ಪಾಕಿಗಳಿಗೆ ಭಯ ಹುಟ್ಟಿಸಿದ ವಿನಾಶಾಕಾರಿ ಬ್ಯಾಟರ್​ 
ಕ್ರಿಕೆಟ್

ಈಗಲೇ ಇಷ್ಟೊಂದು ಹುಡುಕೋದಾ? ಇನ್ನು ಬಾಕಿ ಇದೆ... ಪಾಕಿಗಳಿಗೆ ಭಯ ಹುಟ್ಟಿಸಿದ ವಿನಾಶಕಾರಿ ಬ್ಯಾಟರ್​! Pakistan

ಪ್ರಮುಖ ಮುಖ್ಯಾಂಶಗಳು

  • ವಿರಾಟ್ ಕೊಹ್ಲಿಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ
  • 2025ರಲ್ಲಿ ಗೂಗಲ್‌ನಲ್ಲಿ ಪಾಕಿಸ್ತಾನದ ಜನರು ಹೆಚ್ಚು ಹುಡುಕಿದ ಕ್ರಿಕೆಟಿಗರಲ್ಲಿ ಕೊಹ್ಲಿ ಹೆಸರಿಲ್ಲ
  • ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರನನ್ನು ಪಾಕಿಸ್ತಾನಿಯರು ಹೆಚ್ಚು ಹುಡುಕಾಡಿದ್ದಾರೆ
ಪಾಕಿಸ್ತಾನ: ಪ್ರಸ್ತುತ ಟೀಮ್​ ಇಂಡಿಯಾದಲ್ಲಿ ವಿನಾಶಕಾರಿ ಬ್ಯಾಟ್ಸ್​ಮನ್​ ಯಾರೆಂದು ಪ್ರಶ್ನೆ ಮಾಡಿದರೆ ಥಟ್ಟನೆ ನೆನಪಿಗೆ ಬರುವ ಉತ್ತರವೆಂದರೆ ಅಭಿಷೇಕ್​ ಶರ್ಮ. ತಮ್ಮ ವಿಧ್ವಂಸಕ ಬ್ಯಾಟಿಂಗ್​ನಿಂದಾಗಿ ಎದುರಾಳಿ ಬೌಲರ್​ಗಳ ಎದೆಯಲ್ಲಿ ನಡುಕು ಹುಟ್ಟಿಸಿರುವ ಅಭಿಷೇಕ್​, ಪ್ರಸ್ತುತ ಭಾರತದ ಟಿ20 ಸ್ಪೆಷಲಿಸ್ಟ್​. ಮೈದಾನಕ್ಕೆ ಇಳಿದು ಕ್ರೀಸ್​ನಲ್ಲಿ ನಿಂತರೆ ಮೊದಲ ಎಸೆತದಿಂದಲೇ ಅಬ್ಬರಿಸಿ, ಬೊಬ್ಬರಿಯುವ ಅಭಿಷೇಕ್​, ಅನೇಕ ದಾಖಲೆಗಳನ್ನು ತಮ್ಮ ಬತ್ತಳಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಈ ಅಭಿಷೇಕ್​, ಮಾಜಿ ಸ್ಫೋಟಕ ಆಟಗಾರ ಯುವರಾಜ್​ ಸಿಂಗ್​ ಅವರ ಶಿಷ್ಯ ಎಂಬುದು ಗಮನಾರ್ಹ ಸಂಗತಿ. ಅಷ್ಟಕ್ಕೂ ಈಗ್ಯಾಕೆ ಅಭಿಷೇಕ್​ ಶರ್ಮಾ ವಿಚಾರ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರವೂ ಇದೆ. ಪಾಕಿಸ್ತಾನದವರಿಗೆ ( Pakistan ) ಅಭಿಷೇಕ್​ ಶರ್ಮ ಹೆಸರು ಇದೀಗ ದುಸ್ವಪ್ನವಾಗಿ ಕಾಡುತ್ತಿದೆ.
ಅಂದಹಾಗೆ, 2025ನೇ ವರ್ಷಕ್ಕೆ ಗುಡ್​ ಬೈ ಹೇಳುವ ಸಮಯ ಹತ್ತಿರ ಬರುತ್ತಿದೆ. ಹಾಗೇ ಇನ್ನು ಕೆಲವೇ ದಿನಗಳಲ್ಲಿ 2026ನೇ ಹೊಸ ವರ್ಷವನ್ನು ಈ ಜಗತ್ತು ಸ್ವಾಗತಿಸಲಿದೆ. ಅದಕ್ಕೂ ಮುನ್ನ ಹಳೆಯ ಘಟನೆಗಳನ್ನು ಮೆಲುಕು ಹಾಕುವ ಸಮಯ ಇದಾಗಿದೆ. ಈ ವರ್ಷ ಅನೇಕ ಯುವ ಕ್ರೀಡಾಪಟುಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಯುವ ಕ್ರಿಕೆಟಿಗರು ಅಂದಮೇಲೆ ಅವರ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದಿರುವುದಿಲ್ಲ. ಹೀಗಾಗಿ ಅವರ ಬಗ್ಗೆ ತಿಳಿದುಕೊಳ್ಳಲು ಸಹಜವಾಗಿ ಗೂಗಲ್‌ ಮಾಡುತ್ತಾರೆ. 
ನೆರೆಯ ಪಾಕಿಸ್ತಾನದಲ್ಲಿ ಯಾವ ಕ್ರೀಡಾಪಟುವನ್ನು ಹೆಚ್ಚು ಗೂಗಲ್‌ ಸರ್ಚ್​ ಮಾಡಲಾಗಿದೆ ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ರನ್ ಮೆಷಿನ್​, ದಾಖಲೆಗಳ ಸರದಾರ ಹಾಗೂ ಕ್ರಿಕೆಟ್​ ಲೋಕದ ಅಧಿಪತಿ ವಿರಾಟ್ ಕೊಹ್ಲಿಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಕೊಹ್ಲಿ, ಪಾಕಿಸ್ತಾನದಲ್ಲಿ ಎಂದಿಗೂ ಆಡಿಲ್ಲದಿದ್ದರೂ, ಆ ದೇಶದಲ್ಲಿ ಕೊಹ್ಲಿಯನ್ನು ಆರಾಧಿಸುವ ಅನೇಕ ಅಭಿಮಾನಿಗಳಿದ್ದಾರೆ. 
ಆದಾಗ್ಯೂ, 2025ರಲ್ಲಿ ಗೂಗಲ್‌ನಲ್ಲಿ ಪಾಕಿಸ್ತಾನದ ಜನರು ಹೆಚ್ಚು ಹುಡುಕಿದ ಕ್ರಿಕೆಟಿಗರಲ್ಲಿ ಕೊಹ್ಲಿ ಅಥವಾ ತಮ್ಮ ದೇಶದ ಸ್ಟಾರ್ ಆಟಗಾರರಾದ ಬಾಬರ್ ಅಜಮ್, ಶಾಹೀನ್ ಅಫ್ರಿದಿ ಮತ್ತು ರಿಜ್ವಾನ್ ಹೆಸರು ಇಲ್ಲದೇ ಇರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಬದಲಾಗಿ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಬಗ್ಗೆ ಪಾಕಿಸ್ತಾನಿಯರು ಹೆಚ್ಚು ಹುಡುಕಾಡಿದ್ದಾರೆ.

