ಸಂಜು ಸ್ಯಾಮ್ಸನ್ ಮತ್ತು ಅವರ ಪತ್ನಿ ಚಾರುಲತಾ ರಮೇಶ್
- ಸಂಜು ಸ್ಯಾಮ್ಸನ್ ಮೇಲೆ ಸದ್ಯ ಕ್ರಿಕೆಟ್ ಪ್ರಿಯರ ನಿರೀಕ್ಷೆಗಳು ದುಪ್ಪಟ್ಟು
- ಟೀಕೆ, ವ್ಯಂಗ್ಯಗಳ ನಡುವೆಯೂ ಸ್ಯಾಮ್ಸನ್ ಅದ್ಭುತ ಇನ್ನಿಂಗ್ಸ್ ಮೂಲಕ ಕಮ್ಬ್ಯಾಕ್
- ಸಂಜು ಕಮ್ಬ್ಯಾಕ್ ಹಿಂದಿರುವ ನಾರಿಶಕ್ತಿಯೇ ಇವರು
Sanju Samson : ಇದೇ ಭಾನುವಾರ (ಫೆ.08) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ನ ಫೈನಲ್ ಪಂದ್ಯದ ಮೇಲೆ ಕ್ರಿಕೆಟ್ ಪ್ರಿಯರ ಚಿತ್ತ ಮೂಡಿದೆ. ಸತತ ಎರಡನೇ ಬಾರಿ ಭಾರತ ವಿಶ್ವಕಪ್ ಟ್ರೋಫಿ ಗೆಲ್ಲಲಿ ಎಂಬುದು ಕೋಟ್ಯಂತರ ಭಾರತೀಯರ ಮಹದಾಸೆಯಾಗಿದೆ. ಇದರ ನಡುವೆ ಇಂಗ್ಲೆಂಡ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ ಮೇಲೆ ಸದ್ಯ ಕ್ರಿಕೆಟ್ ಪ್ರಿಯರ ನಿರೀಕ್ಷೆಗಳು ದುಪ್ಪಟ್ಟಾಗಿವೆ.
ವೆಸ್ಟ್ ಇಂಡೀಸ್ ವಿರುದ್ಧ 97 ರನ್ ಮತ್ತು ಇಂಗ್ಲೆಂಡ್ ಎದುರು 89 ರನ್ ಬಾರಿಸಿದ ಸಂಜು ಸ್ಯಾಮ್ಸನ್, ತಮ್ಮ ಬ್ಯಾಟಿಂಗ್ ವೈಖರಿಯಿಂದಲೇ ಇದೀಗ ಕ್ರಿಕೆಟ್ ಪ್ರಿಯರ ಹೃದಯ ಗೆದ್ದಿದ್ದಾರೆ. ಕ್ರೀಸ್ನಲ್ಲಿದ್ದ ಅಷ್ಟು ಸಮಯ ಕೂಡ ಬಹಳ ತಾಳ್ಮೆಯಿಂದ ಬ್ಯಾಟ್ ಮಾಡಿದ ಸಂಜು, ತಂಡದ ವಿಕೆಟ್ಗಳು ಉರುಳುತ್ತಿದ್ದರೂ ತಮ್ಮ ಇನ್ನಿಂಗ್ಸ್ ನೀಡುವುದರಲ್ಲಿ ಮಾತ್ರ ಎಲ್ಲಿಯೂ ಎಡವಲಿಲ್ಲ. ಇದು ಹಲವರ ಖುಷಿಗೆ ಬಹುಮುಖ್ಯ ಕಾರಣವಾಗಿದೆ. ಭಾರೀ ಟ್ರೋಲ್, ಟೀಕೆಗಳ ನಡುವೆಯೂ ಇಷ್ಟು ಕೂಲ್ ಆಗಿ ಬೆಸ್ಟ್ ಓಪನರ್ ಎಂದು ಗುರುತಿಸಿಕೊಳ್ಳುತ್ತಿರುವ ಸಂಜು ಸ್ಯಾಮ್ಸನ್ ಯಶಸ್ಸಿನ ಹಿಂದೆ ಅವರು ಪ್ರೀತಿಸುವ ಜೀವವೇ ದೊಡ್ಡ ಶಕ್ತಿ ಎಂಬುದು ಹಲವರಿಗೆ ಗೊತ್ತಿಲ್ಲ.
