಲ್‌ನ ಇತರ ಸಿಬ್ಬಂದಿ ರಕ್ಷಣೆಗೆ ಬಂದಿದ್ದಾರೆ. ಕೂಡಲೇ ಹೋಟೆಲ್ ಆಡಳಿತ ಮಂಡಳಿಯು ಈ ವಿಷಯವನ್ನು ಪಾಕಿಸ್ತಾನ ತಂಡದ ಮ್ಯಾನೇಜರ್ ನವೀದ್ ಚೀಮಾ ಅವರಿಗೆ ವರದಿ ಮಾಡಿದೆ.
ಕಠಿಣ ಕ್ರಮಕ್ಕೆ ಆಗ್ರಹ
ಹೋಟೆಲ್‌ನ ಉನ್ನತ ಆಡಳಿತ ಮಂಡಳಿಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಆಟಗಾರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ತಂಡದ ಮ್ಯಾನೇಜರ್ ನವೀದ್ ಚೀಮಾ ಅವರು ಹೋಟೆಲ್ ಸಿಬ್ಬಂದಿಯ ಕ್ಷಮೆ ಯಾಚಿಸಿ, ಘಟನೆಯಲ್ಲಿ ಭಾಗಿಯಾದ ಆಟಗಾರನಿಗೆ ದಂಡ ವಿಧಿಸುವ ಮೂಲಕ ಸದ್ಯಕ್ಕೆ ಪ್ರಕರಣವನ್ನು ತಣ್ಣಗಾಗಿಸಿದ್ದಾರೆ ಎಂದು ಟೆಲಿಕಾಂ ಏಷ್ಯಾ ಸ್ಪೋರ್ಟ್ ವರದಿ ಮಾಡಿದೆ. ಪಾಕಿಸ್ತಾನ ತಂಡ ಈಗ ವಿಶ್ವಕಪ್‌ನಿಂದ ಹೊರಬಿದ್ದು ಸ್ವದೇಶಕ್ಕೆ ಮರಳಿದೆ. ಆದರೆ ಅಸಭ್ಯವಾಗಿ ವರ್ತಿಸಿದ ಆಟಗಾರ ಪಿಸಿಬಿ ಶಿಸ್ತು ಸಮಿತಿಯ ಮುಂದೆ ಹಾಜರಾಗಬೇಕಿದ್ದು, ಆತನಿಗೆ ತಂಡದಿಂದ ನಿಷೇಧ ಅಥವಾ ಹೆಚ್ಚಿನ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ವರದಿ ಉಲ್ಲೇಖಿಸಿದೆ.
ಹಳೆಯ ಇತಿಹಾಸ ಕೆದಕಿದ ವರದಿ
ಪಾಕಿಸ್ತಾನದ ಆಟಗಾರರು ಮತ್ತು ಸಿಬ್ಬಂದಿ ಈ ಹಿಂದೆಯೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ವರದಿಯಾಗಿದೆ. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಯುವ ಬ್ಯಾಟರ್ ಹೈದರ್ ಅಲಿ ಅತ್ಯಾಚಾರದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದರು. ನಂತರ ಪುರಾವೆಗಳ ಕೊರತೆಯಿಂದ ಬಿಡುಗಡೆ ಹೊಂದಿದ್ದರು. ಅಲ್ಲದೆ, ಮಲೇಷ್ಯಾ ಪ್ರವಾಸದ ವೇಳೆ ತಂಡದ ಮಸಾಜ್ ಮಾಡುವ ವ್ಯಕ್ತಿ ಮಲಾಂಗ್ ಅಲಿ ಕೂಡ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿ ದಂಡ ತೆತ್ತಿದ್ದರು.
ವಿಶ್ವಕಪ್‌ನಲ್ಲಿ ಪಾಕ್ ವೈಫಲ್ಯ
ಒಂದೆಡೆ ಮೈದಾನದ ಒಳಗೆ ಕಳಪೆ ಪ್ರದರ್ಶನ ನೀಡಿದ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ 5 ರನ್‌ಗಳ ಜಯ ಸಾಧಿಸಿದರೂ ನೆಟ್ ರನ್‌ರೇಟ್ ಆಧಾರದ ಮೇಲೆ ಸೆಮಿಫೈನಲ್ ತಲುಪುವಲ್ಲಿ ವಿಫಲವಾಯಿತು. ಮೈದಾನದ ಹೊರಗೆ ಆಟಗಾರರ ಇಂತಹ ಅಶಿಸ್ತಿನ ವರ್ತನೆ ತಂಡದ ಹೀನಾಯ ಸ್ಥಿತಿಗೆ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ,(ಏಜೆನ್ಸೀಸ್).