ಆರ್​ಸಿಬಿ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ 
ಕ್ರಿಕೆಟ್

339 ರನ್​... ಸುಮ್ಮನೆ ಹೇಳಲ್ಲ 'ಕಿಂಗ್ ಕೊಹ್ಲಿ' ಅಂತ! ಇದು ನಡೆಯಲೇಬೇಕು ಅಂತಿದ್ದಾರೆ ಆರ್​ಸಿಬಿ ಫ್ಯಾನ್ಸ್​ | King Kohli

ಪ್ರಮುಖ ಮುಖ್ಯಾಂಶಗಳು

  • ಮಾ.28ರಿಂದ ಐಪಿಎಲ್​ 19ನೇ ಆವೃತ್ತಿ ಆರಂಭ
  • ಈ ಸೀಸನ್​ನಲ್ಲಿ ಕೊಹ್ಲಿಗೆ ಬೇಕಿದೆ 339 ರನ್​
  • 19ನೇ ಸೀಸನ್​ನಲ್ಲೇ ಇದು ಸಂಭವಿಸಿದರೆ ಐತಿಹಾಸಿಕ ದಾಖಲೆಯೊಂದು ಕೊಹ್ಲಿ ತೆಕ್ಕೆಗೆ
ಬೆಂಗಳೂರು: ಇದೇ ಮಾ.28ರಿಂದ ಆರಂಭವಾಗಲಿರುವ ಐಪಿಎಲ್​ 19ನೇ ಆವೃತ್ತಿಗೆ ಅದಾಗಲೇ ದಿನಗಣನೆ ಶುರುವಾಗಿದೆ. ಈ ನಿಟ್ಟಿನಲ್ಲಿ, 10 ತಂಡಗಳು ಕೂಡ ಮೈದಾನದಲ್ಲಿ ಭರ್ಜರಿ ತಯಾರಿ ನಡೆಸುತ್ತಿವೆ. ಕಳೆದ ವರ್ಷ ತಮ್ಮ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ಕ್ರಿಕೆಟ್​ ಅಭಿಮಾನಿಗಳ ನೆಚ್ಚಿನ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್​ರೈಸರ್ಸ್​ ಹೈದರಾಬಾದ್​ ಎದುರು ಕಿಕ್​ಸ್ಟಾರ್​ ಪಂದ್ಯವನ್ನಾಡಲಿದೆ. ಐಪಿಎಲ್​ 2026ರ ಮೊದಲ ಪಂದ್ಯಕ್ಕೆ ಕ್ರಿಕೆಟ್​ ಅಭಿಮಾನಿಗಳು ತೀವ್ರ ಕಾತರದಿಂದ ಕಾಯತೊಡಗಿದ್ದು, ವಿರಾಟ್​ರ ಐತಿಹಾಸಿಕ ದಾಖಲೆ ಬಗ್ಗೆಯೂ ಕುತೂಹಲ ವ್ಯಕ್ತಪಡಿಸಿದ್ದಾರೆ.      

339 ರನ್ ಬೇಕಷ್ಟೇ

'ದಾಖಲೆಗಳ ಸರದಾರ', 'ರನ್​ಮಷಿನ್'​, ಅಭಿಮಾನಿಗಳ ನೆಚ್ಚಿನ 'ಕಿಂಗ್​', ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡಲು ಆರ್​ಸಿಬಿ ಹಾಗೂ ಇತರೆ ಫ್ರಾಂಚೈಸಿಯ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಇದರೊಂದಿಗೆ ಅವರ ಅಪರೂಪದ ದಾಖಲೆ ಈ ಆವೃತ್ತಿಯಲ್ಲೇ ಈಡೇರಲಿ ಎಂದು ಆಶಿಸಿದ್ದಾರೆ. ಇನ್ನೂ 339 ರನ್ ಗಳಿಸಿದರೆ, ವಿರಾಟ್​ ಐಪಿಎಲ್‌ನಲ್ಲಿ 9,000 ರನ್‌ಗಳ ಮೈಲಿಗಲ್ಲನ್ನು ತಲುಪುತ್ತಾರೆ. ಈ ಗೌರವವನ್ನು ಸಾಧಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆಯಲಿದ್ದಾರೆ. 

19 ವರ್ಷ, ಒಂದೇ ಫ್ರಾಂಚೈಸಿ

2008ರಲ್ಲಿ ಐಪಿಎಲ್​ನಲ್ಲಿ ಅದು ಒಂದೇ ತಂಡದ ಪರ ಆಡುತ್ತಿರುವ ವಿರಾಟ್​ ಕೊಹ್ಲಿ, 18 ವರ್ಷಗಳ ಬಳಿಕ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟರು. ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಪರ ಹಾಗೂ ಸೀಸನ್​ ಪೂರ ಅತ್ಯಧಿಕ ರನ್ ಕಲೆಹಾಕುವಲ್ಲಿ ಕೊಹ್ಲಿ ಮುಂಚೂಣಿಯಲ್ಲಿದ್ದರು. ಇಲ್ಲಿಯವರೆಗೆ, ಕೊಹ್ಲಿ 267 ಐಪಿಎಲ್ ಪಂದ್ಯಗಳನ್ನು ಆಡಿದ್ದು, 39.5 ಸರಾಸರಿ ಮತ್ತು 132.86 ಸ್ಟ್ರೈಕ್ ರೇಟ್‌ನಲ್ಲಿ 8,661 ರನ್ ದಾಖಲಿಸಿದ್ದಾರೆ. ಇದರಲ್ಲಿ 8 ಶತಕ ಮತ್ತು 63 ಅರ್ಧಶತಕಗಳು ಸೇರಿವೆ. ಅವರ ಅತ್ಯಧಿಕ ಸ್ಕೋರ್ 113 ರನ್‌ ಎಂಬುದು ಗಮನಾರ್ಹ. 

ಕಳೆದ 3 ಸೀಸನ್​

ಕಳೆದ ಮೂರು ಸೀಸನ್​ನಲ್ಲಿ ವಿರಾಟ್ ಕೊಹ್ಲಿ ಅವರ ಸರಾಸರಿ 53ಕ್ಕಿಂತ ಅಧಿಕವಿದೆ. 2023ರಲ್ಲಿ 53.25 ಸರಾಸರಿಯಲ್ಲಿ 639 ರನ್, 2024ರಲ್ಲಿ 61.75 ಸರಾಸರಿಯಲ್ಲಿ 741 ರನ್ ಮತ್ತು 2025ರಲ್ಲಿ 54.75 ಸರಾಸರಿಯಲ್ಲಿ 657 ರನ್ ಗಳಿಸಿದ್ದಾರೆ. ಇದನ್ನೆಲ್ಲ ಒಮ್ಮೆ ಗಮನಿಸಿ ನೋಡಿದರೆ, ಈ ಆವೃತ್ತಿ ಮುಗಿಯುವುದರೊಳಗೆ ಕೊಹ್ಲಿ 9,000 ರನ್ ಮೈಲಿಗಲ್ಲನ್ನು ಬಹಳ ಸುಲಭವಾಗಿ ಹಾಗೂ ವೇಗವಾಗಿ ತಲುಪುತ್ತಾರೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಇದಕ್ಕೆ ಹೇಳೋದು ಕೊಹ್ಲಿಗೆ ಸರಿಸಾಟಿ ಮತ್ತೊಬ್ಬರಿಲ್ಲ. 'ಕಿಂಗ್'​ ಅಂತ ಸುಮ್ಮನೆ ಕರೆಯೋದಿಲ್ಲ ಅಂತ,(ಏಜೆನ್ಸೀಸ್).