ವೈಭವ್ ಸೂರ್ಯವಂಶಿ ಮತ್ತು ವಿರಾಟ್ ಕೊಹ್ಲಿ
- ಶ್ರೀಲಂಕಾ ಆಟಗಾರನ ಜೊತೆ ವೈಭವ್ ಸೂರ್ಯವಂಶಿ ನೂಕಾಟ
- ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಕೊಟ್ಟ ಸಲಹೆ ಮರೆತ್ರಾ ವಂಡರ್ ಕಿಂಡ್?
Vaibhav Sooryavanshi: ಎರಡು ವಾರಗಳ ಹಿಂದೆಯಷ್ಟೇ ಮುಕ್ತಾಯಗೊಂಡ ಐಪಿಎಲ್ 19ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಹಮದಾಬಾದ್‌ನಲ್ಲಿ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿಯಿತು. ಇದೇ ಸಂದರ್ಭದಲ್ಲಿ, ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ, 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಭುಜದ ಮೇಲೆ ಕೈ ಹಾಕಿಕೊಂಡು ಒಂದು ಮಹತ್ವದ ಕಿವಿಮಾತು ನೀಡಿದ್ದರು. ಅದೀಗ, ಮತ್ತೆ ಮುನ್ನೆಲೆಗೆ ಬಂದಿದೆ.
ಸ್ಫೋಟಕ ಬ್ಯಾಟಿಂಗ್ ಮತ್ತು ಉತ್ತಮ ಕೌಶಲ್ಯವನ್ನು ಹೊಂದಿರುವ ವೈಭವ್ರನ್ನು ಬಹಳ ಆತ್ಮೀಯತೆಯಿಂದ ಮಾತನಾಡಿಸಿದ ವಿರಾಟ್ ಕೊಹ್ಲಿ, ಬೇಬಿ ಬಾಸ್ ವೃತ್ತಿಜೀವನಕ್ಕೆ ಸಹಾಯವಾಗುವಂತ ಅಮೂಲ್ಯವಾದ ಸಲಹೆಯನ್ನೇ ನೀಡಿದ್ದರು. "ಯಾರೋ ಏನೋ ಮಾತಾಡುತ್ತಿದ್ದಾರೆ, ಏನೇನೋ ಹೇಳುತ್ತಿದ್ದಾರೆ, ಅವರು ಯಾಕಿಂತ ಮಾತುಗಳನ್ನಾಡುತ್ತಿದ್ದಾರೆ ಎಂದೆಲ್ಲ ತಲೆಕೆಡಿಸಿಕೊಳ್ಳಬೇಡ. ಆಟದ ಮೇಲೆ ಮಾತ್ರ ನಿನ್ನ ಗಮನವಿರಲಿ ಎಂದು ತಿಳಿಸಿದ್ದರು. ಆದರೆ, ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ 'ಎ' ತಂಡದ ಆಟಗಾರ ಜೊತೆ ತಳ್ಳಾಡಿದ ವೈಭವ್, ಅದ್ಯಾಕೋ ಕೊಹ್ಲಿ ಸಲಹೆಯನ್ನು ಮರೆತಂತೆ ತೋರಿದೆ.
ಸೂಪರ್ ಓವರ್ ತಲುಪಿದ ರೋಚಕ ಪಂದ್ಯದಲ್ಲಿ ಕಡೆಗೂ ಭಾರತ ಎ ತಂಡ ಸೋತಿತು. ಈ ಬೇಸರದಲ್ಲಿ ಪೆವಿಲಿಯನ್ ಕಡೆ ಹೋಗುತ್ತಿದ್ದ ವೈಭವ್ಗೆ ಲಂಕಾ ಫೀಲ್ಡರ್ ವಿಶೇನ್ ಹಲಂಬ ಹೋಗು ಮನೆಗೆ ಹೋಗು ಎಂದು ಲೇವಡಿ ಮಾಡಿದರು. ಇದರಿಂದ ಕೆರಳಿದ ಸೂರ್ಯವಂಶಿ, ಆತನೊಂದಿಗೆ ವಾಗ್ವಾದಕ್ಕಿಳಿದು, ಪರಸ್ಪರ ತಳ್ಳಾಡಿದರು. ಈ ಘಟನೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ತಿರುಗಿದ್ದು, ಅನೇಕರು ಶ್ರೀಲಂಕನ್ ವಿರುದ್ಧ ಕಿಡಿಕಾರಿದ್ದಾರೆ.
ವೈಭವ್ ಮೈದಾನದಲ್ಲಿ ಈ ರೀತಿ ವರ್ತಿಸಿದ್ದು ಇದೇ ಮೊದಲಲ್ಲ. ಡಿಸೆಂಬರ್ 2025ರಲ್ಲಿ ದುಬೈನಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ, ವೈಭವ್ರನ್ನು ಪಾಕಿಸ್ತಾನಿ ವೇಗಿ ಅಲಿ ರಜಾ ಔಟ್ ಮಾಡಿ ಏನೋ ಹೇಳಿದಾಗ, ವೈಭವ್ ತಿರುಗಿ ತಮ್ಮ ಶೂ ತೋರಿಸುವ ಮೂಲಕ ನೀವೆಲ್ಲ ಇಲ್ಲಿಗೆ ಸಮಾನ ಎಂಬ ಖಡಕ್ ಉತ್ತರ ನೀಡಿದರು. ಆ ವಿಡಿಯೊ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ, ವೈರಲ್ಗೂ ಕಾರಣವಾಯಿತು.
ತಮ್ಮ ಕರಿಯರ್ ಆರಂಭದಲ್ಲಿ ವಿರಾಟ್ ಕೊಹ್ಲಿ ಕೂಡ ಇದೇ ರೀತಿ ಎದುರಾಳಿ ತಂಡದವರ ವಿರುದ್ಧ ಏಕಾಏಕಿ ಸಿಡಿಮಿಡಿಗೊಳ್ಳುತ್ತಿದ್ದರು. ಅದೇ ಯಾರೇ ಆಗಿರಲಿ, ಎಂಥ ದೈತ್ಯನೇ ಇರಲಿ, ಅಲ್ಲಿಂದ ಅಲ್ಲೇ ಕೌಂಟರ್ಗಳನ್ನು ವಿರಾಟ್ ನೀಡುತ್ತಿದ್ದರು. ತದನಂತರ ಇದನ್ನು ತಮ್ಮ ಬ್ಯಾಟ್ ಮೂಲಕ ತೋರಿಸಲು ಮುಂದಾದ ಕೊಹ್ಲಿ, ತಮ್ಮನ್ನು ಕೆಣಕಿದವರಿಗೆ ಬ್ಯಾಟ್ನಿಂದಲೇ ಉತ್ತರಿಸಲು ಪ್ರಾರಂಭಿಸಿದರು. ಅದೇ ಇಂದು ಅವರಿಗೆ ದೊಡ್ಡ ಅಭಿಮಾನಿಗಳ ಬಳಗವನ್ನು ನೀಡಿದೆ. ಸದ್ಯ ವೈಭವ್ರನ್ನು ನೋಡಿದಾಗ, ಜೂನಿಯರ್ ಕೊಹ್ಲಿಯಂತೆ ಕಾಣಿಸುತ್ತಿದ್ದಾರೆ. ಜಗಳದಲ್ಲಿ ಥೇಟ್ ವಿರಾಟ್ರನ್ನೇ ನೆನಪಿಸಿದ್ದಾರೆ ಎಂಬುದರಲ್ಲಿ ಎರಡನೇ ಮಾತಿಲ್ಲ,(ಏಜೆನ್ಸೀಸ್).