ದುಲೀಪ್ ಟ್ರೋಫಿ: ಇಂದಿನಿಂದ ದಕ್ಷಿಣ-ಉತ್ತರ, ಕೇಂದ್ರ-ಪೂರ್ವ ವಲಯಗಳ ನಡುವೆ ಸೆಮೀಸ್
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದೇಶೀಯ ಕ್ರಿಕೆಟ್ ಋತುವಿನ ಮೊದಲ ಟೂರ್ನಿ ಪ್ರತಿಷ್ಠಿತ ದುಲೀಪ್ ಟ್ರೋಫಿಯ ಸೆಮಿಫೈನಲ್ (Duleep Trophy semis) ಪಂದ್ಯಗಳು ಭಾನುವಾರ ಆರಂಭವಾಗಲಿವೆ. ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಕೇಂದ್ರ -ಪೂರ್ವ ವಲಯ ತಂಡಗಳು ಎದುರಾಗಲಿವೆ. ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಮತ್ತು ಉತ್ತರ ವಲಯ ತಂಡಗಳು ಮುಖಾಮುಖಿ ಆಗಲಿವೆ.
ಕಳೆದ ಬಾರಿಯ ಫೈನಲಿಸ್ಟ್ಗಳಾದ ಕೇಂದ್ರ ವಲಯ, ದಕ್ಷಿಣ ವಲಯ ತಂಡಗಳು ನೇರವಾಗಿ ಅಂತಿಮ ನಾಲ್ಕರ ಟ್ಟಕ್ಕೇರಿದ್ದು, ಉತ್ತರ, ಪೂರ್ವ ವಲಯಗಳು ಕ್ವಾರ್ಟರ್ಫೈನಲ್ ಜಯದೊಂದಿಗೆ ಸೆಮೀಸ್ ಪ್ರವೇಶಿಸಿವೆ. ಐಪಿಎಲ್ನ ಆರ್ಸಿಬಿ ಪುರುಷರ ತಂಡದ ನಾಯಕ ರಜತ್ ಪಾಟೀದಾರ್ ಸತತ ಎರಡನೇ ಆವೃತ್ತಿಯಲ್ಲಿ ಕೇಂದ್ರ ವಲಯ ಮುನ್ನಡೆಸಲಿದ್ದು, ರಿಂಕು ಸಿಂಗ್ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ. ಬೌಲಿಂಗ್ ವಿಭಾಗದ ಕೇಂದ್ರ ಪ್ರಮುಖ ಬಲವಾಗಿದ್ದು, ಸಾರಾಂಶ್ ಜೈನ್, ಹರ್ಷ್ ದುಬೆ ಜತೆಗೆ ವೇಗಿ ಯಶ್ ಠಾಕೂರ್ ಶಕ್ತಿ ತುಂಬಲಿದ್ದಾರೆ. ಇಶಾನ್ ಕಿಶನ್ ಸಾರಥ್ಯದ ಪೂರ್ವ ವಲಯ ಕ್ವಾರ್ಟರ್ಫೈನಲ್ನಲ್ಲಿ ಈಶಾನ್ಯ ಎದುರು ಇನಿಂಗ್ಸ್ ಹಾಗೂ 210 ರನ್ ಜಯಿಗಳಿತ್ತು. 15 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ ರೆಡ್ಬಾಲ್ನಲ್ಲಿ ಸಾಮರ್ಥ್ಯ ಪ್ರದರ್ಶಿಸಲು ಮತ್ತೊಂದು ಅವಕಾಶ ಇದಾಗಿದೆ. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಬಂಗಾಳದ ಸುದೀಪ್ ರಮಿ, ಶಾಬಾಜ್ ಅಹ್ಮದ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ಹಾಲಿ ರನ್ನರ್ ಅಪ್ ದಕ್ಷಿಣ ವಲಯ ಈ ಬಾರಿ ಪ್ರಶಸ್ತಿ ಒಲಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ತಿಲಕ್ ವರ್ಮ ನೇತೃತ್ವದ ತಂಡದಲ್ಲಿ ಕರ್ನಾಟಕದ ಕರುಣ್ ನಾಯರ್, ಆರ್. ಸ್ಮರಣ್ ಹಾಗೂ ವೇಗಿ ವಿದ್ವತ್ ಕಾವೇರಪ್ಪ, ಆಲ್ರೌಂಡರ್ ಶ್ರೇಯಸ್ ಗೋಪಾಲ್ ಇದ್ದಾರೆ. ಜತೆಗೆ ಎನ್.ಜಗದೀಶನ್, ರಿಕಿ ಭುಯ್ ಒಳಗೊಂಡ ಬಲಿಷ್ಠ ಬ್ಯಾಟಿಂಗ್ ವಿಭಾಗ ಹೊಂದಿದೆ. ಕ್ವಾರ್ಟರ್ಫೈನಲ್ನಲ್ಲಿ ಪಶ್ಚಿಮ ವಲಯವನ್ನು 52 ರನ್ಗಳಿಸಿ ಸೋಲಿಸಿದ ಆತ್ಮವಿಶ್ವಾಸದೊಂದಿಗೆ ಉತ್ತರ ವಲಯ ಕಣಕ್ಕಿಳಿಯಲಿದೆ. ಕಳೆದ ಅವೃತ್ತಿ ರಣಜಿ ಟ್ರೋಫಿಯ 3ನೇ ಗರಿಷ್ಠ ರನ್ ಸ್ಕೋರರ್ ಸನತ್ ಸಾಂಗ್ವಾನ್ ಬದಲಿಗೆ ಯಶ್ ಧುಲ್ಗೆ ಸ್ಥಾನ ನೀಡಿ ಟೀಕೆಗೆ ಗುರಿಯಾಗಿದ್ದ ಉತ್ತರ ವಲಯ ತಂಡವನ್ನು ಜಮ್ಮು ಕಾಶ್ಮೀರದ ಕನ್ಹಯ್ಯ ವಾಧವನ್ ಮುನ್ನಡೆಸಲಿದ್ದಾರೆ. ಭಾರತ ಟೆಸ್ಟ್ ತಂಡದ ವೇಗಿ ಗುರುನೂರ್ ಬ್ರಾರ್, ಆಯುಷ್ ಬಡೋನಿ, ಅಬ್ದುಲ್ ಸಮದ್, ಅಂಶುಲ್ ಕಾಂಬೋಜ್ ಪ್ರಮುಖ ಆಟಗಾರರು.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್