- ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ?
- ಟಿ20, ಏಕದಿನ ಫಾರ್ಮೆಟ್ಗಳಲ್ಲಿ ವೈಭವ್ ಯಶಸ್ವಿ, ಟೆಸ್ಟ್ ಕ್ರಿಕೆಟ್?
- ಟೆಸ್ಟ್ ಕ್ರಿಕೆಟ್‌ನಲ್ಲಿ ವೈಭವ್ ಯಶಸ್ಸಿನ ಬಗ್ಗೆ ಮಾಜಿ ಕ್ರಿಕೆಟಿಗ ಪ್ರತಿಕ್ರಿಯೆ
ಲಂಡನ್: ಪ್ರಸಕ್ತ ಬೆಲ್ಫಾಸ್ಟ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಪಡೆ ಮೊದಲ ಪಂದ್ಯದಲ್ಲೇ ಭಾರಿ ಮುಖಭಂಗ ಅನುಭವಿಸಿತು. ಆಲ್ಔಟ್ ಆದ ಟೀಮ್ ಇಂಡಿಯಾ ಪರ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕಣಕ್ಕಿಳಿಯದೆ ಹೋಗಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮಧ್ಯೆ, ವೈಭವ್ ಸಾಮರ್ಥ್ಯ ಕುರಿತಾಗಿ ಪ್ರಶ್ನೆಯೊಂದು ಕೇಳಿಬಂದಿದೆ.
15 ವರ್ಷಕ್ಕೆ ಅಂತಾರಾಷ್ಟ್ರೀಯ ಮತ್ತು ಅನುಭವಿ ಬೌಲರ್ಗಳ ಬೆವರಿಳಿಸುತ್ತಿರುವ ವೈಭವ್ ಸೂರ್ಯವಂಶಿ ಆಟಕ್ಕೆ ಮಾಜಿ ಹಿರಿಯ ಕ್ರಿಕೆಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಐಪಿಎಲ್ ಮತ್ತು ಟಿ20 ಪಂದ್ಯಗಳಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡುತ್ತಿರುವ ಸೂರ್ಯವಂಶಿ, ಮೈದಾನದ ತುಂಬ ಸಿಕ್ಸರ್ಗಳನ್ನು ಸಿಡಿಸುವ ಶೈಲಿಯಂತು ಪಂದ್ಯದ ರೋಚಕತೆಯನ್ನು ಡಬಲ್ ಆಗಿಸುತ್ತದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ವೈಭವ್ಗೆ ಟೆಸ್ಟ್ ಕ್ರಿಕೆಟ್ ಆಡಲು ಸಾಧ್ಯವೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಮುಂದಿನ ಪಂದ್ಯದಲ್ಲಿ ಅವಕಾಶ
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ತಂಡದೊಂದಿಗೆ ಪ್ರಸ್ತುತ ಬ್ರಿಟನ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಆಯ್ಕೆ ಸಮಿತಿಯ ಅಧ್ಯಕ್ಷ ದಿಲೀಪ್ ವೆಂಗ್‌ಸರ್ಕರ್ ಮಾತನಾಡಿ, ಯುವ ಬ್ಯಾಟರ್ನನ್ನು ಹಾಡಿ ಹೊಗಳಿದ್ದಾರೆ. ವೈಭವ್ ಅವರ ಅದ್ಭುತ 'ಹ್ಯಾಂಡ್-ಐ ಕೋ ಆರ್ಡಿನೇಷನ್ ಮತ್ತು ಅದ್ಭುತ ಶಾಟ್‌ಗಳನ್ನು ಆಡುವ ಸಾಮರ್ಥ್ಯ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ ಎಂದರು.
ತಮಗೆ ಸಿಕ್ಕ ಅವಕಾಶಗಳನ್ನು ಬಿಡೋದಿಲ್ಲ. ಐರ್ಲೆಂಡ್ ವಿರುದ್ಧದ ಮುಂದಿನ ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಗುವ ಸಂಪೂರ್ಣ ವಿಶ್ವಾಸವಿದೆ. ವೈಭವ್ ಊಹೆಗೂ ಮೀರಿದ ಆಟಗಾರ. ಅವರಲ್ಲಿ ಅಪಾರ ಸಾಮರ್ಥ್ಯವಿದೆ. ಅವರು ಹೊಡೆಯುವ ಕೆಲವು ಕ್ರಿಕೆಟಿಂಗ್ ಶಾಟ್‌ಗಳಂತು ನಿಜಕ್ಕೂ ನಂಬಲು ಸಾಧ್ಯವೇ ಆಗುವುದಿಲ್ಲ. ಅವರ ಬ್ಯಾಟಿಂಗ್ ಶೈಲಿಯೇ ವಿಭಿನ್ನ ಎಂದು ಹೇಳಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಸಕ್ಸಸ್ ಸಾಧ್ಯವೇ?
ಟೆಸ್ಟ್ ಅಥವಾ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ವೈಭವ್ ಯಶಸ್ಸು ಗಳಿಸಲು ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿದ ವೆಂಗ್‌ಸರ್ಕರ್, ಈಗಲೇ ಅದನ್ನು ಹೇಳುವುದು ಕಷ್ಟಸಾಧ್ಯ. ಸದ್ಯಕ್ಕೆ ನಾನು ಅವರನ್ನು ಕೇವಲ ಟಿ20 ಮಾದರಿಯಲ್ಲಿ ಮಾತ್ರ ನೋಡಿದ್ದೇನೆ. ಉಳಿದ ಫಾರ್ಮೆಟ್ಗಳಲ್ಲಿ ಆಡುವುದನ್ನು ಇನ್ನೂ ನೋಡಿಲ್ಲ. ಆದರೆ, ಒಂದಂತು ಖಚಿತವಾಗಿ ಹೇಳಬಲ್ಲೆ. ಅವಕಾಶ ಸಿಕ್ಕರೆ ಖಂಡಿತ ಅಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಂಬಿಕೆ ನನಗೆ ಗಟ್ಟಿಯಾಗಿದೆ ಎಂದರು,(ಏಜೆನ್ಸೀಸ್).