ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್​ಗೆ ಮುಳುವಾದ ರೋಹಿತ್ ಶರ್ಮ ನಿವೃತ್ತಿ ವದಂತಿ?: ವಿವಿಎಸ್ ಜತೆ ಭಿನ್ನಾಭಿಪ್ರಾಯ! 
ಕ್ರಿಕೆಟ್

ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್​ಗೆ ಮುಳುವಾದ ರೋಹಿತ್ ಶರ್ಮ ನಿವೃತ್ತಿ ವದಂತಿ?: ವಿವಿಎಸ್ ಜತೆ ಭಿನ್ನಾಭಿಪ್ರಾಯ!

ಗುರುರಾಜ್ ಬಿ.ಎಸ್
ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮ ಭವಿಷ್ಯದ ಊಹಾಪೋಹಗಳ ಜತೆಗೆ ಕ್ರೀಡಾ ಶ್ರೇಷ್ಠತಾ ಕೇಂದ್ರದ (ಸಿಒಇ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗಿನ ಸಮನ್ವಯದ ಕೊರತೆಯೇ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಅವಧಿ ವಿಸ್ತರಣೆಗೆ ಹಿನ್ನಡೆ ಎನಿಸಿದ್ದು, 2027ರ ಏಕದಿನ ವಿಶ್ವಕಪ್‌ಗೆ ಕೆಲವೇ ತಿಂಗಳು ಬಾಕಿಯಿರುವಂತೆಯೇ ಅವರ ಜತೆಗಿನ ಒಪ್ಪಂದ ಕೊನೆಗೊಳಿಸಲು ಬಿಸಿಸಿಐ ಮುಂದಾಗಿದೆ.
ಮುಂದಿನ ವರ್ಷದ ಐಸಿಸಿ ಟೂರ್ನಿವರೆಗೂ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮುಂದುವರಿಯಲು ಅಗರ್ಕರ್ ಬಯಸಿದ್ದರು. ಆದರೆ, ಇತ್ತೀಚಿನ ಸರಣಿಗಳಿಗೆ ಭಾರತ ತಂಡದ ಆಯ್ಕೆ ಸೇರಿ ಹಿರಿಯ ಆಟಗಾರ ರೋಹಿತ್ ಶರ್ಮ ಅವರ ಆಯ್ಕೆಯಲ್ಲಿನ ಗೊಂದಲ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ ರೋಹಿತ್‌ರನ್ನು ಕೈಬಿಟ್ಟು ಹೊಸ ಆಟಗಾರರಿಗೆ ಅವಕಾಶ ನೀಡಲು ಆಯ್ಕೆ ಸಮಿತಿ ತೀರ್ಮಾನಿಸಿತ್ತು. ಆಯ್ಕೆ ಸಮಿತಿ ಸದಸ್ಯ ಹಾಗೂ ಗೆಳೆಯ ಪ್ರಜ್ಞಾನ್ ಓಜಾ, ಈ ತೀರ್ಮಾನವನ್ನು ರೋಹಿತ್ ಎದುರು ಪ್ರಸ್ತಾಪಿಸಿದರು. ಆದರೆ, 2027ರ ವಿಶ್ವಕಪ್ ಆಡುವ ಗುರಿ ಹೊಂದಿರುವ ರೋಹಿತ್, ಆಯ್ಕೆ ಸಮಿತಿ ಹಿರಿಯ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಬಿಸಿಸಿಐ ಹಿರಿಯ ಅಧಿಕಾರಿಗಳ ಬಳಿ ಬೇಸರ ವ್ಯಕ್ತಪಡಿಸಿದ್ದರು.
ಇದರ, ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ರೋಹಿತ್ ನಿವೃತ್ತಿ ವಿಷಯದ ವರದಿಗಳಿಗೆ ಸ್ಪಷ್ಟನೆ ನೀಡಿದರು. ಇದಲ್ಲದೇ, ಟೀಮ್ ಇಂಡಿಯಾ ಪರ ಹಲವು ವರ್ಷ ಜತೆಯಾಗಿ ಆಡಿರುವ ವಿವಿಎಸ್ ಲಕ್ಷ್ಮಣ್ ಅವರ ಜತೆಗೂ ಗಾಯಗೊಂಡ ಆಟಗಾರರ ಕಣಕ್ಕಿಳಿಸುವ ಪಾಲಿಸಿ ಹಾಗೂ ಭಾರತ ಎ ತಂಡದ ವೇಳಾಪಟ್ಟಿ ನಿಗದಿಪಡಿಸುವ ಬಗ್ಗೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು ಎನ್ನಲಾಗಿದೆ.