ಸಂಜು ಸ್ಯಾಮ್ಸನ್ ಒಬ್ಬ ಟೀಮ್ ಇಂಡಿಯಾದ ಬಲಿಷ್ಠ ಓಪನರ್ಗಳಲ್ಲಿ ಒಬ್ಬರು ಎಂದೇ ಪ್ರಸ್ತುತ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದಕ್ಕೆ, ಅವರ ಇತ್ತೀಚಿನ ಇನ್ನಿಂಗ್ಸ್ಗಳೇ ಜ್ವಲಂತ ಸಾಕ್ಷಿ. ಮೂಲತಃ ಕೇರಳದವರಾದ ಸಂಜು, ಹೆಚ್ಚಾಗಿ ತಮ್ಮ ಸೌಮ್ಯ, ತಾಳ್ಮೆ ಮತ್ತು ನಾಚಿಕೆ ಸ್ವಭಾವದಿಂದಲೇ ಹಲವರಿಗೆ ಚಿರಪರಿಚಿತ. ತಮ್ಮ ಕಾಲೇಜು ದಿನಗಳಿಂದಲೂ ಹೀಗೆ ಇರುವ ಸ್ಯಾಮ್ಸನ್, ತಾವು ಓದುತ್ತಿದ್ದ ಕಾಲೇಜಿನಲ್ಲೇ ವ್ಯಾಸಂಗ ಮಾಡುತ್ತಿದ್ದ ಚಾರುಲತಾ ಅವರೊಂದಿಗೆ ಸ್ನೇಹ ಬೆಳೆಸಿದರು.
ಕಾಲೇಜಿನ ಸಮಯದಲ್ಲಿ, ಸ್ನೇಹಿತರಾಗಿ ಹೆಚ್ಚು ಸಮಯ ಕಳೆದ ಚಾರು-ಸಂಜು, ಗಟ್ಟಿಯಾದ ಸಂಬಂಧವನ್ನು ಹೊಂದಿದರು. ಇಲ್ಲಿ ಸ್ಯಾಮ್ಸನ್ ಮಾತ್ರ ನಾಚಿಕೆ ಸ್ವಭಾವದರಲ್ಲ. ಚಾರುಲತಾ ಕೂಡ ತಾಳ್ಮೆ ಮತ್ತು ನಾಚಿಕೆ ಸ್ವಭಾವವುಳ್ಳವರೇ. ಹೀಗಾಗಿ, ಇಬ್ಬರೂ ತಮ್ಮ ತಮ್ಮ ಭಾವನೆಯನ್ನು ವ್ಯಕ್ತಪಡಿಸುವಲ್ಲಿ ಹಿಂದೆ ಸರಿದವರೇ. ವರ್ಷಗಳು ಉರುಳಿದಂತೆ, ಭಾರತೀಯ ಕ್ರಿಕೆಟ್ನಲ್ಲಿ ಸಂಜು ತಮ್ಮ ಹೆಸರನ್ನು ಸೇರಿಸಿದರು. 2018ರಲ್ಲಿ ಅವರ ಹೆಸರು ಟೀಮ್ ಇಂಡಿಯಾದಲ್ಲಿ ಹೆಚ್ಚು ಚಾಲ್ತಿಯಲ್ಲಿತ್ತು. ಇದೇ ಸಮಯದಲ್ಲಿ ತಮ್ಮ ಪ್ರೇಯಸಿ ಚಾರುಲತಾ ಅವರೊಂದಿಗೆ ಸಂಜು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ತೆರೆ ಮುಂದೆ ಅಷ್ಟಾಗಿ ಕಾಣಿಸಿಕೊಳ್ಳದ ಸಂಜು ಪತ್ನಿ ಚಾರುಲತಾ, ಅವರ ಪಂದ್ಯದಲ್ಲಿಯೂ ಹೆಚ್ಚಾಗಿ ಸ್ಟೇಡಿಯಂಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ತೆರೆ ಹಿಂದೆಯೇ ಪತಿಗೆ ಧೈರ್ಯ ಹೇಳುವ ಚಾರುಲತಾ ಸ್ಯಾಮ್ಸನ್, ಸಂಜು ಸೋತಾಗ, ಫ್ಲಾಪ್ ಆದಾಗ ಅವರ ಬೆನ್ನಿಗೆ ನಿಂತು ಧೈರ್ಯ ಹೇಳುತ್ತಾರೆ. ಪ್ರತಿ ಹಂತದಲ್ಲೂ ಗಂಡನಿಗೆ ಸಾಥ್ ನೀಡಿ, ಮುಂದಿನ ಪಂದ್ಯಗಳಲ್ಲಿಯೂ ಇದೇ ತಾಳ್ಮೆ ಮತ್ತು ಫೋಕಸ್ ಆಗಿರುವಂತೆ ತಿಳಿಸುವುದು ವಿಶೇಷ. ಇದೆಲ್ಲದಕ್ಕೂ ಮೊದಲು ಭಾರೀ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದ್ದ ಸಂಜು, ಅದ್ಯಾವುದಕ್ಕೂ ಕುಗ್ಗದೆ, ಬಗ್ಗದೆ ಇಂದು ತಮ್ಮ ಅಮೋಘ ಪ್ರದರ್ಶನವನ್ನು ನೀಡಿರುವುದರ ಹಿಂದೆ ಅವರ ಪತ್ನಿಯ ಕೊಡುಗೆಯು ಇದೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).