ಈ ವರ್ಷ ಪಾಕಿಸ್ತಾನದಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಕ್ರೀಡಾಪಟುಗಳ ಪಟ್ಟಿ

* ಅಭಿಷೇಕ್ ಶರ್ಮ
* ಹಸನ್ ನವಾಜ್
* ಇರ್ಫಾನ್ ಖಾನ್ ನಿಯಾಜಿ
* ಸಾಹಿಬ್‌ಜಾದಾ ಫರ್ಹಾನ್
* ಮುಹಮ್ಮದ್ ಅಬ್ಬಾಸ್
ಹಸನ್ ನವಾಜ್, ಇರ್ಫಾನ್ ಖಾನ್ ನಿಯಾಜಿ, ಸಾಹಿಬ್‌ಜಾದಾ ಫರ್ಹಾನ್ ಮತ್ತು ಮುಹಮ್ಮದ್ ಅಬ್ಬಾಸ್‌ರಂತಹ ಯುವ ಆಟಗಾರರಿಗಾಗಿ ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಹುಡುಕಾಡಿದ್ದಾರೆ.
ಈ ವರ್ಷ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ 2025ರಲ್ಲಿ ನಾಲ್ಕು ಬಾರಿ ಪರಸ್ಪರ ಮುಖಾಮುಖಿಯಾದವು. ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಓಪನರ್ ಅಭಿಷೇಕ್ ಶರ್ಮ ಏಷ್ಯಾ ಕಪ್ 2025ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಒಂದು ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ 31 ರನ್ ಮತ್ತು ಇನ್ನೊಂದು ಪಂದ್ಯದಲ್ಲಿ 39 ಎಸೆತಗಳಲ್ಲಿ 74 ರನ್ ಗಳಿಸಿದರು. ಈ ಒಂದು ಇನ್ನಿಂಗ್ಸ್​, ಅವರ ಹೆಸರನ್ನು ಪಾಕಿಸ್ತಾನದಲ್ಲಿ ಮನೆಮಾತನ್ನಾಗಿ ಮಾಡಿದೆ. ಅವರ ಬಗ್ಗೆ ತಿಳಿದುಕೊಳ್ಳಲು ಪಾಕಿಸ್ತಾನಿಯತು ತುಂಬಾ ಹುಡುಕಾಡಿದ್ದಾರೆ.
ಅಂದಹಾಗೆ, 2025ರ ಏಷ್ಯಾ ಕಪ್‌ನಲ್ಲಿ, ಅಭಿಷೇಕ್ ಶರ್ಮ ಅವರು 44.85ರ ಸರಾಸರಿಯಲ್ಲಿ ಮತ್ತು 200ರ ಸ್ಟ್ರೈಕ್ ರೇಟ್‌ನಲ್ಲಿ 314 ರನ್ ಗಳಿಸಿದರು. ಇದರಿಂದ ಅಭಿಷೇಕ್​ ಅವರಿಗೆ ಸರಣಿ ಆಟಗಾರ ಪ್ರಶಸ್ತಿ ಲಭಿಸಿತು, (ಏಜೆನ್ಸೀಸ್​).