ದುಲೀಪ್ ಟ್ರೋಫಿ:ದಕ್ಷಿಣ ವಲಯ ತಂಡದಲ್ಲಿ ನಾಲ್ವರು ಕನ್ನಡಿಗರು, ಕೇಂದ್ರಕ್ಕೆ ರಜತ್ ನಾಯಕ 
ಕ್ರಿಕೆಟ್

Duleep Trophy: ದಕ್ಷಿಣ ವಲಯ ತಂಡದಲ್ಲಿ ನಾಲ್ವರು ಕನ್ನಡಿಗರು, ಕೇಂದ್ರಕ್ಕೆ ರಜತ್ ನಾಯಕ

ಬೆಂಗಳೂರು: ಆಗಸ್ಟ್ 23ರಂದು ಆರಂಭವಾಗಲಿರುವ 2026-27ರ ದೇಶೀಯ ಋತುವಿನ ಮೊದಲ ಟೂರ್ನಿ 63ನೇ ಆವೃತ್ತಿಯ ದುಲೀಪ್ ಟ್ರೋಫಿಗೆ ದಕ್ಷಿಣ ವಲಯ ತಂಡ ಪ್ರಕಟಿಸಲಾಗಿದ್ದು, ಕರ್ನಾಟಕದ ಎಡಗೈ ಬ್ಯಾಟರ್ ಆರ್. ಸ್ಮರಣ್, ಅನುಭವಿ ಕರುಣ್ ನಾಯರ್ ಸಹಿತ ನಾಲ್ವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ.


ಭಾರತ ಟಿ20 ತಂಡದ ಉಪನಾಯಕ ತಿಲಕ್ ವರ್ಮ ದಕ್ಷಿಣ ವಲಯ ಮುನ್ನಡೆಸಲಿದ್ದು, ಆಂಧ್ರದ ರಿಕಿ ಭುಯ್ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ. ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ದೇವದತ್ ಪಡಿಕ್ಕಲ್ ದಕ್ಷಿಣ ವಲಯದಲ್ಲಿ ಸ್ಥಾನ ಪಡೆದಿಲ್ಲ. ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ಪರ ಕೊನೆಯದಾಗಿ ಆಡಿದ್ದ 34 ವರ್ಷ ಕರುಣ್ ನಾಯರ್ ದುಲೀಪ್ ಟ್ರೋಫಿಗೆ ಸ್ಥಾನ ಪಡೆದಿರುವುದು ಅಚ್ಚರಿ ಎನಿಸಿದೆ. ಕಳೆದ ವರ್ಷದ ದೇಶೀಯ ಋತುವಿನಲ್ಲಿ ರನ್ ಮಳೆ ಸುರಿಸಿದ್ದ ಸ್ಮರಣ್ ಜತೆಗೆ ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್, ವೇಗಿ ವಿದ್ವತ್ ಕಾವೇರಪ್ಪ ತಂಡದಲ್ಲಿರುವ ಇನ್ನಿಬ್ಬರು ಕನ್ನಡಿಗರಾಗಿದ್ದಾರೆ.
ಕಳೆದ ವರ್ಷ ದುಲೀಪ್ ಟ್ರೋಫಿ ಫೈನಲ್‌ಗೇರಿದ್ದ ದಕ್ಷಿಣ ವಲಯ ಈ ಬಾರಿ ನೇರವಾಗಿ ಸೆಮಿಫೈನಲ್ ಅರ್ಹತೆ ಪಡೆದಿದೆ. ಆಗಸ್ಟ್ 30ಕ್ಕೆ ಸೆಮಿಫೈನಲ್ ಪಂದ್ಯ ಆರಂಭವಾಗಲಿದೆ.
ಕೇಂದ್ರಕ್ಕೆ ರಜತ್ ನಾಯಕ: ಐಪಿಎಲ್ ಆರ್‌ಸಿಬಿ ತಂಡದ ಸಾರಥಿ ರಜತ್ ಪಾಟೀದಾರ್ ಕೇಂದ್ರ ವಲಯ ತಂಡದ ನಾಯಕ ಹಾಗೂ ರಿಂಕು ಸಿಂಗ್ ಉಪನಾಯಕರಾಗಿ ನೇೀಮಕಗೊಂಡಿದ್ದಾರೆ. ಹಾಲಿ ಚಾಂಪಿಯನ್ ಕೇಂದ್ರ ವಲಯ ಸಹ ಸೆಮಿಫೈನಲ್‌ಗೆ ನೇರ ಅರ್ಹತೆ ಪಡೆದುಕೊಂಡಿದೆ.
ಪೂರ್ವ ವಲಯಕ್ಕೆ ಇಶಾನ್ ಕಿಶನ್ ನಾಯಕ ಹಾಗೂ ವೈಭವ್ ಸೂರ್ಯವಂಶಿ ಉಪನಾಯಕರಾಗಿದ್ದು, ಆಗಸ್ಟ್ 23ರಂದು ಆರಂಭವಾಗಲಿರುವ ಕ್ವಾರ್ಟರ್‌ ಫೈನಲ್ಸ್‌ನಲ್ಲಿ ಪೂರ್ವ-ಈಶಾನ್ಯ, ಪಶ್ಚಿಮ-ಉತ್ತರ ವಲಯ ತಂಡಗಳು ಎದುರಾಗಲಿವೆ. ಎಲ್ಲ ಪಂದ್ಯಗಳು ಬೆಂಗಳೂರಿನ ಹೊರವಲಯ ಸಿಂಗಹಳ್ಳಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯಲಿವೆ.