- ಐಪಿಎಲ್ ಪಂದ್ಯದಲ್ಲಿ ಸಾಕ್ಷಿ ಧೋನಿ ಧರಿಸಿದ್ದ ವಾಚ್ ಹೈಲೈಟ್
- ನೆಟ್ಟಿಗರ ಹುಬ್ಬೇರಿಸಿದ ಈ ಸ್ಫೋರ್ಟ್ಸ್ ವಾಚ್ ಬೆಲೆ
Sakshi Dhoni: ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಸೋಲಿನ ಹಾದಿ ಹಿಡಿದಿರುವ ಚೆನ್ನೈ ಸೂಪರ್ ಕಿಂಗ್ಸ್, ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಲು ಹೆಣಗಾಡುತ್ತಿದೆ. ಮತ್ತೊಂದೆಡೆ, ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿ ಕ್ರಿಕೆಟ್ ಪ್ರೇಮಿಗಳ ನಿರಾಶೆ, ಬೇಸರಕ್ಕೆ ಕಾರಣವಾಗಿದೆ. ಈ ಮಧ್ಯೆ, ಇತ್ತೀಚೆಗಷ್ಟೇ ಮುಂಬೈನಲ್ಲಿ ಐಪಿಎಲ್ ಪಂದ್ಯ ನೋಡಲು ಬಂದಿದ್ದ ಧೋನಿ ಪತ್ನಿ ಸಾಕ್ಷಿ, ತಾವು ಧರಿಸಿದ್ದ ಆಕರ್ಷಕ ಸ್ಪೋರ್ಟ್ಸ್ ವಾಚ್ ಮೂಲಕ ಸದ್ಯ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಏ.23ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಎಂದಿನಂತೆ ಫ್ರಾಂಚೈಸಿ ಆಟಗಾರರನ್ನು ಪ್ರೋತ್ಸಾಹಿಸಲು ಸಾಕ್ಷಿ ಆಗಮಿಸಿದ್ದರು. ಈ ವೇಳೆ, ಅವರು ಧರಿಸಿದ್ದ ವಿಶೇಷ ಹಾಗೂ ಆಕರ್ಷಕ ಹಸಿರು ಬಣ್ಣದ ವಾಚ್ವೊಂದು ನೆಟ್ಟಿಗರ ಕಣ್ಣಿಗೆ ಬಿದ್ದಿತು. ಸಾಕ್ಷಿಯ ಎಡಗೈಯಲ್ಲಿದ್ದ ಸ್ಫೋರ್ಟ್ಸ್ ವಾಚ್ ಯಾವುದು? ಅದರ ಬೆಲೆ ಎಷ್ಟಿರಬಹುದು? ನೋಡಲು ಸಿಂಪಲ್ ಆಗಿದ್ದರೂ ಇದರ ವಿಶೇಷತೆ ಏನಿರಬಹುದು? ಎಂಬ ಕುತೂಹಲ ಹಲವರಿಗೆ ಕಾಡಿತು.
ರಿಚರ್ಡ್ ಮಿಲ್ಲೆ ಕಂಪನಿಯ ವಾಚ್ ಇದಾಗಿದ್ದು, ಇದರ ಬೆಲೆ ಬರೋಬ್ಬರಿ 3.1 ಕೋಟಿ ರೂ. ಎನ್ನಲಾಗಿದೆ. ರಿಚರ್ಡ್ ಮಿಲ್ಲೆ ಆರ್‌ಎಂ 67-02 ವೇಡ್ ವ್ಯಾನ್ ನೀಕೆರ್ಕ್ ಎಂಬ ಅಲ್ಟ್ರಾ ಮಣಿಕಟ್ಟಿನ ವಾಚ್ ಇದು. ಈ ಒಂದು ಸ್ಪೆಷಲ್ ಡಿಸೈನ್ ಹೊಂದಿರುವ ಗಡಿಯಾರ, ದಕ್ಷಿಣ ಆಫ್ರಿಕಾದ ಒಲಿಂಪಿಕ್ ಚಿನ್ನದ ಪದಕ ವಿಜೇತ ಮತ್ತು 400 ಮೀಟರ್ ವಿಶ್ವ ದಾಖಲೆ ಹೊಂದಿರುವ ವೇಡ್ ವ್ಯಾನ್ ನೀಕೆರ್ಕ್ ಅವರ ಗೌರವಾರ್ಥವಾಗಿ ವಿನ್ಯಾಸಗೊಳಿಸಲಾದ ಅತ್ಯಂತ ಹಗುರವಾದ ಆಟೋಮೆಟಿಕ್ ಸ್ಪೋರ್ಟ್ಸ್ ವಾಚ್ ಆಗಿದೆ.
ಇದು ಕಾರ್ಬನ್ ಟಿಪಿಟಿ ಮತ್ತು ಕ್ವಾರ್ಟ್ಜ್ ಟಿಪಿಟಿ ವಸ್ತುಗಳಿಂದ ಮಾಡಲ್ಪಟ್ಟಿದೆ. ವಿಶೇಷವಾಗಿ ಈ ವಾಚ್ಗಳು ಹಸಿರು ಮತ್ತು ಹಳದಿ ಬಣ್ಣಗಳಲ್ಲಿ ಲಭ್ಯವಿದೆ. ಕಾರಣ, ದಕ್ಷಿಣ ಆಫ್ರಿಕಾದ ಧ್ವಜದ ಕಲರ್ಗಳನ್ನು ಸಂಕೇತಿಸಲು ಬಳಸಲಾಗಿದೆ. ಈ ಒಂದು ವಾಚ್ ಲೈಟ್ ವೇಟ್ ಮತ್ತು ಶಾಕ್ ಪ್ರೂಫ್ ಆಗಿದೆ. ಹೀಗಾಗಿಯೇ, ಇದನ್ನು ಹೆಚ್ಚಾಗಿ ಕ್ರೀಡಾಪಟುಗಳು ಧರಿಸುತ್ತಾರೆ,(ಏಜೆನ್ಸೀಸ್).