- ಇನ್‌ಸ್ಟಾಗ್ರಾಮ್ ಲೈಕ್; ಮಾನನಷ್ಟ ಮೊಕದ್ದಮೆ ಪ್ರಕರಣ
- ಕ್ಯಾಚ್ ಬಿಟ್ಟ ಹತಾಶೆ ನನ್ನ ಮೇಲೆ ತೋರಿಸಬೇಡಿ
- ಚಹಲ್ಗೆ ತಾನಿಯಾ ಕೌಂಟರ್
ಕ್ರಿಕೆಟ್: ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮೈದಾನದಲ್ಲಿ ತಮ್ಮ ವಿಶಿಷ್ಟ ಶೈಲಿಯ ಬೌಲಿಂಗ್ಗೆ ಫೇಮಸ್. ಆದರೆ ಈಗ ಅವರು ಮೈದಾನದ ಹೊರಗೆ ಕಾನೂನು ಸಮರಕ್ಕಿಳಿದು ಸುದ್ದಿಯಾಗಿದ್ದಾರೆ.
ಇನ್‌ಸ್ಟಾಗ್ರಾಮ್ ವಿಚಾರದಲ್ಲಿ ನಟಿ ತಾನಿಯಾ ಚಟರ್ಜಿ (Tanya Chatterjee on Yuzvendra Chahal) ಅವರಿಗೆ ಚಾಹಲ್ ಮಾನನಷ್ಟ ನೋಟಿಸ್ ಕಳುಹಿಸಿದ್ದು, ಈಗ ಸೋಷಿಯಲ್ ಮೀಡಿಯಾನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಏನಿದು ಖಾಸಗಿ ಚಾಟ್ ವಿವಾದ?
ತಾನಿಯಾ ಚಟರ್ಜಿ ಇತ್ತೀಚೆಗೆ ಪಾಪರಾಜಿಗಳ ಮುಂದೆ ತಮ್ಮ ಫೋನ್ ತೋರಿಸುತ್ತಾ, ಚಾಹಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಿಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬ ಖಾಸಗಿ ಚಾಟ್ ಅನ್ನು ಲೀಕ್ ಮಾಡಿದ್ದರು. ಚಾಹಲ್ ತಮ್ಮನ್ನು ಹಲವು ಬಾರಿ ಕ್ಯೂಟ್ ಎಂದು ಕರೆದಿದ್ದಾರೆ ಎಂದು ತಾನಿಯಾ ವಿಡಿಯೋದಲ್ಲಿ ತೋರಿಸಿದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಾಹಲ್ ಅವರ ಪಿಆರ್ ತಂಡ ತಾನಿಯಾಗೆ ಕರೆ ಮಾಡಿ ವಿಡಿಯೋ ಡಿಲೀಟ್ ಮಾಡುವಂತೆ ವಿನಂತಿಸಿತ್ತು. ಆದರೆ ತಾನಿಯಾ ಅದಕ್ಕೆ ಒಪ್ಪದಿದ್ದಾಗ, ಚಾಹಲ್ ನೇರವಾಗಿ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.
ಮುದ್ದಾಗಿ ಕಾಣಿಸ್ತೀರಾ ಅಂದ್ರೆ ತಪ್ಪಾ? ತಾನಿಯಾ ಪ್ರಶ್ನೆ
ಈ ನೋಟಿಸ್ ಬಗ್ಗೆ ಮೊದಲ ಬಾರಿಗೆ ಬಾಯಿಬಿಟ್ಟಿರುವ ತಾನಿಯಾ ಚಟರ್ಜಿ, ಚಾಹಲ್ ಕ್ರಮಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾರನ್ನಾದರೂ ಮುದ್ದಾಗಿದೆ ಎಂದು ಹೊಗಳುವುದು ಈ ದೇಶದಲ್ಲಿ ಅಪರಾಧವೇ? ಎಂದು ಅವರು ಪ್ರಶ್ನಿಸಿದ್ದಾರೆ.
ನಾನು ಅಸಭ್ಯವಾಗಿ ವರ್ತಿಸಿಲ್ಲ. ಅವರು ನನ್ನ ಫೋಟೋ ನೋಡಿ ಕ್ಯೂಟ್ ಎಂದು ಮೆಸೇಜ್ ಮಾಡಿದ್ದರು, ಅದನ್ನೇ ನಾನು ತೋರಿಸಿದ್ದೇನೆ. ಇದರಲ್ಲಿ ಮರ್ಯಾದೆ ಹೋಗುವಂತದ್ದು ಏನಿದೆ? ಅನೇಕ ಸೆಲೆಬ್ರಿಟಿಗಳು ನನ್ನನ್ನು ಹಾಟ್ ಎಂದು ಕರೆಯುತ್ತಾರೆ, ಹಾಗಂತ ನಾನು ಅವರ ಮೇಲೆಲ್ಲಾ ಕೇಸ್ ಹಾಕುತ್ತಾ ಕೂರಬೇಕೆ? ಎಂದು ಲೇವಡಿ ಮಾಡಿದ್ದಾರೆ.
ಕ್ಯಾಚ್ ಬಿಟ್ಟ ಹತಾಶೆ ನನ್ನ ಮೇಲೆ ತೋರಿಸಬೇಡಿ
ತಾನಿಯಾ ಇಷ್ಟಕ್ಕೆ ಸುಮ್ಮನಾಗದೆ ಚಾಹಲ್ ಅವರ ಕ್ರಿಕೆಟ್ ಕೆರಿಯರ್ ಬಗ್ಗೆಯೂ ಟಾಂಗ್ ನೀಡಿದ್ದಾರೆ. ಚಾಹಲ್ ಸದ್ಯ ಈ ರೀತಿಯ ವಿವಾದಗಳಿಗಿಂತ ತಮ್ಮ ಆಟದ ಮೇಲೆ ಹೆಚ್ಚು ಗಮನ ಕೊಡಬೇಕು.
ಮೈದಾನದಲ್ಲಿ ಕ್ಯಾಚ್‌ಗಳನ್ನು ಬಿಡುತ್ತಾ ಹತಾಶರಾಗಿರುವ ಅವರು, ಆ ಸಿಟ್ಟನ್ನು ನನ್ನ ಮೇಲೆ ತೋರಿಸುತ್ತಿದ್ದಾರಾ? ಎಂದು ಖಾರವಾಗಿ ಕೇಳಿದ್ದಾರೆ. ಸದ್ಯಕ್ಕೆ ಈ ಕಾನೂನು ನೋಟಿಸ್ ತನಗೆ ಭಯ ಹುಟ್ಟಿಸಿಲ್ಲ ಮತ್ತು ತನ್ನ ವಕೀಲರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ,(ಏಜನ್ಸೀಸ್).