ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಿದ ಕಿವೀಸ್; ಶಿವಂ ದುಬೆ ಹೋರಾಟ ವ್ಯರ್ಥ
ವಿಶಾಖಪಟ್ಟಣ: ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದ ನಡುವೆ ಶಿವಂ ದುಬೆ (65 ರನ್, 23 ಎಸೆತ, 3 ಬೌಂಡರಿ, 7 ಸಿಕ್ಸರ್) ನಡೆಸಿದ ಏಕಾಂಗಿ ಹೋರಾಟದ ಹೊರತಾಗಿಯೂ ಭಾರತ ತಂಡ ನಾಲ್ಕನೇ ಟಿ20 (fourth T20I) ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ 50 ರನ್ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ ಮಿಚೆಲ್ ಸ್ಯಾಂಟ್ನರ್ ಪಡೆ ಐದು ಪಂದ್ಯಗಳ ಸರಣಿಯಲ್ಲಿ ಸೂರ್ಯಕುಮಾರ್ (Suryakumar Yadav) ಬಳಗದ ಮುನ್ನಡೆಯನ್ನು 3-1ಕ್ಕೆ ತಗ್ಗಿಸಿತು.
ವೈಎಸ್ಆರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾದ ಟಿಮ್ ಸೀರ್ಟ್ (62 ರನ್, 36 ಎಸೆತ, 7 ಬೌಂಡರಿ, 3 ಸಿಕ್ಸರ್) ಮತ್ತು ಡೆವೊನ್ ಕಾನ್ ವೇ (42) ಒದಗಿಸಿದ ಬಿರುಸಿನ ಆರಂಭದ ಜತೆಗೆ ಸ್ಲಾಗ್ ಓವರ್ಗಳಲ್ಲಿ ಡೆರಿಲ್ ಮಿಚೆಲ್ (39* ರನ್,18 ಎಸೆತ, 2 ಬೌಂಡರಿ, 3 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ ನ್ಯೂಜಿಲೆಂಡ್ 7 ವಿಕೆಟ್ಗೆ 215 ರನ್ಗಳ ಬೃಹತ್ ಮೊತ್ತ ಪೇರಿಸಿತು. ಚೇಸಿಂಗ್ನಲ್ಲಿ 82 ರನ್ಗಳಿಗೆ 5 ವಿಕೆಟ್ ಕಳೆದುಕೊಂಡ ಭಾರತ ತಂಡ ಲಯ ತಪ್ಪಿತು. ಆಗ, ಕಿವೀಸ್ ಬೌಲರ್ಗಳ ಎದುರು ಸಿಕ್ಸರ್ಗಳ ಮಳೆಗರೆದ ಶಿವಂ ದುಬೆ (Shivam Dube) ಪ್ರತಿರೋಧ ತೋರಿದರೂ, ಅಂತಿಮವಾಗಿ ಭಾರತ 18.4 ಓವರ್ಗಳಲ್ಲಿ 165 ರನ್ಗಳಿಗೆ ಆಲೌಟ್ ಆಗಿ ಸೋಲು ಅನುಭವಿಸಿತು.
ಚೇಸಿಂಗ್ನ ಮೊದಲ ಎಸೆತದಲ್ಲಿ ಇನ್ ಫಾರ್ಮ್ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ (0) ಡಕೌಟ್ ಆದರೆ, ಹಿಂದಿನ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದ ನಾಯಕ ಸೂರ್ಯಕುಮಾರ್ (8) ನಿರಾಸೆ ಮೂಡಿಸಿದರು. ಕಳಪೆ ನಿರ್ವಹಣೆ ಮುಂದುವರಿಸಿದ ಸಂಜು ಸ್ಯಾಮ್ಸನ್ (24) ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾದರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (2) ಹೆಚ್ಚು ಹೊತ್ತು ನಿಲ್ಲದೆ ಡಗೌಟ್ ಸೇರಿದರು. ಆಗ, ರಿಂಕು ಸಿಂಗ್ (39)& ಶಿವಂ ದುಬೆ ಜೋಡಿ 11 ಎಸೆತಗಳಲ್ಲಿ 19 ರನ್ಗಳಿಸಿದಾಗ ಜಾಕ್ ಫೌಲ್ಕ್ಸ್ ಭಾರತಕ್ಕೆ ಚೇಸಿಂಗ್ನಲ್ಲಿ ಬ್ರೇಕ್ ಹಾಕಿದರು. ನಂತರ ಶಿವಂ ದುಬೆ ಜತೆಯಾದ ಹರ್ಷಿತ್ ರಾಣಾ ಉತ್ತಮ ಬೆಂಬಲ ನೀಡಿದರು. ಏಕಾಂಗಿಯಾಗಿ ಹೋರಾಡಿದ ಶಿವಂ 15 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದರು. ಆರನೇ ವಿಕೆಟ್ಗೆ ಹರ್ಷಿತ್ ರಾಣಾ-ಶಿವಂ ದುಬೆ 27 ಎಸೆತಗಳಲ್ಲಿ 63 ರನ್ಗಳಿಸಿದರೆ, ಇದರಲ್ಲಿ ದುಬೆ ಒಬ್ಬರೇ 56 ರನ್ ಕಸಿದರು. ನಾನ್ ಸ್ಟ್ರೈಕ್ನಲ್ಲಿದ್ದ ಶಿವಂ ದುಬೆ 15ನೇ ಓವರ್ನಲ್ಲಿ ದುರದೃಷ್ಟಕರವಾಗಿ ರನೌಟ್ ಆಗುವುದರೊಂದಿಗೆ ಭಾರತದ ಗೆಲುವಿನ ಆಸೆಯೂ ಕಮರಿತು.